ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಪನ್ನೀರ್‌ಸೆಲ್ವಂ ವಿರುದ್ಧ ನಾಲ್ವರು ಪನ್ನೀರ್‌ಸೆಲ್ವಂ ಸ್ಪರ್ಧೆ!

ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗೆ ಸಂಕಷ್ಟ ತಂದಿಟ್ಟ ಹೆಸರು
Published 30 ಮಾರ್ಚ್ 2024, 14:47 IST
Last Updated 30 ಮಾರ್ಚ್ 2024, 14:47 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರು ಕಣದಲ್ಲಿ ತನ್ನದೇ ಹೆಸರಿನ ನಾಲ್ವರು ಅಭ್ಯರ್ಥಿಗಳ ವಿರುದ್ಧ ಹೋರಾಡಬೇಕಾಗಿದೆ.

ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ರಾಮನಾಥಪುರಂ ಕ್ಷೇತ್ರದಲ್ಲಿ ಪನ್ನೀರ್‌ಸೆಲ್ವಂ ಹೆಸರಿನ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಎಐಎಡಿಎಂಕೆಯ ಪದಚ್ಯುತ ನಾಯಕನಿಗೆ ಐಯುಎಂಎಲ್ ಮತ್ತು ಎಐಎಡಿಎಂಕೆಯ ಅಭ್ಯರ್ಥಿಗಳ ಜತೆಗೆ ತಮ್ಮದೇ ಹೆಸರಿನ ನಾಲ್ವರು ಅಭ್ಯರ್ಥಿಗಳನ್ನು ಎದುರಿಸಬೇಕಾಗಿದೆ.

ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವ ಒ.ಪನ್ನೀರ್‌ಸೆಲ್ವಂ ಹೆಸರಿನ ಯಾವ ಅಭ್ಯರ್ಥಿಯೂ ನಾಮಪತ್ರ ವಾಪಸ್ ಪಡೆದಿಲ್ಲ. ಹೀಗಾಗಿ ಇನ್ನು 20 ದಿನದಲ್ಲಿ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ತಮ್ಮ ಚುನಾವಣಾ ಚಿಹ್ನೆ ‘ಹಲಸಿನ ಹಣ್ಣು’ ಎಲ್ಲ ಮತದಾರರಿಗೂ ಮುಟ್ಟುವಂತೆ ನೋಡಿಕೊಳ್ಳಲು ಹರಸಾಹಸ ಮಾಡಬೇಕಾಗಿದೆ.

ಇನ್ನೊಂದು ಸಮಸ್ಯೆ ಏನೆಂದರೆ, ಸದ್ಯ ಯಾವುದೇ ಪಕ್ಷದ ಭಾಗವಾಗಿರದ ಪನ್ನೀರ್‌ಸೆಲ್ವಂ ಕೂಡ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿದ್ದರೆ, ಕಣದಲ್ಲಿರುವ ಅದೇ ಹೆಸರಿನ ಇತರ ಅಭ್ಯರ್ಥಿಗಳು 42 ರಿಂದ 61 ವರ್ಷದೊಳಗಿನವರು.

ಪನ್ನೀರ್‌ಸೆಲ್ವಂ ವಿರೋಧಿಗಳು ಅವರ ಹೆಸರಿನವರನ್ನೇ ಕಣಕ್ಕಿಳಿಸುವ ಮೂಲಕ ಮತದಾರರಲ್ಲಿ ಗೊಂದಲ ಉಂಟುಮಾಡುವ ಹಳೆಯ ತಂತ್ರದ ಮೊರೆ ಹೋಗಿದ್ದಾರೆ. ಕಣದಲ್ಲಿರುವವರ ಪೈಕಿ ಒಬ್ಬ ಅಭ್ಯರ್ಥಿ ರಾಮನಾಥಪುರಂ ಜಿಲ್ಲೆಯವರಾಗಿದ್ದರೆ, ಉಳಿದ ಮೂವರು ಮದುರೈ ಜಿಲ್ಲೆಯವರು. ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ಥೇಣಿ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಒಪಿಎಸ್ ಎಂದೇ ಕರೆಯಲ್ಪಡುವ ಪನ್ನೀರ್‌ಸೆಲ್ವಂ ಎಐಎಡಿಎಂಕೆ ನಾಯಕಿಯಾಗಿದ್ದ ಜಯಲಲಿತಾ ಪರವಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ನಂತರ ಅವರು ಪಕ್ಷದಿಂದ ದೂರವಾಗಿದ್ದರು. ಒಪಿಎಸ್‌ ವಿರುದ್ಧ ಅವರದೇ ಹೆಸರಿನ ನಾಲ್ವರು ಸ್ಪರ್ಧೆ ಮಾಡಿದ್ದರ ಹಿಂದೆ ತನ್ನ ಕೈವಾಡವಿಲ್ಲ ಎಂದು ಎಐಎಡಿಎಂಕೆ ಸ್ಪಷ್ಟಪಡಿಸಿದೆ. ‘ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಹೇಳಿದ್ದಾರೆ.

ಪನ್ನೀರ್‌ಸೆಲ್ವಂ ಅವರನ್ನು ಎಐಎಡಿಎಂಕೆ ಪಕ್ಷದಿಂದ 2022ರ ಜುಲೈನಲ್ಲಿ ಉಚ್ಚಾಟಿಸಲಾಗಿತ್ತು. ಈಗ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳುವ ಸಲುವಾಗಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮುಕ್ಕುಳತ್ತೋರ್ (ಕಲ್ಲರ್, ಮರವರ್ ಮತ್ತು ಅಗಮುದೈಯರ್ ಹೆಸರಿನ ಮೂರು ಜಾತಿಗಳ ಜನ) ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಅವರು ರಾಮನಾಥಪುರಂ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮುಕ್ಕುಳತ್ತೋರ್ ಜನ ಚುನಾವಣೆಯಲ್ಲಿ ತಮ್ಮ ಪರ ನಿಲ್ಲುತ್ತಾರೆ ಎನ್ನುವುದು ಒಪಿಎಸ್ ನಂಬಿಕೆ. ಚುನಾವಣೆಯಲ್ಲಿ ಗೆಲ್ಲಲಾಗದಿದ್ದರೂ ಕನಿಷ್ಠ ಎಐಎಡಿಎಂಕೆ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿ ತಾನು ಎರಡನೇ ಸ್ಥಾನವನ್ನಾದರೂ ಪಡೆಯುವ ಬಯಕೆ ಅವರದ್ದು. ಆದರೆ, ಅವರು ಪಕ್ಷೇತರವಾಗಿ ಸ್ಪರ್ಧಿಸುತ್ತಿರುವುದು, ಹೊಸ ಚಿಹ್ನೆ ಮತ್ತು ಅವರದೇ ಹೆಸರಿನ ನಾಲ್ವರ ಸ್ಪರ್ಧೆಯಿಂದಾಗಿ ಅವರ ಬಯಕೆ ಈಡೇರುವುದು ಕಷ್ಟಸಾಧ್ಯ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT