ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವಾಸಾ ವಾದವನ್ನು ತಳ್ಳಿಹಾಕಿದ ಚುನಾವಣಾ ಆಯೋಗ

ನೀತಿ ಸಂಹಿತೆ: ಆದೇಶದಲ್ಲಿ ವಿರೋಧದ ಉಲ್ಲೇಖ ಬೇಕಿಲ್ಲ
Last Updated 21 ಮೇ 2019, 19:19 IST
ಅಕ್ಷರ ಗಾತ್ರ

ನವದೆಹಲಿ: ‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವಿಚಾರವಾಗಿ ಆಯೋಗವು ನೀಡುವ ಆದೇಶಗಳಲ್ಲಿ, ಸದಸ್ಯರು ವ್ಯಕ್ತಪಡಿಸುವ ವಿರೋಧದ ಉಲ್ಲೇಖವೂ ಇರಬೇಕು’ ಎಂಬ ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅಶೋಕ್‌ ಲವಾಸಾ ಅವರ ವಾದವನ್ನು ಆಯೋಗವು ಮಂಗಳವಾರ ತಳ್ಳಿಹಾಕಿದೆ.

ಮುಖ್ಯ ಚುನಾವಣಾಧಿಕಾರಿ ಸುನಿಲ್‌ ಅರೋರಾ ಹಾಗೂ ಇತರ ಇಬ್ಬರು ಸದಸ್ಯರಾದ ಲವಾಸಾ ಹಾಗೂ ಸುನಿಲ್‌ ಚಂದ್ರ ಅವರನ್ನೊಳಗೊಂಡ ಆಯೋಗದ ಸಭೆಯಲ್ಲಿ 2–1 ಬಹುಮತದಿಂದ ಈ ವಾದವನ್ನು ತಳ್ಳಿಹಾಕಲಾಯಿತು.

‘ಆದೇಶದ ಬಗ್ಗೆ ಸದಸ್ಯರಲ್ಲಿ ಯಾರೇ ವಿರೋಧ ವ್ಯಕ್ತಪಡಿಸಿದರೂ ಅದು ಸಂಬಂಧಪಟ್ಟ ಕಡತದಲ್ಲಿ ದಾಖಲೆಯಾಗಿ ಉಳಿಯುತ್ತದೆ. ದೂರುದಾರರಿಗೆ ನೀಡುವ ಆದೇಶದಲ್ಲಿ ಆ ಕುರಿತ ವಿವರ ನೀಡಬೇಕಾಗಿಲ್ಲ’ ಎಂದು ಆಯೋಗ ಸ್ಪಷ್ಟಪಡಿಸಿದೆ.

‘ಪ್ರತಿಯೊಬ್ಬ ಸದಸ್ಯ ವ್ಯಕ್ತಪಡಿಸಿದ ಅಭಿಪ್ರಾಯವನ್ನೂ ಆಯೋಗದ ಸಭೆಯ ನಡಾವಳಿಯಲ್ಲಿ ದಾಖಲಿಸಬೇಕು. ಇದಾದ ಬಳಿಕ ದೂರುಗಳಿಗೆ ಸಂಬಂಧಿಸಿದಂತೆ ಕಾನೂನು ಮತ್ತು ನಿಯಮಾವಳಿಗೆ ಅನುಗುಣವಾಗಿ ಕೈಗೊಂಡ ತೀರ್ಮಾನಗಳನ್ನು ಮಾತ್ರ ಸಂಬಂಧಪಟ್ಟವರಿಗೆ ತಿಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಪ್ರಚಾರ ಭಾಷಣಗಳಲ್ಲಿ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಆರೋಪಮುಕ್ತಗೊಳಿಸಿದ ವಿಚಾರದಲ್ಲಿ ಚುನಾವಣಾ ಆಯೋಗದ ಸದಸ್ಯರೊಳಗೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು.

ಈ ವಿಚಾರವಾಗಿ ಲವಾಸಾ ಅವರು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ.

ಆಯೋಗದ ತೀರ್ಮಾನಗಳ ಬಗ್ಗೆ ವ್ಯಕ್ತಪಡಿಸಿದ ವಿರೋಧವು ದಾಖಲಾಗದಿದ್ದರೆ ನೀತಿ ಸಂಹಿತೆ ಕುರಿತ ದೂರು ಪರಿಶೀಲನೆ ನಡೆಸುವ ಸಭೆಗೆ ಹಾಜರಾಗುವುದಿಲ್ಲ ಎಂದೂ ಲವಾಸಾ ತಿಳಿಸಿದ್ದರು.

ಆದರೆ ಮಂಗಳವಾರ ನಡೆದ ಸಭೆಗೆ ಲವಾಸಾ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT