ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭೆ ಕ್ಷೇತ್ರ: ಶೆಟ್ಟರ್ ಜೇಬಿಗೆ ಬಿಜೆಪಿ ಟಿಕೆಟ್

Published 24 ಮಾರ್ಚ್ 2024, 16:59 IST
Last Updated 24 ಮಾರ್ಚ್ 2024, 16:59 IST
ಅಕ್ಷರ ಗಾತ್ರ

ಬೆಳಗಾವಿ: ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡುವ‌ ಮೂಲಕ ಬಿಜೆಪಿ‌ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಇದೇ ಮೊದಲ ಬಾರಿ ಜಿಲ್ಲೆಯ ಹೊರಗಿನವರಿಗೆ ಬಿಜೆಪಿ ಮಣೆ ಹಾಕಿರುವ ಕಾರಣ ಜಿಲ್ಲೆಯ ರಾಜಕಾರಣ ಹೊಸ ತಿರುವು ಪಡೆದಿದೆ.

ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಏಕಮಾತ್ರ ಮಹಿಳಾ ಸಂಸದೆ ಮಂಗಲಾ ಅಂಗಡಿ ಅವರಿಗೆ ಟಿಕೆಟ್‌ ಕೈತಪ್ಪಿದೆ. ಮತ್ತೊಂದೆಡೆ, ‘ನಮ್ಮ ಕುಟುಂಬದವರಿಗೇ ಟಿಕೆಟ್ ಸಿಗುತ್ತದೆ’ ಎಂಬ ಮಂಗಲಾ ಅವರ ಮಾತೂ ನಿಜವಾಗಿದೆ.

ಪರ–ವಿರೋಧ: ಶೆಟ್ಟರ್ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ, ಕಳೆದೊಂದು‌ ತಿಂಗಳಿಂದಲೂ ಸಾಕಷ್ಟು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದವು. ಶಾಸಕ ಅಭಯ ಪಾಟೀಲ, ಟಿಕೆಟ್ ಆಕಾಂಕ್ಷಿ ಮಹಾಂತೇಶ ಕವಟಗಿಮಠ ಅಭಿಮಾನಿಗಳು ಹಾಗೂ ಕೆಲವು ನಾಯಕರು ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದರು.

ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಅವರ ನಿವಾಸದಲ್ಲಿ ಸಭೆ ನಡೆಸಿ, ‘ಶೆಟ್ಟರ್‌ಗೆ ಟಿಕೆಟ್‌ ನೀಡದಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ‘ಗೋ ಬ್ಯಾಕ್‌ ಶೆಟ್ಟರ್‌’ ಅಭಿಯಾನ ನಡೆದಿತ್ತು. ಇದರಿಂದಾಗಿ ಶೆಟ್ಟರ್‌ ಅವರಿಗೆ ಬೆಳಗಾವಿಯಿಂದ ಟಿಕೆಟ್ ಅಂತಿಮಗೊಳಿಸುವಲ್ಲಿ ವಿಳಂಬವಾಗಿತ್ತು.

ನಿಯೋಗವೊಂದನ್ನು ಬೆಂಗಳೂರಿಗೆ‌ ಕರೆದೊಯ್ದು, ಹಿರಿಯ ನಾಯಕರಿಗೆ ಮನವರಿಕೆ ಮಾಡಲು ಯತ್ನಿಸಿದರು. ಆದರೆ, ಯಾರ ಮಾತಿಗೂ ಸೊಪ್ಪು ಹಾಕದ ನಾಯಕರು ‘ಪಕ್ಷಕ್ಕಿಂತ ದೊಡ್ಡವರು ‌ಯಾರೂ ಇಲ್ಲ. ಪಕ್ಷ ಹೇಳಿದಂತೆ ಕೇಳಿ’ ಎಂದು ಕಟ್ಟಪ್ಪಣೆ ಮಾಡಿ ಕಳುಹಿಸಿದ್ದರು.

ಬಿಜೆಪಿ ಭದ್ರಕೋಟೆ: ಬೆಳಗಾವಿ ಕ್ಷೇತ್ರವು ಬಿಜೆಪಿಯ ಭದ್ರಕೋಟೆ. 2004ರಿಂದ 2019ರವರೆಗೆ ನಡೆದ ಸತತ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಯ ಸುರೇಶ ಅಂಗಡಿ ಇಲ್ಲಿ ಚುನಾಯಿತರಾಗಿದ್ದರು. ಅವರು ನಿಧನರಾದ ನಂತರ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಗೆದ್ದಿದ್ದರು.

ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಗಿಟ್ಟಿಸಲು ಆಕಾಂಕ್ಷಿಗಳ ದೊಡ್ಡಪಟ್ಟಿಯೇ ಇತ್ತು. ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಮಾಜಿ ಸಂಸದ ರಮೇಶ ಕತ್ತಿ ಮತ್ತಿತರರು ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದರು.

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕ. ಆ ಮತಗಳ ಮೇಲೆ ಕಣ್ಣಿಟ್ಟು ಜಗದೀಶ ಶೆಟ್ಟರ್‌ ಅವರಿಗೆ ಬಿಜೆಪಿ ವರಿಷ್ಠರು ಟಿಕೆಟ್‌ ಕೊಟ್ಟಿದ್ದಾರೆ. ಆದರೆ, ತಾವು ಹೊರಗಿನವರು ಎಂಬ ಹಣೆಪಟ್ಟಿಯೊಂದಿಗೆ ಜಗದೀಶ ಶೆಟ್ಟರ್ ಈ ಕ್ಷೇತ್ರ ಪ್ರವೇಶಿಸುವುದು ಅನಿವಾರ್ಯವಾಗಿದೆ. ಅಲ್ಲದೆ, ಸ್ಥಳೀಯ ಮಟ್ಟದಲ್ಲಿ ತಲೆದೋರಿದ ಭಿನ್ನಮತ ಶಮನಗೊಳಿಸಿ ಅವರು ಹೇಗೆ ಚುನಾವಣೆ ಎದುರಿಸುತ್ತಾರೆ ಎಂಬುದರ ಮೇಲೆಯೇ ಫಲಿತಾಂಶ ನಿರ್ಧಾರವಾಗಲಿದೆ ಎನ್ನುವುದು ಮತದಾರರ ಮಾತು.

‘ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಜಗದೀಶ ಶೆಟ್ಟರ್‌, ಬೆಳಗಾವಿ ಟಿಕೆಟ್‌ ತಮಗೆ ನೀಡಲೇಬೇಕೆಂಬ ಷರತ್ತಿನಿಂದ ಮರಳಿ ಕಮಲ ಪಾಳಯ ಸೇರಿದ್ದರು. ಅವರನ್ನು ಕರೆತರುವಲ್ಲಿ ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಫಲವಾಗಿದ್ದರು. ಈಗ ಕೊಟ್ಟ ಮಾತಿನಂತೆ ಟಿಕೆಟ್‌ ಕೊಟ್ಟಿದ್ದಾರೆ. ಅವರ ಸ್ಪರ್ಧೆಗೆ ಇಡೀ ಜಿಲ್ಲೆಯಲ್ಲಿ ಪಕ್ಷದ ನಾಯಕರ ವಿರೋಧವಿಲ್ಲ. ಟಿಕೆಟ್ ಆಕಾಂಕ್ಷಿಗಳಷ್ಟೇ ವಿರೋಧಿಸಿದ್ದರು. ಈಗ ಪಕ್ಷದ ವರಿಷ್ಠರು ಭಿನ್ನಮತ ಶಮನಗೊಳಿಸುತ್ತಾರೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT