ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಕ್ಷೇತ್ರ: ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿಗೆ ದಾಖಲೆ ಜಯ

Published 11 ಏಪ್ರಿಲ್ 2024, 6:14 IST
Last Updated 11 ಏಪ್ರಿಲ್ 2024, 6:14 IST
ಅಕ್ಷರ ಗಾತ್ರ

ಬಾಗಲಕೋಟೆ: 1980ರಲ್ಲಿ ನಡೆದ ಬಾಗಲಕೋಟೆ ಲೋಕಸಭಾ ಚುನಾವಣೆಯು ಎರಡು ಕಾರಣಗಳಿಗಾಗಿ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆಯಿತು. ಮೊದಲನೇಯದ್ದು ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಎಸ್‌.ಬಿ. ಪಾಟೀಲರು ಕಣಕ್ಕಿಳಿಯಲಿಲ್ಲ. ಎರಡನೇಯದ್ದು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರಿಗೆ ರಾಜಕೀಯ ಪುನರ್‌ಜನ್ಮ ನೀಡಿತು.

ಸತತ ನಾಲ್ಕು ಬಾರಿ ಸಂಸದರಾಗಿ ಜನಪ್ರಿಯತೆ ಪಡೆದಿದ್ದ ಎಸ್‌.ಬಿ. ಪಾಟೀಲ ಅವರ ಬದಲಾಗಿ ರಾಜಕೀಯ ಸ್ಥಿತ್ಯಂತರದಲ್ಲಿ 1968ರಲ್ಲಿಯೇ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ ಅವರನ್ನು ಕಣಕ್ಕಿಳಿಸಲಾಯಿತು. ಅವರಿಗೆ ಪಾಟೀಲರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರಿಂದ ವೀರೇಂದ್ರ ಪಾಟೀಲರು ನಿರಾಯಾಸ ಗೆಲುವು ಸಾಧಿಸಿದರು.

ವೀರೇಂದ್ರ ಪಾಟೀಲರು, ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕಿ, ಪ್ರಧಾನಿ ಇಂದಿರಾಗಾಂಧಿ ಅವರನ್ನು ಎದುರು ಹಾಕಿಕೊಂಡಿದ್ದರಲ್ಲದೇ ರಾಜ್ಯ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಇಂದಿರಾಗಾಂಧಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಮುಂದೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಮತ್ತೆ ಇಂದಿರಾಗಾಂಧಿ ನೇತೃತ್ವದ ಪಕ್ಷ ಸೇರ್ಪಡೆಯಾಗಿದ್ದರಲ್ಲದೇ, ಅವರ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದರು.

ಹಿಂದೆ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಸಾಧಿಸಿದ್ದರು. ಇದು ಕಾಂಗ್ರೆಸ್ಸಿನ ಭದ್ರಕೋಟೆ ಎನಿಸಿಕೊಂಡಿತ್ತು. ಜತೆಗೆ ಈ ಕ್ಷೇತ್ರದಲ್ಲಿ ಲಿಂಗಾಯತರು ಬಹುಸಂಖ್ಯಾತರಾಗಿದ್ದರು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ವೀರೇಂದ್ರ ಪಾಟೀಲರು ಬಾಗಲಕೋಟೆಯಿಂದ ಕಣಕ್ಕಿಳಿದಿದ್ದರು.

ಪಾಟೀಲರ ಪಕ್ಷ ನಿಷ್ಠೆ ಅಚಲ: ನಾಲ್ಕು ಬಾರಿ ಸಂಸದರಾಗಿದ್ದ ಸುನಗದ ಎಸ್‌.ಬಿ. ಪಾಟೀಲರನ್ನು ಬಿಟ್ಟು ವೀರೇಂದ್ರ ಪಾಟೀಲರನ್ನು ಕಣಕ್ಕಿಳಿಸಿದಾಗ ಪಾಟೀಲರು ಯಾವುದೇ ಬಗೆ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಪಕ್ಷದ ಮೇಲೆ ತಮಗೆ ಅಚಲ ನಿಷ್ಠೆಯಿದ್ದು, ಪಕ್ಷದ ಸೂಚನೆಯನ್ನು ಪಾಲಿಸುವುದಾಗಿ ಹೇಳಿದರು. 

ವೀರೇಂದ್ರ ಪಾಟೀಲ ಅವರೊಂದಿಗೆ ಚುನಾವಣಾ ಪ್ರಚಾರ ಮಾಡಿದರಲ್ಲದೇ, ಅವರನ್ನು ಗೆಲ್ಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಅವರ ಸಹಕಾರದಿಂದಲೇ ಕಾಂಗ್ರೆಸ್ ಗೆಲುವು ಸುಲಭವಾಯಿತು.

ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್(ಐ) ಪಕ್ಷದಲ್ಲಿ ಒಡಕುಂಟಾಗಿ, ದೇವರಾಜ ಅರಸರು ಕಾಂಗ್ರೆಸ್‌ ತ್ಯಜಿಸಿ, ಬ್ರಹ್ಮಾನಂದರೆಡ್ಡಿ ಅವರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಅದರ ಅಧ್ಯಕ್ಷರಾದರು. 7ನೇ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ (ಇಂದಿರಾ ಕಾಂಗ್ರೆಸ್) ವೀರೇಂದ್ರ ಪಾಟೀಲ ಸ್ಪರ್ಧಿಸಿದರೆ, ಅರಸು ಕಾಂಗ್ರೆಸ್‌ದಿಂದ ಬೀಳಗಿಯ ವಾಸಣ್ಣ ದೇಸಾಯಿ, ಜನತಾ ಪಕ್ಷದಿಂದ ಟಿ.ಎಂ. ಹುಂಡೆಕಾರ ಸ್ಪರ್ಧಿಸಿದ್ದರು.

ದಾಖಲೆ ಗೆಲವು: ಬಾಗಲಕೋಟೆ ಲೋಕಸಭೆಯ ಇತಿಹಾಸದಲ್ಲೆಯೇ ಹೆಚ್ಚು ಮತಗಳ (1,53,973) ಅಂತರದಿಂದ ಪಾಟೀಲರು ಗೆಲುವು ದಾಖಲಿಸಿದರು.

ವಿರೇಂದ್ರ ಪಾಟೀಲರು 2,45,812 ಮತಗಳಿಸಿದರೆ, ಹುಂಡೇಕಾರ 91,839 ಮತ ಹಾಗೂ ವಾಸಣ್ಣ ದೇಸಾಯಿ 64,132 ಮತಗಳನ್ನು ಪಡೆದರು. 

ಮೊದಲ ಬಾರಿಗೆ ಸಚಿವ ಸ್ಥಾನ
ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂಸದರೊಬ್ಬರಿಗೆ ಮೊದಲ ಬಾರಿಗೆ ಸಚಿವ ಸ್ಥಾನ ದೊರೆಯಿತು. ಇಂದಿರಾಗಾಂಧಿ  ಅವರು ತಮ್ಮ ಸಚಿವ ಸಂಪುಟದಲ್ಲಿ ವೀರೇಂದ್ರ ಪಾಟೀಲ ಅವರನ್ನು ಪೆಟ್ರೋಲಿಯಂ ಖಾತೆ ಸಚಿವರನ್ನಾಗಿ ಮಾಡಿದ್ದರು.  ಬಾಗಲಕೋಟೆಯ ಜನತೆ ಒಂದೊಮ್ಮೆ ಸೋಲಿಸಿದ್ದರೆ ಪಾಟೀಲರ ರಾಜಕೀಯ ಭವಿಷ್ಯ ಮಂಕಾಗುತ್ತಿತ್ತು. ಮುಂದೆ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT