ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಚುನಾವಣೆ ಉಳಿಸಿಹೋಗಿರುವ ಪ್ರಶ್ನೆಗಳು

ಸಿಬಂತಿ ಪದ್ಮನಾಭ ಕೆ.ವಿ. Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಪುಟ್ಟಹಳ್ಳಿಯ ಮತಗಟ್ಟೆಯೊಂದರಲ್ಲಿ ಪ್ರಿಸೈಡಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಾ, ಬಂದು ಹೋಗುವವರನ್ನು ಕುತೂಹಲದಿಂದ ಗಮನಿಸುತ್ತಾ ಇದ್ದೆ. ಮೊದಲ ಬಾರಿ ಮತ ಚಲಾಯಿಸುವ ಉಮೇದಿನ ನವತರುಣರು, ಆಗಷ್ಟೇ ಹಟ್ಟಿಯ ಗಂಜಳ ಬಳಿದು ಉಟ್ಟ ಬಟ್ಟೆಯಲ್ಲೇ ಬಂದು ಸರತಿಯಲ್ಲಿ ನಿಂತ ಹೆಮ್ಮಕ್ಕಳು, ಆಡು-ಕುರಿ ಮಂದೆಯನ್ನು ಎಬ್ಬುತ್ತಾ ಒಂದಿಷ್ಟು ಹೊತ್ತು ವಿರಾಮ ತೆಗೆದುಕೊಂಡು, ಹಾಗೇ ವೋಟು ಹಾಕಿ ಹೋಗೋಣ ಎಂದು ಅಡಾವುಡಿಯಿಂದ ಧಾವಿಸುತ್ತಿದ್ದ ಮಧ್ಯವಯಸ್ಕರು, ಏರಿದ ನಶೆಯಿಂದ ಓಲಾಡುತ್ತಿದ್ದರೂ ಮತಹಾಕುವ ಪ್ರಜ್ಞೆ ಮರೆಯದ ಮದ್ಯಪಾನಿಗಳು, ಮನೆಮಂದಿಯ, ನೆರೆಹೊರೆಯವರ ಸಹಾಯದಿಂದಲಾದರೂ ವೋಟು ಹಾಕೇಬಿಡಬೇಕೆನ್ನುವ ಹಟದಿಂದ ಬೂತಿಗೆ ಕಾಲಿಟ್ಟ ವಯೋವೃದ್ಧರು, ಅಂಗವಿಕಲರು... ಅದೊಂದು ಪುಟ್ಟ ಗ್ರಾಮಭಾರತವೇ ಸರಿ.

ಹಳ್ಳಿ ಪುಟ್ಟದಾದರೂ ಒಂದೇ ಮತಗಟ್ಟೆಯಲ್ಲಿ 1,200ಕ್ಕಿಂತಲೂ ಹೆಚ್ಚು ಮತದಾರರಿದ್ದರು. ಸಂಜೆಯಾಗುತ್ತಿದ್ದಂತೆ ಸರತಿ ಕರಗುವ ಬದಲು ಬೆಳೆಯುತ್ತಲೇ ಹೋಯಿತು. ತಾಂತ್ರಿಕ ದೋಷದಿಂದಾಗಿ ಎರಡು ಬಾರಿ ಮತದಾನದಲ್ಲಿ ಅರ್ಧರ್ಧ ಗಂಟೆ ತಡವಾದ್ದರಿಂದಲೂ ಮತ ಹಾಕಬೇಕಾದವರ ಗುಂಪು ಕೊಂಚ ದೊಡ್ಡದಾಗಿಯೇ ಇತ್ತು. ಇನ್ನೇನು ಐದೂವರೆ ಆಗುತ್ತಿದ್ದಾಗ ಹಳ್ಳಿಜನರಲ್ಲಿ ಆತಂಕ, ನೂಕಾಟ, ತಳ್ಳಾಟ ಹೆಚ್ಚಾಯಿತು. ಏನಿಲ್ಲವೆಂದರೂ ನೂರೈವತ್ತು ಮಂದಿ ಸರತಿಯಲ್ಲಿದ್ದರು.

‘ನೋಡಿ, ಗಡಿಬಿಡಿ ಮಾಡಿಕೊಳ್ಳಬೇಡಿ. ರಾತ್ರಿ ಹತ್ತಾದರೂ ಪರ್ವಾಗಿಲ್ಲ. ಎಲ್ಲರನ್ನೂ ವೋಟು ಹಾಕಿಸಿಯೇ ಕಳಿಸೋದು’ ಎಂಬ ಸಮಾಧಾನದ ಮಾತುಗಳನ್ನಾಡಿದ ಮೇಲೆ ಜನರು ಸುಮ್ಮನಾದರು. ಮತ್ತೆ ಶಿಸ್ತಾಗಿ ನಿಂತರು. ಅಂತೂ ಬೂತಿಗೆ ಬಂದ ಪ್ರತಿಯೊಬ್ಬರೂ ವೋಟು ಹಾಕಿದ್ದಾರೆಂದು ಖಾತ್ರಿಪಡಿಸಿ ಮತದಾನ ಮುಕ್ತಾಯಗೊಳಿಸಿದಾಗ ಸಂಜೆ ಏಳೂಮುಕ್ಕಾಲು.

ಹೊಸ ಸಹಸ್ರಮಾನ ಹೊಕ್ಕು ಎರಡು ದಶಕಗಳೇ ಉರುಳಿದರೂ ಮತದಾರರ ರಿಜಿಸ್ಟರಿನಲ್ಲಿ ಹೆಬ್ಬೆಟ್ಟು ಹಾಕಿದ ಮಂದಿ ಏನಿಲ್ಲವೆಂದರೂ ಶೇ 40ರಷ್ಟು ಇದ್ದರು. ಉದ್ಯೋಗಕ್ಕಾಗಿ ಪಟ್ಟಣಕ್ಕೆ ವಲಸೆ ಹೋದವರಾದರೂ ಬಂದು ಮತದಾನದಲ್ಲಿ ಪಾಲ್ಗೊಳ್ಳದಿರಬಹುದು, ಆದರೆ ಈ ಹೆಬ್ಬೆಟ್ಟು ಮಂದಿ ಮಾತ್ರ ವೋಟು ಹಾಕುವ ತಮ್ಮ ಹಕ್ಕನ್ನು ಬಿಟ್ಟುಕೊಟ್ಟವರಲ್ಲ. ಎಂಬತ್ತೈದು ದಾಟಿದ ಓರ್ವ ವೃದ್ಧನಂತೂ ತನ್ನ ಸಂಗಡಿಗನಿಗೆ ‘ಮಷಿನ್ ಬಳಿ ನಂಜೊತೆ ನೀನು ಬರ್ಬೇಕಾಗಿಲ್ಲ, ವೋಟು ಒತ್ತೋದು ಹೆಂಗೇಂತ ನನಗ್ಗೊತ್ತು’ ಎಂದು ನಯವಾಗಿ ಗದರಿದ ರೀತಿಯಂತೂ ನೆನಪಿನಲ್ಲಿ ಉಳಿಯುವ ದೃಶ್ಯವಾಗಿತ್ತು. ಭಾರತದ ಆತ್ಮವು ಆಕೆಯ ಹಳ್ಳಿಗಳಲ್ಲಿದೆ ಎಂಬ ಮಾತಿನ ಅಂತರಾರ್ಥ ಮನವರಿಕೆಯಾಗುವುದು ವೋಟಿನ ಬೂತಿನಲ್ಲಿಯೇ ಇರಬೇಕು.

ಇನ್ನೊಂದೆಡೆ, ಬೆಂಗಳೂರಿನಲ್ಲಿ ಮತದಾನ ಈ ಬಾರಿಯೂ ಶೇ 55 ಮೀರಲಿಲ್ಲವಂತೆ ಎಂಬ ಸುದ್ದಿ ಒಳಮನಸ್ಸನ್ನು ಕಲಕುತ್ತಿತ್ತು. ‘ಯಾರೊಬ್ಬರೂ ಮತದಾನದಿಂದ ವಂಚಿತರಾಗಕೂಡದು’ ಎಂಬುದು ಚುನಾವಣಾ ಆಯೋಗದ ಈ ಬಾರಿಯ ಪ್ರಮುಖ ಘೋಷಣೆ. ಮತದಾನ ಮಾಡುವುದು ಎಷ್ಟು ಮಹತ್ವದ್ದು ಎಂಬ ಜಾಗೃತಿ ಅಭಿಯಾನ ನ ಭೂತೋ ಎಂಬಷ್ಟು ಜೋರಾಗಿ ಎಲ್ಲ ಮಾಧ್ಯಮಗಳಲ್ಲೂ ನಡೆದಿತ್ತು. ಆದರೂ ಮಹಾನಗರಗಳಲ್ಲಿ ಮತದಾನದ ಪ್ರಮಾಣದಲ್ಲಿ ಅಂತಹ ಬದಲಾವಣೆಯೇನೂ ಆಗಲಿಲ್ಲ.

ಬೆಂಗಳೂರಿನಲ್ಲೇಕೆ ಮತದಾನದ ಪ್ರಮಾಣ ಹೆಚ್ಚಾಗಿಲ್ಲ ಎಂಬ ಪ್ರಶ್ನೆಗೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಹೊಸ ವಿಶ್ಲೇಷಣೆಗಳು ಹೊರಬರುತ್ತಿವೆ. ಅವುಗಳಲ್ಲಿ ಒಪ್ಪುವಂಥವೂ ಇವೆ. ಬೆಂಗಳೂರಿನಲ್ಲಿ ಇರುವವರಲ್ಲಿ ಬಹುಪಾಲು ಉದ್ಯೋಗ ನಿಮಿತ್ತ ಬೇರೆ ಊರುಗಳಿಂದ ಬಂದವರು. ಅವರು ತಮ್ಮ ಊರಿನಲ್ಲಿಯೇ ಮತ ಹಾಕುತ್ತಾರೆ. ವಿಳಾಸದ ಉದ್ದೇಶಕ್ಕೆ ಬೆಂಗಳೂರಿನಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡಿದ್ದಾರೆ. ಇನ್ನೊಂದಷ್ಟು ಮಂದಿ ನೆರೆರಾಜ್ಯಗಳ ವಲಸಿಗರು. ಅವರ ಕತೆಯೂ ಇಷ್ಟೇ. ಎರಡು ಕಡೆ ಹೆಸರು, ಗುರುತಿನ ಚೀಟಿ. ಇದರಿಂದಾಗಿ ನಮ್ಮಲ್ಲಿ ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ ಎಂಬುದೊಂದು ವಿಶ್ಲೇಷಣೆ.

ಇದು ನಿಜವಾಗಿದ್ದರೆ ಇದೂ ಇನ್ನೊಂದು ಅಕ್ರಮ ವಾಗುತ್ತದೆ. ಏಕೆಂದರೆ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದೂ ಕಾನೂನುಬಾಹಿರ. ಜೊತೆಗೆ ಒಬ್ಬನ ಹೆಸರು ಎರಡೋ ಮೂರೋ ಕಡೆ ಹೇಗೆ ಸೇರಿಕೊಂಡಿತು? ಹೀಗೆ ಸೇರಿಸಿದವರು ಯಾರು? ಒಂದು ಕಡೆ ಹೆಸರು ಅಳಿಸಿದ ಮೇಲೆ, ಅದಕ್ಕೆ ಸೂಕ್ತ ದಾಖಲೆ ನೀಡಿದ ಮೇಲೆಯೇ ಇನ್ನೊಂದು ಕಡೆ ಹೆಸರು ಸೇರಿಸಲು ಸಾಧ್ಯ. ಹಾಗಾದರೆ ಇವರು ಹೇಗೆ ಅಕ್ರಮವಾಗಿ ಹೆಸರು ಸೇರಿಸಿಕೊಂಡರು? ಇನ್ನೊಂದೆಡೆ, ಮತದಾನ ಮಾಡಲು ಹೋದರೂ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಹಿಂತಿರುಗಿದವರ ಸಂಖ್ಯೆಯೂ ದೊಡ್ಡದಿದೆ. ಇದೆಲ್ಲ ಹೇಗಾಯಿತು? ಯಾಕಾಯಿತು?

ಇಂತಹ ಪ್ರಕರಣಗಳ ಹೊರತಾಗಿಯೂ ಮತದಾನದಿಂದ ಹೊರಗುಳಿದವರ ಪ್ರಮಾಣ ದೊಡ್ಡದಾಗಿಯೇ ಇದೆ. ‘ಮತದಾನ ಮಾಡದಿರುವುದೂ ಒಂದು ಹಕ್ಕು, ನನ್ನನ್ನು ಯಾರೂ ಒತ್ತಾಯಿಸಲಾಗದು’ ಎಂಬ ಮಾತುಗಳೂ ಈ ಬಾರಿ ಕೇಳಿಬಂದವು. ಯಾವುದನ್ನೂ ಯಾರ ಮೇಲೂ ಒತ್ತಾಯಪೂರ್ವಕವಾಗಿ ಹೇರಬಾರದು ಎಂಬುದು ಪ್ರಜಾಪ್ರಭುತ್ವದ ಮೌಲ್ಯವಾಗಿದ್ದರೂ ಮತದಾನದ ವಿಷಯಕ್ಕೆ ಅದನ್ನು ಅನ್ವಯಿಸುವುದು ಎಷ್ಟು ಸಮಂಜಸವಾಗುತ್ತದೆ?

ಹಾಗಾದರೆ ವೋಟು ಹಾಕದವರು ಯಾರು, ಅವರು ಯಾವ ಕಾರಣಕ್ಕೆ ವೋಟು ಹಾಕಿಲ್ಲ ಎಂಬುದರ ಬಗ್ಗೆ ಒಂದು ಗಂಭೀರ ಅಧ್ಯಯನ ನಡೆಯಬೇಡವೇ? ಎಲ್ಲರಿಗೂ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ಕೆಲವರು ಉದಾಸೀನದಿಂದ ದೂರವುಳಿದಿರ ಬಹುದು, ಇನ್ನು ಕೆಲವರು ಮತಪಟ್ಟಿಯಲ್ಲಿನ ದೋಷಕ್ಕೆ ಬಲಿಪಶುಗಳಾಗಿರಬಹುದು ಅಥವಾ ತಮ್ಮದೇ ಸಮಜಾಯಿಷಿ ಹೊಂದಿರಬಹುದು. ಹಾಗಾದರೆ ಅದು ಏನು ಎಂಬುದನ್ನು ತಿಳಿದುಕೊಳ್ಳುವುದು ಭವಿಷ್ಯದ ಚುನಾವಣೆಗಳ ದೃಷ್ಟಿಯಿಂದ ಪ್ರಮುಖವಾಗುತ್ತದೆ.

ಈ ಬಾರಿಯ ಚುನಾವಣೆಯಂತೂ ನೂರು ಪ್ರತಿಶತ ಸೋಷಿಯಲ್ ಮೀಡಿಯಾ ಚುನಾವಣೆ ಆಗಿಹೋಯಿತು. ಚುನಾವಣಾ ಪ್ರಚಾರ, ಚುನಾವಣಾಪೂರ್ವ ವಿಶ್ಲೇಷಣೆ- ಸಮೀಕ್ಷೆ, ಮತದಾನ ಪ್ರಕ್ರಿಯೆ, ಫಲಿತಾಂಶ ಎಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲೇ ನಡೆದವು, ನಡೆಯುತ್ತಿವೆ. ಸಾವಿರಾರು ಮಂದಿ ತಾವು ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗೆ ಮತ ಹಾಕಿದೆವೆಂದು ಕೂಡಲೇ ವಾಟ್ಸ್ಆ್ಯಪ್, ಫೇಸ್‍ಬುಕ್ಕಿನಲ್ಲಿ ಘೋಷಿಸಿಬಿಟ್ಟರು- ಎಂಬಲ್ಲಿಗೆ ಭಾರತದ ಸಂವಿಧಾನ ಒಪ್ಪಿಕೊಂಡಿರುವ ರಹಸ್ಯ ಮತದಾನ ಪದ್ಧತಿ ಸಂಪೂರ್ಣವಾಗಿ ಬಟಾಬಯಲಿಗೆ ಬಂತು.

ಜನಸಾಮಾನ್ಯರೇನು, ಚುನಾವಣೆಯ ವಿದ್ಯಮಾನಗಳನ್ನು ಸರಿಯಾಗಿ ಬಲ್ಲವರು, ಪತ್ರಕರ್ತರು... ಎಲ್ಲರೂ ಈ ವಿಚಾರದಲ್ಲಿ ಒಂದೇ ರೀತಿ ವರ್ತಿಸಿದರು. ತಾನು ಇಂಥವರಿಗೆ ವೋಟ್ ಮಾಡಿದೆ, ನೀವೂ ಅವರಿಗೇ ವೋಟ್ ಮಾಡಿ ಅಥವಾ ನೀವು ಇಂಥ ವ್ಯಕ್ತಿಯ ವಿರುದ್ಧ ಮತ ಚಲಾಯಿಸಿ ಎಂದು ರಾಜಾರೋಷವಾಗಿ ಕರೆ ಕೊಟ್ಟರು. ಇದು ಸೀಕ್ರೆಟ್ ಬ್ಯಾಲಟ್ ಪದ್ಧತಿಯ ಸ್ಪಷ್ಟ ಉಲ್ಲಂಘನೆಯಲ್ಲವೇ? ತಿಳಿವಳಿಕೆಯಿಲ್ಲದವರಿಗೆ ತಿಳಿಸಿ ಹೇಳಬಹುದು, ಎಲ್ಲವನ್ನೂ ಬಲ್ಲವರಿಗೆ ಏನೆಂದು ಹೇಳಬೇಕು? 

ಆದಾಗ್ಯೂ ಪೂರ್ತಿ ಚುನಾವಣೆಯೇ ಜಾತಿ ಲೆಕ್ಕಾಚಾರದ ಮೇಲೆ ನಡೆಯುತ್ತಿರುವಾಗ, ವೈಯಕ್ತಿಕ ತೇಜೋವಧೆಯೇ ಚುನಾವಣಾ ಪ್ರಚಾರ ಆಗಿರುವಾಗ, ಹಾಡಹಗಲೇ ಕೋಟ್ಯಂತರ ರೂಪಾಯಿ ಸಾಗಾಟ ನಡೆಯುತ್ತಿರುವಾಗ, ಹಣ-ಮದ್ಯ-ಉಡುಗೊರೆಗಳ ಆಧಾರದಲ್ಲೇ ಬಹುಪಾಲು ಮತದಾನ ನಡೆಯುತ್ತಿರುವಾಗ ಸೋಷಿಯಲ್ ಮೀಡಿಯಾದಲ್ಲಿ ಸೀಕ್ರೆಟ್ ಬ್ಯಾಲಟ್ ಪದ್ಧತಿಯನ್ನು ಉಲ್ಲಂಘಿಸಿದರು ಎಂದು ಪ್ರಲಾಪಿಸುವುದೂ ತಮಾಷೆಯಾಗಿ ಕಾಣಬಹುದು.


ಸಿಬಂತಿ ಪದ್ಮನಾಭ ಕೆ.ವಿ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ತುಮಕೂರು ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು