ಗುರುವಾರ , ಏಪ್ರಿಲ್ 2, 2020
19 °C

ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಹೇಗೆ?: ಇಲ್ಲಿವೆ ಸರಳ ಸೂತ್ರಗಳು

ಪ್ರೊ. ಎಸ್‌.ಕೆ.ಜಾರ್ಜ್‌ Updated:

ಅಕ್ಷರ ಗಾತ್ರ : | |

Prajavani

ಇನ್ನೇನು ಪಿಯುಸಿ ಪರೀಕ್ಷೆಗಳು ಶುರುವಾಗಲಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ವಿದ್ಯಾರ್ಥಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ಓದು, ಪುನರಾವರ್ತನೆ.. ಹೀಗೆ ಅಧ್ಯಯನದಲ್ಲಿ ನಿರತರಾಗಿರಬಹುದು. ಪರೀಕ್ಷೆಯನ್ನು ಎದುರಿಸುವ ಆತ್ಮವಿಶ್ವಾಸವೂ ಇರಬಹುದು. ಆದರೆ ಪರೀಕ್ಷೆಯ ಹಾಲ್‌ನಲ್ಲಿ ಪ್ರಶ್ನೆಪತ್ರಿಕೆಯನ್ನು ಕೈಗೆತ್ತಿಕೊಂಡಾಗ, ಕೆಲವು ಪ್ರಶ್ನೆಗಳು ಅರ್ಥವಾಗದಿದ್ದರೆ ಅಥವಾ ಪ್ರಶ್ನೆ ಉದ್ದವಾಗಿದ್ದರೆ ನಿಗದಿತ ಸಮಯದೊಳಗೆ ಉತ್ತರಿಸುವುದು ಕೆಲವರಿಗೆ ಕಷ್ಟವಾಗಬಹುದು.

ಚೆನ್ನಾಗಿ ಓದಿದ್ದರೂ ಕೂಡ ಸಮಯ ಸಾಲದೆ ಅಂಕ ಕಳೆದುಕೊಂಡರೆ ಯಾರಿಗೆ ತಾನೆ ಆತಂಕವಾಗುವುದಿಲ್ಲ ಹೇಳಿ. ಸಮಯ ನಿರ್ವಹಣೆ ಎನ್ನುವುದು ಇಲ್ಲಿ ಅತ್ಯಂತ ಮುಖ್ಯ. ನಿಗದಿತ ಮೂರು ತಾಸಿನೊಳಗೆ ಎಲ್ಲದಕ್ಕೂ ಉತ್ತರವನ್ನು ಬರೆಯುವುದು ಕಷ್ಟವೇನಲ್ಲ. ಆದರೆ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ ಇದು ಸುಲಭ ಸಾಧ್ಯ.

ಪರೀಕ್ಷೆಗಿಂತ ಮೊದಲು ಓದಿಗೆ ಸಮಯ ಹೊಂದಿಸಿಕೊಂಡು ವೇಳಾಪಟ್ಟಿ ತಯಾರಿಸಿಕೊಳ್ಳಿ. ಅಣಕು ಪರೀಕ್ಷೆಗೆ ಕ್ರಮಬದ್ಧವಾಗಿ ಬರೆದು ಮೂರು ತಾಸಿನೊಳಗೆ ಮುಕ್ತಾಯಗೊಳಿಸುವುದನ್ನು ಅಭ್ಯಾಸ ಮಾಡಿ. ಪ್ರಶ್ನೆಪತ್ರಿಕೆಗಳನ್ನು ಓದುವುದು, ಅರ್ಥ ಮಾಡಿಕೊಳ್ಳುವುದು, ಉತ್ತರಗಳನ್ನು ಬರೆದ ನಂತರ ಇನ್ನೊಮ್ಮೆ ಕಣ್ಣು ಹಾಯಿಸುವುದು.. ಇವೆಲ್ಲವೂ ಇದರಿಂದ ರೂಢಿಯಾಗುತ್ತದೆ.

ಹಳೆಯ ಪ್ರಶ್ನೆಪತ್ರಿಕೆ ನೋಡಿ
ಪ್ರಶ್ನೆಪತ್ರಿಕೆ ಹೇಗಿರುತ್ತದೆ ಎಂದು ತಿಳಿದುಕೊಳ್ಳಿ. ಇದರಲ್ಲಿ ಅಂಕಗಳನ್ನು ಯಾವ ರೀತಿ ಹಂಚಿಕೆ ಮಾಡಿರುತ್ತಾರೆ, ಯಾವ ಪ್ರಶ್ನೆಗಳಿಗೆ ಎಷ್ಟು ಎಂಬುದನ್ನು ಸರಿಯಾಗಿ ನೋಡಿ ನೆನಪಿನಲ್ಲಿಟ್ಟುಕೊಳ್ಳಿ. ಬಹುತೇಕ ಪಠ್ಯಪುಸ್ತಕಗಳಲ್ಲಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಕೊಟ್ಟಿರುತ್ತಾರೆ. ಇಲ್ಲದಿದ್ದರೆ ಅಂತರ್ಜಾಲದಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.

ಇದರಿಂದ ಹಿಂದಿನ ಪರೀಕ್ಷೆಗಳಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕೂಡ ಅಭ್ಯಾಸ ಮಾಡಬಹುದು. ಜೊತೆಗೆ ಸಮಯ ನಿರ್ವಹಣೆ ಮಾಡುವುದು, ಯಾವ ಪ್ರಶ್ನೆಗಳಿಗೆ ಎಷ್ಟು ಗಮನ ನೀಡಬೇಕು, ಯಾವುದನ್ನು ಶೀಘ್ರ ಉತ್ತರಿಸಬಹುದು ಎಂಬುದು ಕೂಡಾ ಗೊತ್ತಾಗುತ್ತದೆ.

* ಬೇಗ ಬೇಗ ಬರೆಯುವುದನ್ನು ರೂಢಿ ಮಾಡಿ
ಕೊಳ್ಳಿ. ಸ್ಪಷ್ಟವಾಗಿ, ಚಿತ್ತಿಲ್ಲದೇ ಬರೆಯಿರಿ.

* ಪೆನ್‌, ಪೆನ್ಸಿಲ್‌, ಜಾಮಿಟ್ರಿ ಬಾಕ್ಸ್‌.. ಹೀಗೆ ಎಲ್ಲವನ್ನೂ ಸರಿಯಾಗಿ ಬಳಸುವುದನ್ನು ಕಲಿತುಕೊಳ್ಳಿ.

ಇವುಗಳೆಲ್ಲ ಪರೀಕ್ಷೆಗಿಂತ ಮೊದಲು ನಡೆಸುವ ತಯಾರಿಗಳು. ಇನ್ನು ಪರೀಕ್ಷೆ ಸಂದರ್ಭದಲ್ಲಿ ಹೇಗೆ ಸಮಯದ ನಿರ್ವಹಣೆ ಮಾಡಬೇಕು ಎಂಬುದರತ್ತ ಗಮನ ಹರಿಸೋಣ.

ಉತ್ತರಗಳ ಮರುಪರಿಶೀಲನೆ

ಉತ್ತರಗಳ ಮರುಪರಿಶೀಲನೆ ಮಾಡುವುದು ತುಂಬಾ ಮುಖ್ಯ. ಎಲ್ಲವನ್ನೂ ಬರೆದು ಮುಗಿಸಿದ ನಂತರ ಇಡೀ ಉತ್ತರಪತ್ರಿಕೆಯನ್ನು ಪರಿಶೀಲಿಸಿ, ಯಾವುದಾದರೂ ಪ್ರಶ್ನೆ ಬಿಟ್ಟು ಹೋಗಿದೆಯೇ ಎಂದು ನೋಡಿ. ಹಾಗೆಯೇ ಎಲ್ಲಾದರೂ ತಪ್ಪಾದರೆ ಸರಿಪಡಿಸಬಹುದು. ಕೆಲವೊಮ್ಮೆ ಸುಧಾರಿಸಲು ಯತ್ನಿಸಬಹುದು.

ಪ್ರಶ್ನೆಪತ್ರಿಕೆ ಸರಿಯಾಗಿ ಓದಿ

ಮೊದಲು ಪ್ರಶ್ನೆಪತ್ರಿಕೆಗಳನ್ನು ಸರಿಯಾಗಿ ಓದಿ. ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಂಡು ಓದಿ. ಸಮಯವಾದಂತೆ ಬಹುತೇಕ ವಿದ್ಯಾರ್ಥಿಗಳು ಸಾಮಾನ್ಯವಾಗಿ ಆತಂಕಗೊಳ್ಳುವುದು, ಕೆಲವು ಪ್ರಶ್ನೆಗಳನ್ನು ಸರಿಯಾಗಿ ನೋಡದೆ ಕಣ್ತಪ್ಪಿ ಹೋಗುವುದು ಸಾಮಾನ್ಯ. ಹೀಗಾಗಿ ಆರಂಭದಲ್ಲಿ ಸರಿಯಾಗಿ ನೋಡಿಕೊಂಡು ಯಾವ ಪ್ರಶ್ನೆಗಳಿಗೆ ಆದ್ಯತೆ ನೀಡಬೇಕು ಎಂದು ನಿರ್ಧರಿಸಿ ಬರೆದರೆ ಸುಲಭ ಎನಿಸುತ್ತದೆ.

ಯಾವ ಪ್ರಶ್ನೆಗಳಿಗೆ ಉತ್ತರಿಸಲು ಹೆಚ್ಚು ಸಮಯ ಬೇಕು ಎಂಬುದು ಮೊದಲೇ ಅಭ್ಯಾಸ ಮಾಡಿದರೆ ಗೊತ್ತಾಗಿಬಿಡುತ್ತದೆ. ಸುಲಭವಾದ ಪ್ರಶ್ನೆಗೆ ಮೊದಲು ಉತ್ತರಿಸಿ. ಹೀಗಾಗಿ ಕಡಿಮೆ ಅವಧಿಯಲ್ಲಿ ಬಹಳಷ್ಟನ್ನು ಮುಗಿಸಿ ನಿರಾಳವಾಗಬಹುದು. ನಂತರ ಹೆಚ್ಚು ಸಮಯ ಬೇಡುವಂತಹ ಪ್ರಶ್ನೆಗಳಿಗೆ ಉತ್ತರ ಬರೆಯಲು ಆರಂಭಿಸಿ. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕೇಳಿದರೆ ಇದೇ ಪದ್ಧತಿಯನ್ನು ಅನುಸರಿಸಿರುವುದು ಗೊತ್ತಾಗುತ್ತದೆ.

ಉತ್ತರ ಗೊತ್ತಿದ್ದರೆ ಮಾತ್ರ ಬರೆಯಿರಿ

ಉತ್ತರ ಗೊತ್ತಿದ್ದರೆ ಮಾತ್ರ ಬರೆಯಿರಿ. ಕಷ್ಟವೆನಿಸಿದ್ದನ್ನು ನೆನಪಿಸಿಕೊಳ್ಳಲು ಯತ್ನಿಸುವುದು, ಹೇಗಾದರೂ ಉತ್ತರಿಸಲೇಬೇಕು ಎಂಬ ಒತ್ತಡಕ್ಕೆ ಒಳಗಾಗುವುದು ಇವೆಲ್ಲ ಸಮಯವನ್ನು ವ್ಯರ್ಥಗೊಳಿಸುವ ರೀತಿ. ಗೊತ್ತಿದ್ದಷ್ಟು ಬರೆದು, ಮುಂದಿನ ಪ್ರಶ್ನೆ ಕೈಗೆತ್ತಿಕೊಳ್ಳಿ.

ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಚಿಂತಿಸಿ ಕಾರ್ಯರೂಪಕ್ಕೆ ಇಳಿಸಿ. ಇದರಿಂದ ನಿಮಗೆ ಸಮಯವೂ ಉಳಿತಾಯವಾಗುತ್ತದೆ, ಉತ್ತರವನ್ನೂ ಚೆನ್ನಾಗಿ ಮೂಡಿಸಬಹುದು. ಇಲ್ಲದಿದ್ದರೆ ಹೇಗೆ ಹೇಗೋ ಬರೆದು ಚಿತ್ತು ಮಾಡುವುದು, ಮತ್ತೆ ವಾಪಸ್ಸು ಅದೇ ಉತ್ತರವನ್ನು ಸರಿಪಡಿಸಲು ಹೋಗಿ ಸಮಯ ಹಾಳು ಮಾಡುವುದು ನಡೆಯುತ್ತದೆ.

ಉತ್ತರಿಸಲು ಇನ್ನಷ್ಟು ಖಾಲಿ ಹಾಳೆಗಳು ಬೇಕಾದರೆ ಮೊದಲೇ ಹೇಳಿ. ಇಲ್ಲದಿದ್ದರೆ ಪರೀಕ್ಷೆ ಮೇಲ್ವಿಚಾರಕರು ನಿಮ್ಮ ಬಳಿ ಬಂದು, ಅದನ್ನು ಕೊಡುವುದು ತಡವಾಗಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು