ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ | ಮೊದಲ ಸಲ ಲಿಂಗಾಯತರಿಗಿಲ್ಲ ಟಿಕೆಟ್‌

ರಾಷ್ಟ್ರೀಯ ಪಕ್ಷಗಳಿಂದ ಕಡೆಗಣನೆ
Published 24 ಮಾರ್ಚ್ 2024, 6:28 IST
Last Updated 24 ಮಾರ್ಚ್ 2024, 6:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಕೇಂದ್ರ ಸ್ಥಾನವಾದ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ವರ್ಷಗಳಿಂದ ಲಿಂಗಾಯತ ಸಮುದಾಯವು ಅಸ್ತಿತ್ವದ ಜೊತೆಗೆ ಪ್ರಾತಿನಿಧ್ಯ ಕಾಯ್ದುಕೊಂಡಿದೆ. ಆದರೆ, 40 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಸಿಕ್ಕಿಲ್ಲ.

ಬಿಜೆಪಿಯು ಹಾಲಿ ಸಂಸದ, ಬ್ರಾಹ್ಮಣ ಸಮುದಾಯದ ಪ್ರಲ್ಹಾದ ಜೋಶಿ ಮತ್ತು ಕಾಂಗ್ರೆಸ್‌ ಪಕ್ಷ  ಕುರುಬ ಸಮುದಾಯದ ವಿನೋದ ಅಸೂಟಿ ಅವರನ್ನು ಕಣಕ್ಕಿಳಿಸಿವೆ.

ಉತ್ತರ ಕರ್ನಾಟಕದಲ್ಲಿ ರಾಜಕೀಯವಾಗಿ ಲಿಂಗಾಯತರು ದಟ್ಟ ಪ್ರಭಾವ ಹೊಂದಿರುವ ಹಿನ್ನೆಲೆಯಲ್ಲಿ ಬಹುತೇಕ ಪಕ್ಷಗಳು  4 ದಶಕಕ್ಕೂ ಹೆಚ್ಚು ಸಮಯದಿಂದ ಬಹುತೇಕ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಇದೇ ಮೊದಲ ಸಲ ರಾಷ್ಟ್ರೀಯ ಪಕ್ಷಗಳು ಸಹ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಇತಿಹಾಸದ ಮೆಲುಕು:

1984ರಲ್ಲಿ ಧಾರವಾಡ ಉತ್ತರ ಕ್ಷೇತ್ರದಿಂದ ಎಸ್‌.ಐ.ಶೆಟ್ಟರ್‌ (ಜನತಾ ಪಕ್ಷ), 1989ರಲ್ಲಿ ಧಾರವಾಡ ಉತ್ತರದಿಂದ ಚಂದ್ರಕಾಂತ ಬೆಲ್ಲದ (ಜನತಾ ದಳ), ಬಿ.ಸಿ. ಪಾಟೀಲ (ಕೆಆರ್‌ಎಸ್‌), ಧಾರವಾಡ ದಕ್ಷಿಣದಿಂದ ಬಿ.ಜಿ. ಬಣಕಾರ (ಜನತಾ ದಳ) ಕಣಕ್ಕಿಳಿದಿದ್ದರು.

1991ರಲ್ಲಿ ಧಾರವಾಡ ಉತ್ತರದಿಂದ ಚಂದ್ರಕಾಂತ ಬೆಲ್ಲದ (ಬಿಜೆಪಿ), ಧಾರವಾಡ ದಕ್ಷಿಣದಿಂದ ಬಿ.ಜಿ. ಬಣಕಾರ (ಬಿಜೆಪಿ), 1996ರಲ್ಲಿ ಧಾರವಾಡ ಉತ್ತರದಿಂದ ವಿಜಯ ಸಂಕೇಶ್ವರ (ಬಿಜೆಪಿ), ಶಂಕರಣ್ಣ ಮುನವಳ್ಳಿ (ಜನತಾ ದಳ), ಧಾರವಾಡ ದಕ್ಷಿಣದಿಂದ ಬಿ.ಎಂ. ಮೆಣಸಿನಕಾಯಿ (ಜನತಾ ದಳ), ಬಿ.ಜಿ. ಬಣಕಾರ (ಬಿಜೆಪಿ) ಸ್ಪರ್ಧಿಸಿದ್ದರು.

1998ರಲ್ಲಿ ಧಾರವಾಡ ಉತ್ತರದಿಂದ ವಿಜಯ ಸಂಕೇಶ್ವರ (ಬಿಜೆಪಿ), ಶಂಕರಣ್ಣ ಮುನವಳ್ಳಿ (ಜನತಾ ದಳ), ಧಾರವಾಡ ದಕ್ಷಿಣದಿಂದ ಬಿ.ಎಂ. ಮೆಣಸಿನಕಾಯಿ (ಲೋಕಶಕ್ತಿ), 1999ರಲ್ಲಿ ಧಾರವಾಡ ಉತ್ತರದಿಂದ ವಿಜಯ ಸಂಕೇಶ್ವರ (ಬಿಜೆಪಿ), ವೀರಣ್ಣ ಮತ್ತಿಕಟ್ಟಿ (ಕಾಂಗ್ರೆಸ್‌), ಧಾರವಾಡ ದಕ್ಷಿಣದಿಂದ ಬಿ.ಎಂ. ಮೆಣಸಿನಕಾಯಿ (ಜೆಡಿಯು), 2004ರಲ್ಲಿ ಧಾರವಾಡ ಉತ್ತರದಿಂದ ಬಿ.ಎಸ್‌. ಪಾಟೀಲ (ಕಾಂಗ್ರೆಸ್‌), ಧಾರವಾಡ ದಕ್ಷಿಣದಿಂದ ಮಂಜುನಾಥ ಕುನ್ನೂರ (ಬಿಜೆಪಿ), ಪ್ರೇಮಾ ಪಾಟೀಲ (ಜೆಡಿಎಸ್‌) ಕಣಕ್ಕಿಳಿದಿದ್ದರು.

2008ರಲ್ಲಿ ಕ್ಷೇತ್ರ ಪುನರ್‌ ರಚನೆಗೊಂಡು, ಧಾರವಾಡ ಕ್ಷೇತ್ರವಾಗಿ ರೂಪುಗೊಂಡಿತು. 2009ರಲ್ಲಿ ಮಂಜುನಾಥ ಕುನ್ನೂರು, 2014 ಮತ್ತು 2019ರಲ್ಲಿ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿತ್ತು.

ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಲಿಂಗಾಯತರಿಗೆ ಸಮುದಾಯದವರಿಗೆ ಟಿಕೆಟ್‌ ನೀಡಿದೆ. ಎಲ್ಲ ಸಮುದಾಯಕ್ಕೂ ಅವಕಾಶ ನೀಡುವ ಉದ್ದೇಶದಿಂದ ಕುರುಬ ಸಮುದಾಯದ ವಿನೋದ ಅಸೂಟಿಗೆ ಟಿಕೆಟ್‌ ನೀಡಿದೆ.
– ಅನಿಲಕುಮಾರ್‌ ಪಾಟೀಲ ಅಧ್ಯಕ್ಷ ಧಾರವಾಡ ಜಿಲ್ಲಾ (ಗ್ರಾಮೀಣ) ಕಾಂಗ್ರೆಸ್‌ ಘಟಕ
ನಮ್ಮ ಸಮುದಾಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಟಿಕೆಟ್‌ ನೀಡಿಲ್ಲ. ರಾಜಕೀಯವಾಗಿ ನಮಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ.. ಸಮುದಾಯದವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
– ವಿ.ಸಿ. ಸವಡಿ ಉಪಾಧ್ಯಕ್ಷ ವೀರಶೈವ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕ

ಗೆದ್ದಿದ್ದು ಏಕೈಕ ಲಿಂಗಾಯತ ಅಭ್ಯರ್ಥಿ 1980ರಿಂದ ಈವರೆಗೆ ನಡೆದ 11 ಲೋಕಸಭಾ ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯದವರು ವಿವಿಧ ಪಕ್ಷಗಳ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು. ಆದರೆ ಯಶಸ್ಸು ಗಳಿಸಿದ್ದು ವಿಜಯ ಸಂಕೇಶ್ವರ ಮಾತ್ರ. ಧಾರವಾಡ ಉತ್ತರ ಕ್ಷೇತ್ರದಿಂದ 1996 1998 ಹಾಗೂ 1999ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT