ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಶ್ರೇಷ್ಠ 100 ವಿ.ವಿಗಳಲ್ಲಿ ವಿಟಿಯು

Last Updated 15 ಜೂನ್ 2020, 14:18 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್‌ಐಆರ್‌ಎಫ್) ವರದಿ ಆಧರಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2020ನೇ ಸಾಲಿನಲ್ಲಿ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕದ 5ನೇ ಆವೃತ್ತಿಯನ್ನು ಪ್ರಕಟಿಸಿದೆ. ಇದರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ರಾಷ್ಟ್ರದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ’ ಎಂದು ಕುಲಸಚಿವ ಡಾ.ಎ.ಎಸ್. ದೇಶಪಾಂಡೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ 100 ಶ್ರೇಷ್ಠ ಸಂಸ್ಥೆಗಳಲ್ಲಿ ವಿಟಿಯು 55ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಐಐಟಿ, ಐಐಐಟಿ, ಎನ್‌ಐಟಿ ಮತ್ತು ಇತರ ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ಪ್ರಮುಖ ವಿಶ್ವವಿದ್ಯಾಲಯಗಳಿವೆ. ವಿಟಿಯು ದೇಶದ ಶ್ರೇಷ್ಠ 100 ವಿಶ್ವವಿದ್ಯಾಲಯಗಳ (ತಾಂತ್ರಿಕ ಮತ್ತು ತಾಂತ್ರಿಕೇತರ) ವಿಭಾಗದಲ್ಲಿ 80ನೇ ಸ್ಥಾನ ಮತ್ತು ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ 71ನೇ ಸ್ಥಾನದಲ್ಲಿದೆ’ ಎಂದು ವಿವರಿಸಿದ್ದಾರೆ.

‘ವಿಟಿಯು 20 ವರ್ಷಗಳ ವಿಶ್ವವಿದ್ಯಾಲಯವಾದರೂ ಶ್ರೇಷ್ಠ 100ರಲ್ಲಿ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದೆ. ಇದು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನೀಡುತ್ತಿರುವ ಉತ್ತಮ ಗುಣಮಟ್ಟ ಶಿಕ್ಷಣದ ವ್ಯವಸ್ಥೆ, ಯುವಪೀಳಿಗೆಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಕೃತಿ ಪ್ರೋತ್ಸಾಹಿಸುತ್ತಿರುವ ಹಾಗೂ ಕೈಗಾರಿಕ ವಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚೆಗೆ ಒಳಪಡಿಸಿ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಕೆಲವು ಕ್ರಾಂತಿಕಾರಿ ಕ್ರಮಗಳನ್ನು ಅನುಷ್ಠಾನಗೊಳಿಸಿದ್ದನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

‘ಬೋಧನೆ, ಕಲಿಕೆ, ಸಂಪನ್ಮೂಲಗಳ, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ; ಪದವಿ ಫಲಿತಾಂಶಗಳು, ಸಾಮಾಜಿಕ ಪಾಲ್ಗೊಳ್ಳುವಿಕೆ ಮತ್ತು ಸಂಸ್ಥೆಗಳ ಮೇಲಿರುವ ಸಾರ್ವಜನಿಕ ಗ್ರಹಿಕೆ ಮೊದಲಾದ ಅಂಶಗಳ ಬಗ್ಗೆ ಕಠಿಣ ಮಾನದಂಡಗಳೊಂದಿಗೆ ಮೌಲ್ಯಮಾಪನ ಮಾಡಿ ಈ ಶ್ರೇಯಾಂಕಗಳನ್ನು ಸರ್ಕಾರ ಪ್ರಕಟಿಸುತ್ತದೆ’ ಎಂದು ಹೇಳಿದ್ದಾರೆ.

‘ವಿಶ್ವವಿದ್ಯಾಲಯದ ಈ ಸಾಧನೆಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT