ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍ಕ್ಷೇತ್ರ ಪರಿಚಯ: ಮಹಾರಾಷ್ಟ್ರದ ಪರ್ಭಣಿ

Published 22 ಏಪ್ರಿಲ್ 2024, 23:27 IST
Last Updated 22 ಏಪ್ರಿಲ್ 2024, 23:27 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಪರ್ಭಣಿ ಲೋಕಸಭಾ ಕ್ಷೇತ್ರವು ಸಂಜಯ್‌ ಜಾಧವ್‌ ಮತ್ತು ಮಹಾದೇವ್ ಜಾನ್ಕರ್‌ ನಡುವಣ ನೇರ ಹಣಾಹಣಿಯಿಂದ ಗಮನ ಸೆಳೆದಿದೆ. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾದಲ್ಲಿರುವ (ಯುಬಿಟಿ) ಜಾಧವ್‌ ಅವರು ಇಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಈ ಸಲ ಅವರು ಮಹಾ ವಿಕಾಸ್ ಆಘಾಡಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

 ಧನ್‌ಗರ್ ಸಮುದಾಯದ ಮುಖಂಡ, ರಾಷ್ಟ್ರೀಯ ಸಮಾಜ ಪಕ್ಷದ ಸ್ಥಾಪಕ ಮಹಾದೇವ್ ಅವರನ್ನು ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟವು ಅಖಾಡಕ್ಕಿಳಿಸಿದೆ. ಈ ಕ್ಷೇತ್ರವು ಅವಿಭಜಿತ ಶಿವಸೇನಾದ ಭದ್ರಕೋಟೆಯಾಗಿದೆ. ಕಳೆದ ಚುನಾವಣೆಯಲ್ಲಿ ಶಿವಸೇನಾದಿಂದ ಸ್ಪರ್ಧಿಸಿದ್ದ ಜಾಧವ್‌ ಅವರು 42,199 ಮತಗಳಿಂದ ಸಮೀಪದ ಪ್ರತಿಸ್ಪರ್ಧಿ ಎನ್‌ಸಿಪಿಯ ರಾಜೇಶ್‌ ವಿಟೆಕರ್‌ ಅವರನ್ನು ಪರಾಭವಗೊಳಿಸಿದ್ದರು. ಆದರೆ ಶಿವಸೇನಾ ವಿಭಜನೆಯಾಗಿರುವುದರಿಂದ ಮತ್ತು ‘ಮಹಾಯುತಿ’ ಮೈತ್ರಿಕೂಟವು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರುವುದರಿಂದ ಈ ಬಾರಿ ತುರುಸಿನ ಹೋರಾಟ ನಿರೀಕ್ಷಿಸಲಾಗಿದೆ.

ಧನ್‌ಗರ್‌ ಸಮುದಾಯದವರು ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಶೇ 9 ರಷ್ಟಿದ್ದು, ಪರ್ಭಣಿ ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಜಾನ್ಕರ್‌ ಅವರು ಪರ್ಭಣಿ ಕ್ಷೇತ್ರಕ್ಕೆ ಸೇರಿದವರಲ್ಲ. ಇದರಿಂದ ಚುನಾವಣಾ ಕಣದಲ್ಲಿ ‘ಹೊರಗಿನವರು– ಒಳಗಿನವರು’ ಎಂಬ ಚರ್ಚೆಯೂ ನಡೆಯುತ್ತಿದೆ.

‘ನಾನು ಪಾಕಿಸ್ತಾನದಿಂದ ಬಂದಿಲ್ಲ. ಮಹಾರಾಷ್ಟ್ರದವನೇ ಆಗಿದ್ದೇನೆ. ಹೊರ ರಾಜ್ಯದಿಂದ ಬಂದು ಮಹಾರಾಷ್ಟ್ರದಲ್ಲಿ ಸ್ಪರ್ಧಿಸಿದ್ದ ಹಲವರು ಈ ಹಿಂದೆ ಗೆದ್ದಿಲ್ಲವೇ’ ಎಂಬುದು ಜಾನ್ಕರ್‌ ಅವರ ಪ್ರಶ್ನೆ. ಮತ್ತೊಂದೆಡೆ ಜಾಧವ್‌, ‘ಕೆಲವು ದ್ರೋಹಿಗಳು ನಮ್ಮ ಪಕ್ಷ ಹಾಗೂ ಚಿಹ್ನೆಯನ್ನು ಕಸಿದುಕೊಂಡಿದ್ದಾರೆ. ಅವರಿಗೆ ಪಾಠ ಕಲಿಸಬೇಕು’ ಎನ್ನುತ್ತಾ ಮತದಾರರ ಬಳಿ ಹೋಗುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT