ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್‌ನಿಂದ ಮಂಕುಬೂದಿ: ಬಿ.ವೈ.ರಾಘವೇಂದ್ರ ಸಂದರ್ಶನ

ಸಂಸದ ಬಿ.ವೈ.ರಾಘವೇಂದ್ರ ಸಂದರ್ಶನ
Published 4 ಮೇ 2024, 8:57 IST
Last Updated 4 ಮೇ 2024, 8:57 IST
ಅಕ್ಷರ ಗಾತ್ರ

ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ 4ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚುನಾವಣೆ ಪ್ರಚಾರಕ್ಕಾಗಿ ಬಿಸಿಲ ಝಳದ ನಡುವೆ ಕ್ಷೇತ್ರಾದ್ಯಂತ ಸುತ್ತುತ್ತಿರುವ ಅವರು ಬಹಿರಂಗ ಸಭೆಗಳನ್ನು ನಡೆಸಿ ಮತಯಾಚನೆ ಮಾಡುತ್ತಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಆಯನೂರಿನಲ್ಲಿ ಬಹಿರಂಗ ಸಭೆ ಮುಗಿಸಿ ಶಿಕಾರಿಪುರ ತಾಲ್ಲೂಕಿನ ಹೊಸೂರಿಗೆ ಹೊರಟ ವೇಳೆ ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು.

* ಕ್ಷೇತ್ರದಲ್ಲಿ ವಾತಾವರಣ ಹೇಗಿದೆ?

ವಾತಾವರಣ ಬಿಜೆಪಿ ಪರವಾಗಿ ಇದೆ ಅನ್ನಿಸುತ್ತಿದೆ. ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ. ಅವರ ಶ್ರಮ ಹಾಗೂ ಸಂಘಟನೆಯ (ಆರ್‌ಎಸ್‌ಎಸ್) ಆಶೀರ್ವಾದ ನನ್ನ ಗೆಲುವಿಗೆ ನೆರವಾಗಲಿದೆ.

* ಕ್ಷೇತ್ರದಲ್ಲಿ ನಿಮಗೆ ನೇರ ಎದುರಾಳಿ ಯಾರು?

ಇಲ್ಲಿ ನಮಗೆ ಕಾಂಗ್ರೆಸ್ ಪಕ್ಷ ನೇರ ಎದುರಾಳಿ. ಕಳೆದ ಮೂರು ಚುನಾವಣೆಯಲ್ಲೂ ಶಿವಮೊಗ್ಗದಲ್ಲಿ ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಫೈಟ್ ಇತ್ತು. ಆಗೆಲ್ಲಾ ಜೆಡಿಎಸ್–ಕಾಂಗ್ರೆಸ್ ನಡುವೆ ಹೊಂದಾಣಿಕೆ ಇರುತ್ತಿತ್ತು. ಈ ಬಾರಿ ಜೆಡಿಎಸ್‌ ನಮ್ಮ ಪರ ನಿಂತಿದೆ. ಅದು ನಮ್ಮ ಶಕ್ತಿ ಹೆಚ್ಚಿಸಿದೆ.

* ಕಾಂಗ್ರೆಸ್–ಜೆಡಿಎಸ್ ನಡುವಿನ ಮೈತ್ರಿ ಹಿಂದಿನ ಚುನಾವಣೆಯಲ್ಲಿ ಲಾಭ ತಂದಿಲ್ಲ. ಈಗ ಬಿಜೆಪಿಗೆ ಲಾಭವಾಗಲಿದೆಯೇ?

ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಖಂಡಿತ ನಮಗೆ ಶೇ.100ರಷ್ಟು ಲಾಭವಾಗಲಿದೆ. ಕಾಂಗ್ರೆಸ್ಸೇತರ ಶಕ್ತಿಗಳ ಹೊಂದಾಣಿಕೆ ಕರ್ನಾಟಕದಲ್ಲಿ ಚೆನ್ನಾಗಿ ಆಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಹಾಲು–ಜೇನಿನಂತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕೂಡ ಬಂದು ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸಿದ್ದಾರೆ.

* ಕಾಂಗ್ರೆಸ್‌ ಪಕ್ಷದ ‘ಗ್ಯಾರಂಟಿ ಅಲೆ’ ಹೇಗೆ ಎದುರಿಸಲಿದ್ದೀರಿ?

ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಜನಸಾಮಾನ್ಯರಿಗೆ ಮಂಕುಬೂದಿ ಎರಚಿದೆ. ಜನರಿಗೆ ₹ 5 ಕೊಡುವ ನೆಪದಲ್ಲಿ ವಾಪಸ್ ಅವರಿಂದ ₹ 10 ಕಿತ್ತುಕೊಳ್ಳುತ್ತಿದೆ. ಪ್ರತೀ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ಕೊಡುವುದಾಗಿ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ನವರು ಹೇಳಿದ್ದರು. ಆದರೆ, ಅದರಲ್ಲಿ 5 ಕೆ.ಜಿ. ನರೇಂದ್ರ ಮೋದಿ ಕೊಡುತ್ತಿದ್ದಾರೆ. ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ₹ 38 ಕೊಡಲಾಗುತ್ತಿದೆ. ಆ ಹಣದಲ್ಲಿ 1 ಕೆ.ಜಿ. ಅಕ್ಕಿ ಕೂಡ ಬರುವುದಿಲ್ಲ. ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ಕೊಡುವುದಾಗಿ ಹೇಳಿದ್ದರು. ಅದನ್ನು ಪದವಿ ಪಡೆದು 2 ವರ್ಷಗಳವರೆಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಮದ್ಯದ ಬೆಲೆ ಹಾಗೂ ಬಸ್‌ ಚಾರ್ಜ್ ಹೆಚ್ಚಳ ಮಾಡಿದ್ದಾರೆ. ಇದನ್ನೆಲ್ಲ ಮಹಿಳೆಯರಿಗೆ ಮನವರಿಕೆ ಮಾಡಿಕೊಡಲು ಈಗಾಗಲೇ ನೂರಾರು ಸಭೆ ಮಾಡಿದ್ದೇವೆ.

* ಬಿಜೆಪಿ ಕಳೆದ 10 ವರ್ಷಗಳಲ್ಲಿ ಜನರಿಗೆ ಬರೀ ಚೊಂಬು ಕೊಟ್ಟಿದೆ ಎಂದು ಕಾಂಗ್ರೆಸ್‌ಹೇಳುತ್ತಿದೆಯಲ್ಲ?

ಕಾಂಗ್ರೆಸ್ ಪಕ್ಷ ದೇಶದಲ್ಲಿ ಇಷ್ಟು ವರ್ಷ ಬರೀ ಬಡತನವನ್ನು ಪ್ರೀತಿ ಮಾಡಿಕೊಂಡು ಬಂದಿದೆಯೇ ಹೊರತು ಬಡವರನ್ನಲ್ಲ. ಅದರ ಈ ಧೋರಣೆಯ ಫಲ ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಉಳಿದಿಲ್ಲ. 60 ವರ್ಷ ಆಳ್ವಿಕೆ ಮಾಡಿದರೂ ದೇಶದ ಜನರಿಗೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್‌ನವರು. ಅದರ ಪ್ರತಿಫಲ ಈಗ ಉಣ್ಣುತ್ತಿದ್ದಾರೆ. ‘ಗ್ಯಾರಂಟಿ’ ಅನುಷ್ಠಾನ ಮಾಡಿದ್ದೇವೆ ಎಂದು ಹೇಳುತ್ತಾ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಮರೆತಿದ್ದಾರೆ. ಗುತ್ತಿಗೆದಾರರಿಗೆ ಬಿಲ್‌ ಪಾವತಿ ಆಗುತ್ತಿಲ್ಲ. 27 ಲಕ್ಷ ಹೈನುಗಾರರಿಗೆ ಕೊಡಬೇಕಾದ ₹ 680 ಕೋಟಿ ಕೊಟ್ಟಿಲ್ಲ. ಅಷ್ಟೊಂದು ಆರ್ಥಿಕ ದುಃಸ್ಥಿತಿ ಸರ್ಕಾರಕ್ಕೆ ಬಂದಿದೆ.

* ಶಿವಮೊಗ್ಗ ಕ್ಷೇತ್ರದ ಜನರು ನಿಮಗೇಲೆ ಮತ ಹಾಕಬೇಕು?

ಕಳೆದ ಅವಧಿಯಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಈ ಬಾರಿ ಗೆದ್ದರೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವೆ. ಡೀಮ್ಡ್ ಫಾರೆಸ್ಟ್, ಕಸ್ತೂರಿ ರಂಗನ್ ವರದಿ ವಿಚಾರಗಳಲ್ಲಿ ಮಲೆನಾಡಿನ ಜನರು ಗಾಬರಿಯಲ್ಲಿದ್ದಾರೆ. ಅವರು ನೆಮ್ಮದಿಯಿಂದ ಬದುಕಲು ಬೇಕಾದಂತಹ ವ್ಯವಸ್ಥೆ ಆಗಲಿದೆ. ಬಂಡವಾಳ ಹಿಂತೆಗೆತ (ಡಿಸ್ ಇನ್‌ವೆಸ್ಟ್‌ಮೆಂಟ್) ಪಟ್ಟಿಯಿಂದ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಹೊರಗೆ ತೆಗೆಯಿಸಿ ಕೇಂದ್ರದಿಂದ ಬಂಡವಾಳ ಹೂಡಿಸಿ ಮತ್ತೆ ಜೀವ ಕೊಡುವ ಕೆಲಸ ಮಾಡುತ್ತೇನೆ. ಅದಕ್ಕೆ ಈಗಾಗಲೇ ಗೃಹ ಸಚಿವ ಅಮಿತ್ ಶಾ ಲಿಖಿತ ರೂಪದಲ್ಲಿ ಭರವಸೆ ಕೊಟ್ಟಿದ್ದಾರೆ. ಮಲೆನಾಡಿನಲ್ಲಿ ಗಂಭೀರವಾಗಿರುವ ಮಂಗನ ಕಾಯಿಲೆಗೆ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗುವುದು.

* ಬಿಜೆಪಿ ಅಧಿಕಾರದಲ್ಲಿದ್ದರೂ ಬಗರ್‌ಹುಕುಂ ಸಾಗುವಳಿದಾರರಿಗೆ ಏನೂ ಮಾಡಲಿಲ್ಲ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆಯಲ್ಲ?

ಬಗರ್‌ ಹುಕುಂ ಸಾಗುವಳಿದಾರರ ಪರ ಯಡಿಯೂರಪ್ಪ ಅವರು, ಶಾಸಕರಾಗಿದ್ದ ಅಶೋಕ ನಾಯ್ಕ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಸೇರಿ ಎಲ್ಲರೂ ಕೆಲಸ ಮಾಡಿ ಕಂದಾಯ ಭೂಮಿಯ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿಸಿದ್ದಾರೆ. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ಕೊಡುವುದು ಮಾತ್ರ ಬಾಕಿ ಉಳಿದಿದೆ. ಅದಕ್ಕೆ ಕಾನೂನಿನಡಿ ತೊಡಕುಗಳಿವೆ. ಬಗರ್‌ ಹುಕುಂ ವಿರುದ್ಧ ರಾಮಕೃಷ್ಣ ಹೆಗಡೆ ಕರಾಳ ಮಸೂದೆ ಮಾಡಲು ಹೊರಟಾಗ ಹೋರಾಟ ಮಾಡಿ ಅದನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದು ಯಡಿಯೂರಪ್ಪ. ಎಸ್‌.ಎಂ. ಕೃಷ್ಣ ಅವಧಿಯಲ್ಲಿಯೂ ಮತ್ತೆ ಶಿಕಾರಿಪುರದಿಂದ ಪಾದಯಾತ್ರೆ ಮಾಡಿದ್ದರು. ಅದನ್ನು ಕಾಂಗ್ರೆಸ್‌ನವರು ನೆನಪಿಸಿಕೊಳ್ಳಲಿ.

* ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡುಹಿಡಿಯಲು ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಅಮಿತ್‌ ಶಾ ಹೇಳಿದ್ದರು. ಅದು ಭರವಸೆಯಾಗಿಯೇ ಉಳಿದಿದೆಯಲ್ಲ?

ಅಡಿಕೆ ಸಂಶೋಧನೆಗೆ ಸಂಬಂಧಿಸಿದ ತೀರ್ಥಹಳ್ಳಿಯಲ್ಲಿನ ಈಗಿನ ಸಂಶೋಧನಾ ಕೇಂದ್ರ ಮೇಲ್ದರ್ಜೆಗೇರಿಸಿ ಅಲ್ಲಿ ಸಂಶೋಧನೆ ನಡೆಸಲು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ₹ 10 ಕೋಟಿ ಘೋಷಣೆ ಮಾಡಿದ್ದಾರೆ. ಹಂತಹಂತವಾಗಿ ಹಣನುದಾನ ಬಿಡುಗಡೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಮದು ಶುಲ್ಕ ಹೆಚ್ಚಿಸಿದ್ದರಿಂದ ಬೆಲೆ ₹ 50,000ದ ಆಸುಪಾಸಿನಲ್ಲಿ ಸ್ಥಿರವಾಗಿದೆ.

* ನನ್ನದೇ ನಿಜವಾದ ಹಿಂದುತ್ವ. ಯಡಿಯೂರಪ್ಪ ಕುಟುಂಬದ್ದು ನಕಲಿ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ?

ಹಿಂದುತ್ವ ಅಂದರೆ ಬರೀ ಪ್ರಚಾರದ ಸರಕಲ್ಲ. ಅದು ನಮ್ಮ ನಡವಳಿಕೆ. ಜೀವನ ವಿಧಾನ. ಯಡಿಯೂರಪ್ಪ ಅವರು ಸಂಘದ ಸ್ವಯಂ ಸೇವಕರಾಗಿ, ಪ್ರಚಾರಕರಾಗಿ ಶಾಖೆಗಳನ್ನು ಕಟ್ಟಿ, ಸಂಘಟನೆ ಕಟ್ಟಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಹೋರಾಟ, ಕಾಶ್ಮೀರದ ಲಾಲ್‌ಚೌಕದಲ್ಲಿ ಗ್ರೆನೇಡ್ ದಾಳಿಯ ನಡುವೆ ಧ್ವಜ ಹಾರಿಸಿದ್ದಾರೆ. ರಾಮ ಮಂದಿರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹಿಂದುತ್ವದ ಆಶಯದಲ್ಲಿಯೇ ಯಡಿಯೂರಪ್ಪ ಸಿಎಂ ಆಗಿ ಆಡಳಿತ ಕೊಟ್ಟಿದ್ದಾರೆ. ಗೋಹತ್ಯೆ ನಿಯಂತ್ರಿಸಲು ಬಿಗಿ ಕಾನೂನು ತಂದವರು ಯಡಿಯೂರಪ್ಪ. ನಾನೂ ಆರ್‌ಎಸ್‌ಎಸ್ ಶಾಲೆಯಲ್ಲಿ ಓದಿದ್ದೇನೆ. ಹೀಗಾಗಿ ಹಿಂದುತ್ವದ ವಿಚಾರದಲ್ಲಿ ಯಾರಿಂದಲೂ ಹೇಳಿಸಿಕೊಳ್ಳುವ ಪರಿಸ್ಥಿತಿ ನಮ್ಮ ಕುಟುಂಬಕ್ಕಿಲ್ಲ.

* ಈ ಬಾರಿ ನಿಮ್ಮನ್ನು ಸೋಲಿಸುವುದಾಗಿ ಈಶ್ವರಪ್ಪ ಶಪಥ ಮಾಡಿದ್ದಾರಲ್ಲ?

ಅದು ನಮ್ಮ ದೌರ್ಭಾಗ್ಯ. ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಹಿಂದಿನ ಚುನಾವಣೆಗಳಲ್ಲಿ ಹಿಂದೆ ಏನು ಅಭಿವೃದ್ಧಿ ಮಾಡಿದ್ದೇವೆ, ಮುಂದೆ ಏನು ಮಾಡಲಿದ್ದೇವೆ ಎಂಬುದರ ಚರ್ಚೆ ಆಗುತ್ತಿತ್ತು. ಆದರೆ ಈ ಬಾರಿ ವೈಯಕ್ತಿಕ ಟೀಕೆ– ಟಿಪ್ಪಣಿಗಳು ಆಗುತ್ತಿವೆ. ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಚುನಾವಣೆ ನಂತರ ಮತದಾರರೇ ಅದಕ್ಕೆ ಉತ್ತರ ಕೊಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT