ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ - 19: ಅವಿರೋಧ ಒಂದು

ಲೋಕಸಭೆ ಚುನಾವಣೆ: ಕಾಂಗ್ರೆಸ್ ಹತ್ತು ಬಾರಿ, ಬಿಜೆಪಿ ಆರು ಬಾರಿ ಗೆಲುವು
Published 7 ಏಪ್ರಿಲ್ 2024, 7:11 IST
Last Updated 7 ಏಪ್ರಿಲ್ 2024, 7:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಲೋಕಸಭೆ ಇತಿಹಾಸದಲ್ಲಿ ಎರಡು ಉಪ ಚುನಾವಣೆ ಸೇರಿ ಒಟ್ಟು 19 ಚುನಾವಣೆಗಳು ನಡೆದಿವೆ. ಹಲವು ರಾಜಕೀಯ ಬೆಳವಣಿಗೆಗಳ ನಡುವೆ ಉಪಚುನಾವಣೆಗಳನ್ನೂ ಜಿಲ್ಲೆಯ ಜನ ನೋಡಿದ್ದು, ರಾಜಕೀಯ ಜಿದ್ದಾಜಿದ್ದಿ ಕ್ಷೇತ್ರದಲ್ಲಿ ಒಮ್ಮೆ ಅವಿರೋಧ ಆಯ್ಕೆಯನ್ನೂ ಕ್ಷೇತ್ರ ಕಂಡಿದೆ. 

ಲೋಕಸಭೆ ಚುನಾವಣೆ ಆರಂಭದಲ್ಲೇ ಎರಡು ಜಿಲ್ಲೆಗಳನ್ನು ಒಳಗೊಂಡು ಕ್ಷೇತ್ರವಾಗಿತ್ತು. 1952ರಿಂದ 1967ರವರೆಗೆ ಹಾಸನ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿತ್ತು. 1967ರಲ್ಲಿ ಚಿಕ್ಕಮಗಳೂರು ಸ್ವತಂತ್ರ ಕ್ಷೇತ್ರವಾಯಿತು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆದಾಗ ಮತ್ತೆ ಎರಡು ಜಿಲ್ಲೆಗಳಿಗೆ ಕ್ಷೇತ್ರ ಹಂಚಿಕೆಯಾಯಿತು. ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭೆಗೆ ಸೇರಿದರೆ, ಉಳಿದ ನಾಲ್ಕು(ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಮತ್ತು ತರೀಕೆರೆ) ಕ್ಷೇತ್ರಗಳು ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿವೆ. ಬಯಲು ಸೀಮೆ, ಮಲೆನಾಡು ಮತ್ತು ಕರಾವಳಿ ಒಳಗೊಂಡ ಭೌಗೋಳಿಕ ವೈಶಿಷ್ಟ್ಯದ ಕ್ಷೇತ್ರ ಇದಾಗಿದೆ. 

1978ರಲ್ಲಿ ಐತಿಹಾಸಿಕ ಉಪಚುನಾವಣೆಯಲ್ಲಿ ನಡೆದಿದ್ದು, ಇಂದಿರಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು. ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್‌ ಅವರು ಎದುರಾಳಿಯಾಗಿದ್ದರು. ಈ ಉಪಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿತ್ತು. 

ಒಟ್ಟು 19 ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ ಗೆದ್ದಿದ್ದರೆ, ಆರು ಬಾರಿ ಬಿಜೆಪಿ ಗೆದ್ದಿದೆ. ಪ್ರಜಾ ಸೋಷಿಯಲಿಸ್ಟ್ ಪಕ್ಷ, ಎನ್‌ಸಿಜೆ ಮತ್ತು ಜನತಾ ದಳ ತಲಾ ಒಂದು ಬಾರಿ ಗೆಲ್ಲಲು ಸಾಧ್ಯವಾಗಿದೆ. 1998ರಿಂದ ಈಚೆಗೆ ಏಳು ಚುನಾವಣೆಗಳು ನಡೆದಿದ್ದು, ಒಮ್ಮೆ ಮಾತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದ ಆರು ಚುನಾವಣೆಗಳಲ್ಲೂ ಬಿಜೆಪಿ ಜಯ ಸಾಧಿಸಿದೆ.

1952ರಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ನ ಎಚ್.ಸಿದ್ದನಂಜಪ್ಪ ಅವರು 1,16,561 ಮತ ಪಡೆದು ಆಯ್ಕೆಯಾಗಿದ್ದರು. ಎಸ್‌ಒಪಿಯ ಎಸ್‌.ಶಿವಪ್ಪ 55,289 ಮತ ಪಡೆದಿದ್ದರು. ಕಣದಲ್ಲಿ ಇಬ್ಬರು ಅಭ್ಯರ್ಥಿಗಳಿದ್ದರು. 

1957ರಲ್ಲಿ ಕಾಂಗ್ರೆಸ್‌ನ ಎಚ್‌.ಸಿದ್ದನಂಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಚಿಕ್ಕಮಗಳೂರು ಲೋಕಸಭೆ ಇತಿಹಾಸದಲ್ಲಿ ಇದು ದಾಖಲೆಯಾಗಿ ಉಳಿದಿದೆ.

1962ರಲ್ಲಿ ಕಾಂಗ್ರೆಸ್‌ನ ಎಚ್‌.ಸಿದ್ದನಂಜಪ್ಪ ಅವರು 1,04,898 ಮತಗಳನ್ನು ಪಡೆದು ಚುನಾಯಿತರಾದರು. ಪಿಎಸ್‌ಪಿಯ(ಪ್ರಜಾ ಸೋಷಿಯಲಿಸ್ಟ್ ಪಾರ್ಟಿ) ಬಿ.ಆರ್‌.ಕರಿಗೌಡ ಅವರು 99,083, ಸ್ವತಂತ್ರ ಅಭ್ಯರ್ಥಿ ಎಚ್‌.ಬಿ.ಗುಂಡಪ್ಪಗೌಡ ಸೇರಿ ಮೂವರು ಕಣದಲ್ಲಿದ್ದರು. 

1967ರ ಚುನಾವಣೆಯಲ್ಲಿ ಪಿಎಸ್‌ಪಿಯ ಎಂ.ಹುಚ್ಚೇಗೌಡ ಅವರು 1,06,812 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಎ.ಎಂ. ಬಸವೇಗೌಡ 88,589 ಮತಗಳನ್ನು ಪಡೆದಿದ್ದರು. ಒಟ್ಟು ನಾಲ್ವರು ಕಣದಲ್ಲಿದ್ದರು. 

1971ರ ಚುನಾವಣೆಯಲ್ಲಿ ಎನ್‌ಸಿಜೆ ಪಕ್ಷದ ಡಿ.ಬಿ.ಚಂದ್ರೇಗೌಡ ಅವರು 1,88,151 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಎಸ್‌ನ ಬಿ.ವಿ.ಚಂದ್ರಶೇಖರ್‌ 67,742 ಮತ ಪಡೆದಿದ್ದರು. ಒಟ್ಟು ನಾಲ್ವರು ಸ್ಪರ್ಧಿಸಿದ್ದರು.

1977ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಬಿ.ಚಂದ್ರೇಗೌಡ ಅವರು 2,08,239 ಮತಗಳನ್ನು ಪಡೆದು ಗೆದ್ದರೆ, ಬಿಎಲ್‌ಡಿ ಪಕ್ಷದ ಬಿ.ಎಲ್‌.ಸುಬ್ಬಮ್ಮ ಅವರು 1,43,671 ಮತಗಳನ್ನು ಪಡೆದಿದ್ದರು. ಇಬ್ಬರು ಕಣದಲ್ಲಿದ್ದರು. 

1978ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಇಂದಿರಾಗಾಂಧಿ ಅವರು 2,49,376 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್ 1,72,043 ಮತ ಪಡೆದಿದ್ದರು. 28 ಅಭ್ಯರ್ಥಿಗಳು ಕಣದಲ್ಲಿದ್ದರು. 

1980ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಎಂ.ಪುಟ್ಟೇಗೌಡ ಅವರು 2,39,522 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಜೆಎನ್‌ಪಿಯ ಕೆ.ಎಂ.ತಮ್ಮಯ್ಯ ಅವರು 75,386 ಮತಗಳನ್ನು ಪಡೆದಿದ್ದರು. ನಾಲ್ವರು ಕಣದಲ್ಲಿದ್ದರು. 

1984ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಕೆ.ತಾರಾದೇವಿ 2,68,912 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಸಿಪಿಐನ ಬಿ.ಕೆ.ಸುಂದರೇಶ್‌ ಅವರು 1,28,872 ಮತಗಳನ್ನು ಪಡೆದಿದ್ದರು. 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 

1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಎಂ.ಪುಟ್ಟೇಗೌಡ ಅವರು 3,03,195 ಮತ ಪಡೆದು ಗೆದ್ದಿದ್ದರು. ಸಿಪಿಐನ ಬಿ.ಕೆ.ಸುಂದರೇಶ್‌ ಅವರು 1,41,838 ಮತಗಳನ್ನು ಪಡೆದಿದ್ದರು. ಒಟ್ಟು 7 ಮಂದಿ ಸ್ಪರ್ಧಿಸಿದ್ದರು. 

1991ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಕೆ.ತಾರಾದೇವಿ 2,17,309 ಮತಗಳನ್ನು ಪಡೆದು ಎರಡನೇ ಬಾರಿಗೆ ಆಯ್ಕೆಯಾದರು. ಬಿಜೆಪಿಯ ಶ್ರೀಕಂಠಪ್ಪ ಅವರು 1,85,437 ಮತಗಳನ್ನು ಪಡೆದಿದ್ದರು. ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದರು. 

1996ರ ಚುನಾವಣೆಯಲ್ಲಿ ಜನತಾ ದಳದ ಬಿ.ಎಲ್‌.ಶಂಕರ್‌ ಅವರು 1,95,857 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ಡಿ.ಕೆ.ತಾರಾದೇವಿ ಅವರು 1,91,798 ಮತಗಳನ್ನು ಪಡೆದಿದ್ದರು. 17 ಅಭ್ಯರ್ಥಿಗಳು ಕಣದಲ್ಲಿದ್ದರು. 

1998ರ ಚುನಾವಣೆಯಲ್ಲಿ ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ ಅವರು 3,16,137 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ವೀರಪ್ಪ ಮೊಯಿಲಿ ಅವರು 2,63,641 ಮತಗಳನ್ನು ಪಡೆದಿದ್ದರು. 7 ಅಭ್ಯರ್ಥಿಗಳು ಕಣದಲ್ಲಿದ್ದರು.

1999ರ ಚುನಾವಣೆಯಲ್ಲಿ ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ ಅವರು 3,24,470 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್‌ನ ಡಿ.ಎಂ.ಪುಟ್ಟೇಗೌಡ ಅವರು 2,94,193 ಮತಗಳನ್ನು ಪಡೆದಿದ್ದರು. ಐವರು ಕಣದಲ್ಲಿದ್ದರು.

2004ರ ಚುನಾವಣೆಯಲ್ಲಿ ಬಿಜೆಪಿ ಡಿ.ಸಿ.ಶ್ರೀಕಂಠಪ್ಪ ಅವರು 3,41,931 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಬಿ.ಎಲ್.ಶಂಕರ್‌ ಅವರು 2,67,719 ಮತಗಳನ್ನು ಪಡೆದಿದ್ದರು. 7 ಅಭ್ಯರ್ಥಿಗಳು ಕಣದಲ್ಲಿದ್ದರು.

2009ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡ ಅವರು 4,01,441 ಮತ ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರು 3,74,423 ಮತ ಪಡೆದಿದ್ದರು. ಕಣದಲ್ಲಿ 9 ಅಭ್ಯರ್ಥಿಗಳಿದ್ದರು.

2012ರಲ್ಲಿ ಜರುಗಿದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರು 3,98,723 ಮತ ಪಡೆದು ಜಯಗಳಿಸಿದ್ದರು. ಬಿಜೆಪಿಯ ಸುನಿಲ್‌ಕುಮಾರ್‌ ಅವರು 3,52,999 ಮತ ಪಡೆದಿದ್ದರು. 14 ಮಂದಿ ಕಣದಲ್ಲಿದ್ದರು.

2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು 5,81,168 ಮತ ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರು 3,99,525 ಮತಗಳನ್ನು ಪಡೆದಿದ್ದರು. 11 ಅಭ್ಯರ್ಥಿಗಳು ಕಣದಲ್ಲಿದ್ದರು.

‌2019ರಲ್ಲಿ ಶೋಭಾ ಕರಂದ್ಲಾಜೆ 7,18,916 ಮತ ಪಡೆದು ಪುನರಾಯ್ಕೆಯಾದರು. ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್(ಜೆಡಿಎಸ್) 3,69,317 ಮತ ಪಡೆದಿದ್ದರು. ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT