ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ‌ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಿದ ಬಿ.ವೈ.ವಿಜಯೇಂದ್ರ

Published 16 ಏಪ್ರಿಲ್ 2024, 3:09 IST
Last Updated 16 ಏಪ್ರಿಲ್ 2024, 3:09 IST
ಅಕ್ಷರ ಗಾತ್ರ

ಹೊಳೆನರಸೀಪುರ (ಹಾಸನ ಜಿಲ್ಲೆ): ‘ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ. ಕ್ಷೇತ್ರದ ಮತದಾರರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ‌ ಮಾತನಾಡಿ, ‘ಈಶ್ವರಪ್ಪ ಎಷ್ಟೆಷ್ಟು ಮಾತಾಡುತ್ತಾರೋ ಅಷ್ಟು ದುಪ್ಪಟ್ಟು ಮತಗಳು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ದೊರಕುತ್ತವೆ. ಈಶ್ವರಪ್ಪ ಅವರ ಪುಗಸಟ್ಟೆ ಮಾತುಗಳನ್ನು ಜನ ಗಮನಿಸುತ್ತಾರೆ‌’ ಎಂದು ಪ್ರತಿಪಾದಿಸಿದರು.

‘ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಕೆ.ಎಸ್‌. ಈಶ್ವರಪ್ಪ ಶಿವಮೊಗ್ಗ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ? ಬಿ.ವೈ. ರಾಘವೇಂದ್ರ ಸಂಸದರಾಗಿ ಮಾಡಿದ ಅಭಿವೃದ್ದಿ ಕಾರ್ಯಗಳು, ಬಿ.ಎಸ್‌. ಯಡಿಯೂರಪ್ಪ ಅವರ ಅವಧಿಯಲ್ಲಿ ಆಗಿರುವ ಕೆಲಸದ ಕುರಿತು ಜಿಲ್ಲೆಯ ಮನೆಮನೆಯಲ್ಲೂ ಜನ ಮಾತಾಡುತ್ತಿದ್ದಾರೆ. ಈಶ್ವರಪ್ಪ ಅವರಿಂದ ಕಲಿಯಬೇಕಾದ ಅವಶ್ಯಕತೆ ಇಲ್ಲ’ ಎಂದರು.

‘ರಾಘವೇಂದ್ರ ಅವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈಶ್ವರಪ್ಪನವರಿಗೆ ಜನ ಪಾಠ ಕಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಮತದಾರರು ಬದಲಾವಣೆ ಬಯಸುತ್ತಿದ್ದು, ಜನಾನುರಾಗಿ ಡಾ.ಸಿ.ಎನ್‌. ಮಂಜುನಾಥ ಅವರನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿಯೇ ಡಿ.ಕೆ. ಶಿವಕುಮಾರ್‌ ಹಾಗೂ ಸುರೇಶ್‌ ಅವರು ಗಾಬರಿಯಾಗಿ ಸಿ.ಎನ್‌. ಮಂಜುನಾಥ ಎನ್ನುವ ಹೆಸರಿನವರನ್ನು ಕರೆತಂದು ಚುನಾವಣೆಗೆ ನಿಲ್ಲಿಸಿದ್ದಾರೆ’ ಎಂದು ಹೇಳಿದರು.

‘ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ, ಅವರ ರಾಜಕೀಯ ಮುಗಿದೇ ಹೋಯಿತು. ಇನ್ನೇನಿದ್ದರೂ ನಾನೇ ಎನ್ನುವ ಭ್ರಮೆಯಲ್ಲಿದ್ದರು. ಕುಮಾರಸ್ವಾಮಿ ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಗೆಲುವು ಸಾಧಿಸಿ ಕೇಂದ್ರದಲ್ಲಿ ಸಚಿವರಾಗಲಿದ್ದಾರೆ. ನಂತರ ನಮ್ಮ ಅಸ್ತಿತ್ವ ಇರುವುದಿಲ್ಲ ಎಂಬ ಭಯ ಕಾಂಗ್ರೆಸ್ಸಿಗರಿಗೆ ಕಾಡುತ್ತಿದೆ’ ಎಂದು ತಿರುಗೇಟು ನೀಡಿದರು.

‘ಏನೇ ವೈಮನಸ್ಸು ಇದ್ದರೂ, ದಿಂಗಾಲೇಶ್ವರ ಶ್ರೀಗಳು ಚರ್ಚೆ ನಡೆಸಿ ಪರಿಹರಿಸಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ನಮ್ಮ ಜೊತೆಗೆ ಕೈಜೋಡಿಸಿ ಎಂದು ಮನವಿ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT