ಸೋಮವಾರ, ಸೆಪ್ಟೆಂಬರ್ 28, 2020
28 °C
ಐದು ರಾಜ್ಯಗಳ ತೀರ್ಪನ್ನು ಜನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿ ಪರಿಗಣಿಸಬಹುದು

ಮಹಾಸಮರದ ದಿಕ್ಸೂಚಿ ಎತ್ತ ವಾಲುವುದೋ?

ಸಂದೀಪ್‌ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ರಾಜಸ್ಥಾನದಲ್ಲಿ ಈ ವಾರ ಚುನಾವಣೆ ನಡೆಯಲಿದ್ದು, ಮುಂದಿನ ವಾರದ ವೇಳೆಗೆ ಐದು ರಾಜ್ಯಗಳ ಮತದಾರರ ತೀರ್ಪು ಏನೆಂಬುದು ಹೊರಬಿದ್ದಿರುತ್ತದೆ. ಇವು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುಂಚಿನ ಮಹತ್ವದ ವಿಧಾನಸಭಾ ಚುನಾವಣೆಗಳು. ಈ ಐದು ರಾಜ್ಯಗಳ ಚುನಾವಣೆಗಳ ಸ್ಪರ್ಧೆಯು ಪ್ರಾದೇಶಿಕ ಹಾಗೂರಾಜ್ಯ ಆಧಾರಿತವೇನೋ ಹೌದು. ಆದರೆ, ಇವುಗಳ ಫಲಿತಾಂಶವು ರಾಜಕೀಯ ಪಕ್ಷಗಳು, ಅವುಗಳನ್ನು ಒಳಗೊಂಡ ಮೈತ್ರಿಕೂಟಗಳು ಹಾಗೂ ಅವುಗಳ ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ದೃಷ್ಟಿಯಿಂದ ಬಲು ಮುಖ್ಯವಾದುದು.

ಉತ್ತರ ಭಾರತದ ಮೂರು ಮುಖ್ಯ ರಾಜ್ಯಗಳಲ್ಲಿ ಫಲಿತಾಂಶ ಏನಾಗಬಹುದೆಂದು ನನ್ನನ್ನು ಕೆಲವು ಗೆಳೆಯರು ಕೇಳಿದಾಗ, ನಾನು ತಮಾಷೆಯಾಗಿ ಅದು 2-1 ಆಗುವುದು ಬಹುತೇಕ ನಿಶ್ಚಿತ ಎಂದು ಪ್ರತಿಕ್ರಿಯಿಸಿದ್ದೇನೆ. ಇಲ್ಲಿ ಮುಖ್ಯ ಪ್ರಶ್ನೆಯೆಂದರೆ, 2 ಯಾರ ಪಾಲಾಗಲಿದೆ? ಬಿಜೆಪಿ ಪಾಲೋ ಅಥವಾ ಕಾಂಗ್ರೆಸ್ಸಿನ ಪಾಲೋ?! ಈ ಮೂರು ರಾಜ್ಯಗಳ ಪೈಕಿ ತಲಾ ಒಂದೊಂದರಲ್ಲಿ ಗೆಲುವು ಬಿಜೆಪಿ ಮತ್ತು ಕಾಂಗ್ರೆಸ್ಸಿನ ಜೋಳಿಗೆಯಲ್ಲಿರುವುದು ಈಗಾಗಲೇ ನಿಚ್ಚಳ. ಛತ್ತೀಸಗಡದಲ್ಲಿ ಬಿಜೆಪಿ ಪುನರಾಯ್ಕೆ ಬಹುತೇಕ ನಿಶ್ಚಿತವಾಗಿದ್ದರೆ, ರಾಜಸ್ಥಾನದಲ್ಲಿನ ‘ಅಧಿಕಾರ ಆವರ್ತನ ಪದ್ಧತಿ’ಯು ಕಾಂಗ್ರೆಸ್ಸಿಗೆ ಅಧಿಕಾರದ ಚುಕ್ಕಾಣಿ ಹಿಡಿಸುವ ಸಾಧ್ಯತೆ ಇದೆ. ಹೀಗಾಗಿ, ಯಾರು 2 ಪಡೆಯುತ್ತಾರೆ ಎಂಬುದು ಮಧ್ಯಪ್ರದೇಶದ ತೀರ್ಪನ್ನು ಅವಲಂಬಿಸಿದೆ. ಈ ರಾಜ್ಯದಲ್ಲಿ ಎರಡೂ ಪಕ್ಷಗಳ ನಡುವೆ ತುರುಸಿನ ಹಣಾಹಣಿ ಇದೆ ಎಂಬುದೇ ಪ್ರತಿಯೊಬ್ಬರ ಅಭಿಮತವಾಗಿದೆ. ಈ ಹಿನ್ನೆಲೆಯಲ್ಲಿ, ಮಧ್ಯಪ್ರದೇಶವು ಮುಂದಿನ ಗತಿ ನಿರ್ಧರಿಸಲಿರುವ ನಿರ್ಣಾಯಕ ರಾಜ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ರಾಜಸ್ಥಾನಕ್ಕೆ ಹೋಲಿಸಿದರೆ ಮಧ್ಯಪ್ರದೇಶಕ್ಕೆ ಏಕೆ ಹೆಚ್ಚು ಸಮಯವನ್ನು ಮೀಸಲಿಟ್ಟರು ಎಂಬುದನ್ನೂ ಇದು ವಿವರಿಸುತ್ತದೆ.

ಕಳೆದ ಲೋಕಸಭಾ ಚುನಾವಣೆಯಿಂದ ಮೊದಲುಗೊಂಡು ಈವರೆಗೆ ಕಾಂಗ್ರೆಸ್ ಪಕ್ಷಕ್ಕೆ ಯಾವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಲು ಆಗಿಲ್ಲ. ಒಂದಾದ ಮೇಲೊಂದರಂತೆ ಅದು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಎದುರು ಸೋಲುಣ್ಣುತ್ತಿದೆ, ಆ ಪಕ್ಷಕ್ಕೆ ಜಯದ ಹಾದಿಗೆ ಮರಳಲು ಇದು ಕಡೆಯ ಅವಕಾಶವಾಗಿದೆ. ಕಾಂಗ್ರೆಸ್ಸಿಗೆ ಒಂದು ರಾಜ್ಯದಲ್ಲಿನ ಗೆಲುವು ‘ಮುಖ ಉಳಿಸಿದರೆ’, ಎರಡು ರಾಜ್ಯಗಳಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವುದು ಆ ಪಕ್ಷದ ನೈತಿಕ ಸ್ಥೈರ್ಯವನ್ನು ಎತ್ತರಕ್ಕೇರಿಸಲಿದೆ; ಜೊತೆಗೆ ಬಿಜೆಪಿ ಪ್ರತಿರೋಧದ ಪ್ರಮುಖ ಪಕ್ಷವಾಗಿ ಅದರ ಸ್ಥಾನವನ್ನು ಬಲಗೊಳಿಸಲಿದೆ.

ಎರಡು ಅವಧಿಗೂ ಹೆಚ್ಚು ಸಮಯದಿಂದ ಅಧಿಕಾರದಲ್ಲಿರುವ ರಾಜ್ಯಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿಯ ಸಾಮರ್ಥ್ಯವೇನು ಎಂಬುದಕ್ಕೂ ಈ ಚುನಾವಣೆಗಳು ಪರೀಕ್ಷೆಯಾಗಿವೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏದುಸಿರುಬಿಟ್ಟು ಅಧಿಕಾರ ಉಳಿಸಿಕೊಂಡಿತೇನೋ ಸರಿ. ಆದರೆ, ಇದರ ಶ್ರೇಯ ತೀವ್ರ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅವರಿಗೇ ಸಲ್ಲಬೇಕು. ಇದಕ್ಕಾಗಿಯೇ, ‘ಗುಜರಾತಿನಲ್ಲಿ ಬಿಜೆಪಿ ಸೋತಿತು, ಆದರೆ ಮೋದಿ ಗೆದ್ದರು’ ಎಂದು ವಿಶ್ಲೇಷಿಸುವ ಬಹಳಷ್ಟು ಮಂದಿ ಇದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಪ್ರತಿರೋಧಿಸುವ ಶಕ್ತಿ ಬಿಜೆಪಿಗೆ ಇದೆಯೇ ಎಂಬುದು ಛತ್ತೀಸಗಡ ಮತ್ತು ಮಧ್ಯಪ್ರದೇಶದ ಫಲಿತಾಂಶದಿಂದ ಗೊತ್ತಾಗಲಿದೆ. ಅಜಿತ್ ಜೋಗಿ ಮತ್ತು ಬಿಎಸ್‌ಪಿ ಮೈತ್ರಿಯು ಆಡಳಿತ ವಿರೋಧಿ/ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಲಿರುವುದು ಬಿಜೆಪಿಗೆ ಅನುಕೂಲಕರ ಅಂಶವಾಗಿದೆ. ಅಜಿತ್ ಜೋಗಿ ಅವರ ಮೈತ್ರಿಯು ಕಾಂಗ್ರೆಸ್ಸಿನ ಅವಕಾಶಗಳನ್ನು ಹಾಳುಗೆಡವಲಿದೆ ಎಂದೇ ಹಲವು ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಕರ್ನಾಟಕದಲ್ಲಿ ಉಂಟಾಗಿದ್ದಂತಹ ಪರಿಸ್ಥಿತಿಯೇ ಛತ್ತೀಸಗಡದಲ್ಲೂ ಸೃಷ್ಟಿಯಾಗಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ. ಇಲ್ಲಿ ಅಜಿತ್ ಜೋಗಿ ಅವರು ‘ಛತ್ತೀಸಗಡದ ಕುಮಾರಸ್ವಾಮಿ’ ಅವರಾಗಿ ಅವತರಿಸಬಹುದು ಎಂದೂ ಕೆಲವರು ಹೇಳಿದ್ದಾರೆ. ಆದರೆ, ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯ ಸ್ವರೂಪ ಗಮನಿಸಿದರೆ ಇಂತಹ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಕಾಣುತ್ತಿಲ್ಲ. ರಮಣ್ ಸಿಂಗ್ ಸತತ ನಾಲ್ಕನೇ ಬಾರಿಗೆ ಅಧಿಕಾರದ ನೇತೃತ್ವ ವಹಿಸಿಕೊಳ್ಳಬಹುದು.

ರಾಜಸ್ಥಾನದಲ್ಲಿ ಬಿಜೆಪಿ ವಿರೋಧಿ ಅಲೆ, ವಿಶೇಷವಾಗಿ ರಾಜ್ಯ ನಾಯಕತ್ವದ ವಿರುದ್ಧ ಅಸಮಾಧಾನ ನಿಚ್ಚಳವಾಗಿದೆ ಎಂದು ಕ್ಷೇತ್ರ ಸಮೀಕ್ಷೆಗಳು ಹೇಳಿವೆ. ಇಲ್ಲಿ ಮುಖ್ಯಮಂತ್ರಿ ತಮ್ಮ ಪಕ್ಷದೊಳಗೇ ಬೆಂಬಲ ಗಳಿಸುವಲ್ಲಿ ವಿಫಲರಾಗಿದ್ದಾರೆ. ಆ ಪಕ್ಷದಿಂದ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವರ ಸಂಖ್ಯೆ ಪಕ್ಷದೊಳಗಿನ ಆಂತರಿಕ ಭಿನ್ನಮತಕ್ಕೆ ಕೈಗನ್ನಡಿಯಾಗಿದೆ. ಜೊತೆಗೆ, ಇಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸದಿರುವುದು ಕಾಂಗ್ರೆಸ್ಸಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಪೈಲಟ್ ಮತ್ತು ಗೆಹ್ಲೋಟ್ ಇಬ್ಬರ ಬೆಂಬಲಿಗರೂ ಪರಸ್ಪರ ಜಿದ್ದಾಜಿದ್ದಿಗೆ ಬೀಳದೆ ಸಂಘಟಿತವಾಗಿ ಕೆಲಸ ಮಾಡುತ್ತಿದ್ದಾರೆ.

ಕ್ಷೇತ್ರ ಸಮೀಕ್ಷೆಗಳ ಪ್ರಕಾರ, ಮಧ್ಯಪ್ರದೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧದ ಅಸಮಾಧಾನ ಗುಪ್ತಗಾಮಿನಿಯಂತಿದೆ. ಆದರೆ, ಕಾಂಗ್ರೆಸ್ಸಿನೊಳಗಿನ ಆಂತರಿಕ ಕಾದಾಟವು ಈ ಅನನುಕೂಲವನ್ನು ಮರೆಮಾಚಿದೆ. ಇಲ್ಲಿ ಬೇರೆ ಬೇರೆ ಬಣಗಳ ನಾಯಕರು ಬೇರೆ ಬೇರೆ ಉದ್ದೇಶಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಮತದಾರನ ತೀರ್ಪು ಈಗಾಗಲೇ ಇವಿಎಂಗಳಲ್ಲಿ ಅಡಗಿ ಕುಳಿತಿದೆ. ಅಷ್ಟರಲ್ಲೇ, ಇವಿಎಂಗಳಲ್ಲಿನ ಫಲಿತಾಂಶವನ್ನು ತಿರುಚಲಾಗಿದೆ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ! ಮುಂದಿನ ಲೋಕಸಭಾ ಚುನಾವಣೆ ಕಾರ್ಯತಂತ್ರದ ದೃಷ್ಟಿಯಿಂದ ತನಗೆ ಅತ್ಯಂತ ಮಹತ್ವವೆನ್ನಿಸಿದ ರಾಜ್ಯದಲ್ಲಿ ವಿಜಯಿಯಾಗಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿದೆಯೇ?

ರಾಷ್ಟ್ರೀಯ ಮಾಧ್ಯಮಗಳು ಈ ಮೂರು ರಾಜ್ಯಗಳ ಫಲಿತಾಂಶದ ಗುಂಗಿನಲ್ಲಿ ಎಷ್ಟರಮಟ್ಟಿಗೆ ಮುಳುಗಿಬಿಟ್ಟಿವೆ ಎಂದರೆ, ಉಳಿದೆರಡು ರಾಜ್ಯಗಳಾದ ತೆಲಂಗಾಣ ಮತ್ತು ಮಿಜೋರಾಂಗಳನ್ನು ಅವು ನಾಮಕಾವಸ್ತೆಗೆ ಮಾತ್ರ ಪ್ರಸ್ತಾಪಿಸುತ್ತಿವೆ. ತೆಲಂಗಾಣದಲ್ಲಿ ಪ್ರಚಾರ ಆರಂಭವಾದಾಗ ಟಿಆರ್‌ಎಸ್ ಮುಂಚೂಣಿಯಲ್ಲಿದ್ದಂತೆ ಭಾಸವಾಗಿತ್ತು. ಆದರೆ, ಪ್ರಚಾರ ಮುಂದುವರಿದಂತೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಬಲಗೊಳ್ಳುತ್ತಿರುವಂತೆ ತೋರಿತು. ಆದರೆ, ಕಾಂಗ್ರೆಸ್ ಮೈತ್ರಿಕೂಟವು ಟಿಆರ್‌ಎಸ್‌ಗೆ ಪರಿಣಾಮಕಾರಿ ಸವಾಲೆಸೆದು ಬಿಜೆಪಿ ಮತ್ತು ಎಂಐಎಂಗಳನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗಿದೆಯೇ? ತೆಲಂಗಾಣ ರಾಜ್ಯ ರಚನೆ ನಂತರ ನಡೆಯುತ್ತಿರುವ ಈ ಮೊದಲ ವಿಧಾನಸಭಾ ಚುನಾವಣೆಯಲ್ಲಿ ‘ತೆಲಂಗಾಣ ಭಾವುಕತೆ’ಯ ಪ್ರಭಾವ ಕಂಡುಬರಬಹುದು ಎಂಬ ಊಹೆಯೂ ಇದೆ. ಆದರೆ, ಇಲ್ಲಿ ಕಾಂಗ್ರೆಸ್ ಮೈತ್ರಿಕೂಟ ರಚನೆ ತಡವಾಗಿ ಆಗಿದ್ದು ಹಾಗೂ ಕೆಸಿಆರ್ ಅವರ ಮುಖ್ಯಮಂತ್ರಿ ಅವಧಿಯ ನಾಲ್ಕು ವರ್ಷಗಳಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಧ್ವನಿಯೇ ಹೆಚ್ಚುಕಮ್ಮಿ ಇರದೇ ಇದ್ದುದು ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ನೋಡಬೇಕಾಗಿದೆ.

ಮಿಜೋರಾಂ ರಾಜಕಾರಣವು ರಾಜ್ಯ ಆಧಾರಿತವಾಗಿದ್ದು ಈಶಾನ್ಯ ವಲಯದ ವಿದ್ಯಮಾನಗಳೊಂದಿಗೆ ತಳಕು ಹಾಕಿಕೊಂಡಿದೆ. ಬಿಜೆಪಿಯು ಈಶಾನ್ಯ ಭಾರತ ತಲುಪುವ ತನ್ನ ನೀತಿಗೆ ಅನುಗುಣವಾಗಿ ಇಲ್ಲಿಗೆ ತನ್ನ ರಾಜಕೀಯ ಇರುವಿಕೆ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಆದರೂ, ಇಲ್ಲಿ ಕಾಂಗ್ರೆಸ್ ಮತ್ತು ಎಂಎನ್ಎಫ್ ನಡುವೆ ಪ್ರಮುಖ ಸ್ಪರ್ಧೆ ಕಂಡುಬರುತ್ತಿದ್ದು ಸ್ಥಳೀಯ ವಿಷಯಗಳು ನಿರ್ಣಾಯಕವಾಗುವ ಲೆಕ್ಕಾಚಾರಗಳಿವೆ. ಇದರಿಂದಾಗಿ, ಸಾಮಾನ್ಯವಾಗಿ ಈಶಾನ್ಯ ರಾಜ್ಯಗಳಲ್ಲಿ ಆಗುವಂತೆ ಈಗಲೂ ಇಲ್ಲಿ ‘ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ; ಬಿಜೆಪಿ ಸಂಭವನೀಯ ಕಿಂಗ್ ಮೇಕರ್’ ಆಗಿ ಪರಿಣಮಿಸಬಹುದು.

ಮುಂದಿನ ವಾರ ಫಲಿತಾಂಶ ಹೊರಬೀಳುತ್ತಿದ್ದಂತೆ ಈ ಐದು ರಾಜ್ಯಗಳ ತೀರ್ಪನ್ನು ಜನರು ಮುಂದಿನ ವರ್ಷದಲೋಕಸಭಾ ಮಹಾಸಮರದ ದಿಕ್ಸೂಚಿಯಾಗಿ ಪರಿಗಣಿಸಬಹುದು. ಒಂದೆಡೆ ಬಿಜೆಪಿ ಮತ್ತು ಅದನ್ನು ಒಳಗೊಂಡ ಎನ್‌ಡಿಎ ಮೈತ್ರಿಕೂಟಕ್ಕೆ ಹಾಗೂ ಮತ್ತೊಂದೆಡೆ ಮೈತ್ರಿರಂಗ ರಚನೆ ಯತ್ನದಲ್ಲಿರುವ ಬಿಜೆಪಿ ವಿರೋಧಿ ಶಕ್ತಿಗಳ ವ್ಯೂಹ ರಚನೆಗೆ ಇದು ಅತ್ಯಂತ ಮಹತ್ವದ್ದಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು