ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಆಯ್ಕೆ ವಿಧಾನದಲ್ಲೇ ಲೋಪ

Last Updated 15 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಆರರಿಂದ 8ನೇ ತರಗತಿಯ ವಿಜ್ಞಾನ, ಗಣಿತ ವಿಷಯಗಳ ಶಿಕ್ಷಕ ಹುದ್ದೆಗೆ ಎಂಜಿನಿಯರಿಂಗ್ ಪದವೀಧರರಿಗೂ ಅವಕಾಶ ಕಲ್ಪಿಸುವುದಕ್ಕಾಗಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ವರದಿಯಾಗಿದೆ. ಸರ್ಕಾರ ಯಾವ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಂಡಿದೆ ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ.

ಸದ್ಯಕ್ಕೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಂದಾಜು 25,000 ಶಿಕ್ಷಕರ ಹುದ್ದೆಗಳು (ಎಲ್ಲಾ ವಿಷಯಗಳಲ್ಲಿ) ಖಾಲಿ ಇವೆ. ಮೂರು ವರ್ಷಗಳಿಂದಲೂ ಈ ಹುದ್ದೆಗಳು ಭರ್ತಿಯಾಗಿಲ್ಲ. ಗುಣಮಟ್ಟದ ಅಭ್ಯರ್ಥಿಗಳು ದೊರೆಕದೆ ಇರುವುದೇ ಇದಕ್ಕೆ ಕಾರಣ ಎಂದು ಸಬೂಬು ನೀಡುತ್ತದೆಸಾರ್ವಜನಿಕ ಶಿಕ್ಷಣ ಇಲಾಖೆ.

ಪದವಿ ಪಡೆದ ನಂತರ ಎರಡು ವರ್ಷದ ಬಿ.ಇಡಿ ತರಬೇತಿ ಮುಗಿಸಬೇಕು, ನಂತರ ಟಿಇಟಿ ಪಾಸಾಗಬೇಕು, ಬಳಿಕ ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಇಲಾಖೆ ನಿಗದಿಪಡಿಸಿದ ಕಟ್ ಆಫ್ ಅಂಕವನ್ನು ಗಳಿಸಬೇಕು ಎಂಬುದು ಶಿಕ್ಷಕ ಹುದ್ದೆ ಪಡೆಯಲು ಬೇಕಾಗಿರುವ ಅರ್ಹತೆ. ಶಿಕ್ಷಕರ ಹುದ್ದೆಗಳಿಗೆ ಈ ಪ್ರಮಾಣದ ಪ್ರವೇಶ ಪರೀಕ್ಷೆಗಳ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆಗೆ ಇಲಾಖೆ ‘ಹೌದು’ ಎಂದು ಉತ್ತರಿಸುತ್ತದೆ. ಆದರೆ ಈ ಪ್ರವೇಶ ಪರೀಕ್ಷೆಗಳಲ್ಲಿ ಒಂದು ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ಕೊಟ್ಟು ಒಂದನ್ನು ಸರಿ ಎಂದು ಆರಿಸುವ ವಿಧಾನವನ್ನು ಅನುಸರಿಸಲಾಗುತ್ತದೆ. ಶಿಕ್ಷಕನಾಗುವ ಆಕಾಂಕ್ಷೆ ಇರುವ ಅಭ್ಯರ್ಥಿಯ ಅರ್ಹತೆಯನ್ನು ಈ ವಿಧಾನದಲ್ಲಿ ಮೌಲ್ಯ ಮಾಪನ ಮಾಡಲು ಸಾಧ್ಯವೇ? ಇದು ಎಂದಿಗೂ ವೈಜ್ಞಾನಿಕವಾದ ಕ್ರಮವಲ್ಲ.

ಆಯ್ಕೆಗೆ ದೋಷಪೂರಿತ ವಿಧಾನಗಳನ್ನು ಅನುಸರಿಸಿ ಪ್ರತಿಭಾವಂತ ಶಿಕ್ಷಕರು ಸಿಗುತ್ತಿಲ್ಲ ಎನ್ನುವುದು ಶಿಕ್ಷಣ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. 10-15 ವರ್ಷಗಳ ಅನುಭವವಿರುವ ಶಿಕ್ಷಕರು ಸಿಆರ್‌ಪಿ (ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ) ಮತ್ತು ಬಿಆರ್‌ಪಿ (ಬ್ಲಾಕ್ ಹಂತದ ಸಂಪನ್ಮೂಲ ವ್ಯಕ್ತಿ) ಹುದ್ದೆಗೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಶೇ 4ರಷ್ಟು ಪ್ರಮಾಣದಲ್ಲಿ ತೇರ್ಗಡೆಯಾಗುತ್ತಾರೆ. ಅಂದರೆ ಅವರಿಗೆ ಪ್ರತಿಭೆ ಇಲ್ಲವೆಂತಲೇ? ಇವೆಲ್ಲವೂ ಸುಳ್ಳು. ಒಟ್ಟಾರೆ ಶಿಕ್ಷಣ ಇಲಾಖೆಯ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿಯೇ ದೋಷವಿದೆ.

ತನ್ನ ಈ ನ್ಯೂನತೆಯನ್ನು ಮರೆಮಾಚಲು ಎಂಜಿನಿಯರಿಂಗ್ ಪದವೀಧರರಿಗೂ ಪ್ರಾಥಮಿಕ ಶಾಲೆಗಳಲ್ಲಿ ಬೋಧಿಸಲು ಅವಕಾಶ ಕಲ್ಪಿಸುವಂತಹ ಅಸಂಗತ ಪ್ರಹಸನಕ್ಕೆ ಸರ್ಕಾರ ಮುಂದಾಗಿದೆ.

ಮುಂದಿರುವ ಪ್ರಶ್ನೆಗಳು

*ಈಗಾಗಲೇ ಬಿ.ಎಸ್ಸಿ ಪದವಿ ಪಡೆದು ಮೇಲೆ ಹೇಳಿದ ಎಲ್ಲಾ ತರಬೇತಿ, ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉದ್ಯೋಗಕ್ಕಾಗಿ ಕಾದು ಕುಳಿತಿರುವ ಲಕ್ಷಾಂತರ ಪದವೀಧರರ ಭವಿಷ್ಯವೇನು? ಇವರು ಶಾಶ್ವತ ನಿರುದ್ಯೋಗಿಗಳಾಗಿ ಉಳಿದು ಬಿಡಬಹುದು. ಇದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ.

*ನಿರುದ್ಯೋಗಿ ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗ ಕಲ್ಪಿಸಲು ಬಿ.ಎಸ್ಸಿ ಪದವೀಧರರನ್ನು ನಿರುದ್ಯೋಗಿ- ಗಳನ್ನಾಗಿಸುವುದು ದ್ರೋಹ ಚಿಂತನೆಯಾಗುತ್ತದೆ. ಇದೇ ಅಲ್ಲದೆ, ಎಂಜಿನಿಯರಿಂಗ್ ಪದವಿ ಪಡೆದೂ ಶಿಕ್ಷಕರಾಗಬಹುದು ಎನ್ನುವ ನೀತಿ ಜಾರಿಗೊಂಡರೆ, ವಿದ್ಯಾರ್ಥಿಗಳಲ್ಲಿ ಬಿ.ಎಸ್ಸಿ ಪದವಿಯ ಆಕರ್ಷಣೆಯೇ ಕಡಿಮೆಯಾಗಬಹುದು. ಇದರ ಪರಿಣಾಮ ಬಿ.ಎಸ್ಸಿ ಪದವಿಯೇ ಮರೆಯಾಗಬಹುದು. ಮೂಲ ವಿಜ್ಞಾನ ಕಲಿಕೆಗೆ ದೊಡ್ಡ ಹಿನ್ನಡೆ ಆಗಬಹುದು. ಇದು ಅತ್ಯಂತ ಅಪಾಯಕಾರಿ.

*ಬಿ.ಎಸ್‍ಸಿ ಪದವೀಧರರು ವಿಜ್ಞಾನ ಮತ್ತು ಗಣಿತ ವಿಷಯವನ್ನು ಮೂರೂ ವರ್ಷಗಳಲ್ಲಿ ಕಲಿತಿರುತ್ತಾರೆ. ನಿರ್ದಿಷ್ಟವಾಗಿ ಈ ವಿಷಯಗಳ ಪರಿಣತಿಗಾಗಿಯೇ ವ್ಯಾಸಂಗಕ್ರಮವನ್ನು ರೂಪಿಸಲಾಗಿರುತ್ತದೆ. ಆದರೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೊದಲ ವರ್ಷ ಮಾತ್ರ ಈ ವಿಷಯಗಳನ್ನು ಕಲಿತಿರುತ್ತಾರೆ. ಇವರಿಗೆ ಬಿ.ಎಸ್‍ಸಿ ಪದವೀಧರರಿಗಿರುವ ವಿಷಯ ಪರಿಣತಿ ಇರುವುದಿಲ್ಲ. ಇದರಿಂದ ಗುಣಾತ್ಮಕ ಬೋಧನೆಯಲ್ಲಿ ಹಿನ್ನಡೆಯಾಗುತ್ತದೆ.

*ವೃತ್ತಿಪರ ಎಂಜಿನಿಯರಿಂಗ್ ಶಿಕ್ಷಣ ಪಡೆದ ಪದವೀಧರರು 6ರಿಂದ 8ನೇ ತರಗತಿಗೆ ವಿಜ್ಞಾನ, ಗಣಿತ ವಿಷಯಗಳನ್ನು ಬೋಧಿಸಲು ಬಿ.ಇಡಿ ತರಬೇತಿ ಪಡೆಯಲೇಬೇಕು. ಜತೆಗೆ ಟಿಇಟಿ, ಸಿಇಟಿ ಬರೆಯಲೇಬೇಕು. ಆದರೆ ಎಂಜಿನಿಯರಿಂಗ್ ಪದವಿಯ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮ್ಮದೇ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಶಿಕ್ಷಣದ (ಎಂ.ಟೆಕ್, ಎಂ.ಬಿ.ಎ ಇತ್ಯಾದಿ) ಕಡೆ ಯೋಚಿಸುತ್ತಾರೆಯೇ ಹೊರತು ಬಿ.ಇಡಿ ಕೋರ್ಸ್‌ನತ್ತ ಮುಖ ಮಾಡುವ ಸಾಧ್ಯತೆಗಳು ತೀರಾ ಕಡಿಮೆ.

*ಈ ವಿಷಯಗಳ ಕುರಿತು ಶಿಕ್ಷಣ ಇಲಾಖೆ ಯಾವ ಮುಂದಾಲೋಚನೆ ವಹಿಸಿದೆ? ಅವರು ಎರಡು ವರ್ಷದ ಶಿಕ್ಷಣ ತರಬೇತಿ ಕೋರ್ಸ್‌ಗೆ ಪ್ರವೇಶ ಪಡೆಯುವಂತೆ ಸೆಳೆಯಲು ಯಾವ ಮಾರ್ಗೋಪಾಯಗಳನ್ನು ಮಾಡಲಿದೆ?

*ಇನ್ನು, ಬಿ.ಇಡಿ ಕೋರ್ಸ್‌ ಪೂರ್ಣಗೊಳಿಸಿದ ಎಂಜಿನಿಯರಿಂಗ್‌ ಪದವೀಧರರು ಸರ್ಕಾರಿ ಶಾಲೆಗಳನ್ನು ಪರಿಗಣಿಸದೆ ಆಕರ್ಷಕ ವೇತನದ ಕಾರಣಕ್ಕೆ ಖಾಸಗಿ ಶಾಲೆಗಳಿಗೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪಾತ್ರವೇನು? ಸರ್ಕಾರವೇನಾದರೂ ಎಂಜಿನಿಯರಿಂಗ್ ಪದವೀಧರರನ್ನು ಸೆಳೆಯಲು ಪ್ರತ್ಯೇಕವಾದ ವೇತನ ಶ್ರೇಣಿಯನ್ನು ನಿಗದಿಪಡಿಸುತ್ತದೆಯೇ? ಒಂದು ವೇಳೆ ಹೌದು ಎನ್ನುವುದಾದರೆ, ಸಮಾನ ಹುದ್ದೆಗೆ ಅಸಮಾನ ವೇತನ ನಿಯಮ ರೂಪಿಸಿದಂತಾಗುವುದಿಲ್ಲವೇ? ಹಾಗೆ ಮಾಡಿದರೆ ತಾರತಮ್ಯ ನೀತಿಯನ್ನು ಅನುಸರಿಸಿದಂತೆ ಆಗುವುದಿಲ್ಲವೇ?

ಅಂದರೆ, ಎಂಜಿನಿಯರ್ ಪದವೀಧರರು ಶಿಕ್ಷಕರಾಗಬಾರದು ಎಂದರ್ಥವಲ್ಲ. ಆದರೆ ಈ ವಿಚಾರದಲ್ಲಿ ಗೊಂದಲಗಳು ಇರಬಾರದು. ಪೂರ್ವ ತಯಾರಿಗಳೊಂದಿಗೆ ಸಾಧಕ–ಬಾಧಕಗಳನ್ನು ಅರಿತು ಯಾರಿಗೂ ಅನ್ಯಾಯವಾಗದಂತೆ ಸ್ಪಷ್ಟವಾದ ನೀತಿ, ನಿಯಮಾವಳಿಗಳನ್ನು ರೂಪಿಸಬೇಕು.

ಬಿ. ಶ್ರೀಪಾದ ಭಟ್, ಶಿಕ್ಷಣ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT