ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

2019ರಲ್ಲಿ ಕೈ ಹಿಡಿಯಲಿಲ್ಲ ಅಭ್ಯರ್ಥಿ ಬದಲಾವಣೆ ತಂತ್ರ
Published 22 ಏಪ್ರಿಲ್ 2024, 6:48 IST
Last Updated 22 ಏಪ್ರಿಲ್ 2024, 6:48 IST
ಅಕ್ಷರ ಗಾತ್ರ

ಬಾಗಲಕೋಟೆ: ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಛಲದಲ್ಲಿ ನಾಲ್ಕನೇ ಬಾರಿಗೂ ಹೊಸ ಅಭ್ಯರ್ಥಿ ಕಣಕ್ಕಿಳಿಸಿತು. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಪಿ.ಸಿ. ಗದ್ದಿಗೌಡರ ಸುಲಭವಾಗಿ ಗೆಲುವು ಸಾಧಿಸಿದರು.

2004ರಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಬದಲಾಯಿಸುತ್ತಲೇ ಬಂದಿತ್ತು. ಈ ಚುನಾವಣೆಯಲ್ಲಿಯೂ ಮುಂದುವರಿಸಿ ಜಿಲ್ಲಾ ಪಂಚಾಉ್ತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ವೀಣಾ ಕಾಶಪ್ಪನವರ ಅವರನ್ನು ಕಣಕ್ಕಿಳಿಸಿತು. ಅವರ ಬೆನ್ನಿಗೆ ಆಗ ಮಾಜಿ ಶಾಸಕರಾಗಿದ್ದ ವಿಜಯಾನಂದ ಕಾಶಪ್ಪನವರ ನಿಂತಿದ್ದರು.

ಪ್ರಧಾನಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಿದ್ದ ನರೇಂದ್ರ ಮೋದಿ ಅವರ ಪರ ಅಲೆಯೊಂದು ಜೋರಾಗಿ ಎದ್ದಿತ್ತು. ಸುಭದ್ರ ಸರ್ಕಾರ ನೀಡಲಾಗಿದೆ ಎಂಬುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಮತಯಾಚನೆ ಮಾಡಲಾಗುತ್ತಿತ್ತು. ನರೇಂದ್ರ ಮೋದಿಯೇ ಖುದ್ದಾಗಿ ಬಂದು ಬಾಗಲಕೋಟೆಯಲ್ಲಿ ಪ್ರಚಾರ ಮಾಡಿದ್ದರು. ಮೋದಿ ಬಗ್ಗೆ ಯುವ ಜನಾಂಗಕ್ಕಿದ್ದ ಸೆಳೆತ ಗದ್ದಿಗೌಡರ ಅವರನ್ನು ದಡ ಮುಟ್ಟಿಸಿತ್ತು.

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದಿದ್ದರಾದರೂ, ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ವಿಜಯಾನಂದ ಕಾಶಪ್ಪನವರ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಜಿಲ್ಲಾ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಕಾರಣಕ್ಕೆ ವಿಣಾ ಕಾಶಪ್ಪನವರ ಅವರಿಗೆ ಟಿಕೆಟ್ ನೀಡಲು ಕೆಲವರ ವಿರೋಧವಿತ್ತು. ಆದರೆ, ಸಿದ್ದರಾಮಯ್ಯ ಅವರೇ ವೀಣಾ ಕಾಶಪ್ಪನವರಿಗೆ ಟಿಕೆಟ್‌ ಕೊಡಿಸಲು ಮುಂದೆ ನಿಂತು ಆಸ್ಥೆ ವಹಿಸಿದ್ದರು. 

ಬಾಗಲಕೋಟೆ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಟಿಕೆಟ್‌ ದೊರೆತಿತ್ತು. ಮಹಿಳಾ ಅಭ್ಯರ್ಥಿ ಗೆದ್ದರೆ ಮೊದಲ ಬಾರಿಗೆ ಮಹಿಳಾ ಪ್ರತಿನಿಧಿಯೊಬ್ಬರು ಸಂಸತ್ತು ಪ್ರವೇಶಿಸುತ್ತಿದ್ದರು. ಆದರೆ, ಅವರಿಗೆ ಗೆಲುವು ದಕ್ಕಲಿಲ್ಲ.

ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿತ್ತು. ಜೊತೆಗೆ ಮೋದಿ ಪಕ್ಷದ ಮೇಲೆ ಸಾಧಿಸಿದ್ದ ಬಿಗಿ ಹಿಡಿತದಿಂದಾಗಿ ಎಲ್ಲ ಕಡೆಯೂ ಒಗ್ಗಟ್ಟಿನ ಜಪ ಕೇಳಿ ಬರುತ್ತಿತ್ತು. ಆದರೆ, ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಕೊರತೆ ಇತ್ತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರಿಂದ ಗೆದ್ದೇ ಗೆಲ್ಲುವನೆಂಬ ಭರವಸೆ ಇತ್ತು. ಆದರೆ, ಮೋದಿ ಪ್ರಭಾವದ ಮುಂದೆ ಅದು ಕೆಲಸ ಮಾಡಲಿಲ್ಲ.

ಪಿ.ಸಿ. ಗದ್ದಿಗೌಡರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಪಿ.ಸಿ. ಗದ್ದಿಗೌಡರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ವೀಣಾ ಕಾಶಪ್ಪನವರ
ವೀಣಾ ಕಾಶಪ್ಪನವರ
1.68 ಲಕ್ಷ ಮತಗಳಿಂದ ಗೆಲುವು
ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸಿದರು. ಆ ಮೂಲಕ ಸತತ ನಾಲ್ಕು ಬಾರಿಗೆ ಗೆಲುವು ಸಾಧಿಸಿದ್ದ ಸುನಗದ ಎಸ್‌.ಬಿ. ಪಾಟೀಲರ ದಾಖಲೆಯನ್ನು ಸರಿಗಟ್ಟಿದರು. ಕಣದಲ್ಲಿ 14 ಅಭ್ಯರ್ಥಿಗಳಿದ್ದರು. ಬಿಜೆಪಿ ಕಾಂಗ್ರೆಸ್‌ ನಡುವೆಯೇ ಪೈಪೋಟಿಯಿತ್ತು. ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಗದ್ದಿಗೌಡರ ಲೀಡ್‌ ಪಡೆದಿದ್ದರು. 1078805 (ಶೇ68.90) ಮತಗಳು ಚಲಾವಣೆಯಾಗಿದ್ದವು. ಗದ್ದಿಗೌಡರ 664638 ಮತಗಳನ್ನು ಪಡೆದರೆ ವೀಣಾ ಕಾಶಪ್ಪನವರ 496451 ಮತಗಳನ್ನು ಪಡೆದಿದ್ದರು. ಗದ್ದಿಗೌಡರ 168187 ಮತಗಳಿಂದ ಗೆಲುವು ಸಾಧಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT