ಫೂಲ್ಬನಿ (ಒಡಿಶಾ): ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕನಿಷ್ಠ 50 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಹಾಗಾಗಿ, ವಿರೋಧ ಪಕ್ಷದ ಸ್ಥಾನಮಾನವನ್ನೂ ಗಳಿಸಿಕೊಳ್ಳಲಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಒಡಿಶಾದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲಕ್ಕೆ ನಡೆಯುತ್ತಿವೆ.
ಕಂಧಮಾಲ್ ಜಿಲ್ಲೆಯ ಫೂಲ್ಬನಿಯಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ, 'ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ರಚನೆಯಾಗಲಿದೆ. ಒಡಿಶಾದ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡಿರುವ ಈ ನೆಲದ ಮಗ ಅಥವಾ ಮಗಳನ್ನು ಬಿಜೆಪಿ ಸರ್ಕಾರ ಮುಖ್ಯಮಂತ್ರಿಯನ್ನಾಗಿ ಮಾಡಲಿದೆ' ಎಂದು ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಸ್ಮರಿಸಿದ ಮೋದಿ, 26 ವರ್ಷಗಳ ಹಿಂದೆ ನಡೆದ ಪೋಖ್ರಾನ್ ಪರೀಕ್ಷೆಗಳು ಭಾರತದ ಖ್ಯಾತಿಯನ್ನು ವಿಶ್ವದಾದ್ಯಂತ ಪಸರಿಸಿದವು ಎಂದಿದ್ದಾರೆ.
ಇದೇ ವೇಳೆ ಅವರು, ತಮ್ಮ ಸರ್ಕಾರವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ದೇಶದ ಜನರ 500 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.