ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮಹಾತ್ಮೆ | ಪಟಿಯಾಲ (ಪಂಜಾಬ್)

Published 8 ಮೇ 2024, 23:47 IST
Last Updated 8 ಮೇ 2024, 23:47 IST
ಅಕ್ಷರ ಗಾತ್ರ

ಪಂಜಾಬ್‌ನ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಪಟಿಯಾಲ ಲೋಕಸಭಾ ಕ್ಷೇತ್ರದಲ್ಲಿ ಕಲಿಗಳ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಇಲ್ಲಿ ಗೆದ್ದಿದ್ದ ಪ್ರಣೀತ್‌ ಕೌರ್‌ ಅವರನ್ನು ಬಿಜೆಪಿಯು ಕಣಕ್ಕಿಳಿಸಿದರೆ, ಕಾಂಗ್ರೆಸ್‌ ಪಕ್ಷವು ಧರ್ಮವೀರ ಗಾಂಧಿ ಅವರನ್ನು ಅಖಾಡಕ್ಕಿಳಿಸಿದೆ. ಇವರಿಬ್ಬರಿಗೆ ಪೈಪೋಟಿ ನೀಡಲು ಎಎಪಿಯು ಬಲ್‌ಬೀರ್‌ ಸಿಂಗ್‌ ಅವರನ್ನು ಸ್ಪರ್ಧಿಯಾಗಿಸಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೂಡ ನರಿಂದರ್‌ ಕುಮಾರ್‌ ಶರ್ಮಾ ಅವರನ್ನು ಅಭ್ಯರ್ಥಿಯಾಗಿಸಿದೆ. 2019ರ ಚುನಾವಣೆಯಲ್ಲಿ ಪ್ರಣೀತ್‌ ಕೌರ್‌ ಅವರು, 1,62,718 ಮತಗಳ ಅಂತರದಿಂದ ಎಸ್‌ಎಡಿಯ ಸುರ್ಜಿತ್‌ ಸಿಂಗ್‌ ರಖ್ರಾ ಅವರನ್ನು ಪರಾಭವಗೊಳಿಸಿದ್ದರು. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ಪತ್ನಿ ಪ್ರಣೀತ್‌ ಕೌರ್‌ ಅವರು ಪಟಿಯಾಲ ರಾಜಮನೆತನದ ಸದಸ್ಯೆಯೂ ಹೌದು. ಸ್ಥಳೀಯವಾಗಿಯೂ ಅವರು ಪ್ರಭಾವಿ ನಾಯಕಿಯಾಗಿದ್ದಾರೆ. ಎಂಎಸ್‌ಪಿಗೆ ಕಾನೂನು ಖಾತರಿ ನೀಡಬೇಕೆಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಕೆಂಗಣ್ಣಿಗೆ ಗುರಿಯಾಗಿರುವ ಪ್ರಣೀತ್‌ ಅವರು ಚುನಾವಣಾ ಪ್ರಚಾರದ ವೇಳೆ ರೈತರ ವಿರೋಧವನ್ನು ಎದುರಿಸುತ್ತಿದ್ದಾರೆ. ಧರ್ಮವೀರ ಗಾಂಧಿ ಅವರು 2014ರಲ್ಲಿ ಈ ಕ್ಷೇತ್ರದಿಂದ ಎಎಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2016ರಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಈ ಬಾರಿ ಘಟಾನುಘಟಿ ನಾಯಕರು ಕಣದಲ್ಲಿರುವುದರಿಂದ ಕ್ಷೇತ್ರದ ಮತದಾರರು ಯಾರ ಪರ ನಿಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT