ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ಹಾಕಿದರೆ ಮೌಲ್ಯಮಾಪನ ಬಹಿಷ್ಕಾರ

Last Updated 29 ಮೇ 2020, 19:25 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುತ್ತಿರುವ ಈ ಸ್ಥಿತಿಯಲ್ಲಿ ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಮೇಲಿಂದ ಮೇಲೆ ಒತ್ತಡ ಹಾಕುವ ತಂತ್ರವನ್ನು ಸರ್ಕಾರ ಅನುಸರಿಸಿದರೆ ಮೌಲ್ಯಮಾಪನ ಬಹಿಷ್ಕಾರದಂತಹ ಕ್ರಮ ಅನಿವಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಎಚ್ಚರಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ‘ಮೌಲ್ಯಮಾಪನಕ್ಕೆ ಹಾಜರಾತಿ ಕಡ್ಡಾಯವಲ್ಲ ಎಂದು ಹೇಳುತ್ತಲೇ ಡಿಡಿಪಿಯುಗಳಿಂದ ಫೋನ್‌ ಕರೆ ಮಾಡಿಸಿ, ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗುತ್ತಿದೆ. ಸೂಕ್ತ ಸಾರಿಗೆ, ವಸತಿ ಇಲ್ಲದ ಈ ಸ್ಥಿತಿಯಲ್ಲಿ ಹೊರ ಜಿಲ್ಲೆಗಳಿಂದ ಬಂದು ಮೌಲ್ಯಮಾಪನ ಮಾಡುವುದು ಸಾಧ್ಯವೇ ಇಲ್ಲ. ಸರ್ಕಾರ ತನ್ನ ಹಟವನ್ನೇ ಮುಂದುವರಿಸಿದರೆ ಉಪನ್ಯಾಸಕರ ಸಂಘದೊಂದಿಗೆ ಚರ್ಚಿಸಿ ರಾಜ್ಯದಾದ್ಯಂತ ಮೌಲ್ಯಮಾಪನ ಬಹಿಷ್ಕಾರ ಮಾಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.‌

‘ಯಾವುದೇ ಪೂರ್ವಸಿದ್ಧತೆ ಇಲ್ಲದೆ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಿರುವುದು ಆತುರದ ನಿರ್ಧಾರ. ಎಲ್ಲರೂ ಮೌಲ್ಯಮಾಪನ ಕೇಂದ್ರಕ್ಕೆ ಬಂದರೆ ಅಲ್ಲಿಯೇ ಕೊರೊನಾ ಸೋಂಕು ಹರಡುವ ಸಾಧ್ಯತೆಯೂ ಇದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಿರ್ಧಾರ: ‘ಡಿಡಿಪಿಯುಗಳಿಂದ ಒತ್ತಡ ತಂತ್ರ ಫಲಿಸುವುದಿಲ್ಲ ಎಂದು ಗೊತ್ತಾಗಿ ಇದೀಗ ಜಿಲ್ಲಾಧಿಕಾರಿಗಳಿಂದಲೇ ಉಪನ್ಯಾಸಕರಿಗೆ ಒತ್ತಡ ಹಾಕಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮೌಲ್ಯಮಾಪನಕ್ಕೆ ತೆರಳದಿದ್ದರೆ ವೇತನ ರಹಿತ ರಜೆ ಎಂದು ಪರಿಗಣಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಮೌಲ್ಯಮಾಪನ ವಿಕೇಂದ್ರೀಕರಣ ಮಾಡದ ಸರ್ಕಾರ ಈ ರೀತಿ ಒತ್ತಡ ತಂತ್ರ ರೂಪಿಸಿದರೆ ಮೌಲ್ಯಮಾಪನ ಬಹಿಷ್ಕಾರ ಕುರಿತು ಸೋಮವಾರದ ಬಳಿಕ ನಿರ್ಧಾರಕ್ಕೆ ಬರಬೇಕಾಗುತ್ತದೆ’ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ ಎಚ್ಚರಿಸಿದ್ದಾರೆ.

ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಸಹ ಕಡ್ಡಾಯ ಮೌಲ್ಯಮಾಪನದಿಂದ ಉಪನ್ಯಾಸಕರಿಗೆ ಈ ಬಾರಿ ವಿನಾಯಿತಿ ಕೊಡಲೇಬೇಕು ಎಂದು ಕೋರಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT