ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಪಕ್ಷಗಳನ್ನು ಸದೆಬಡಿದು ಮತ್ತೆ ಅಧಿಕಾರಕ್ಕೆ ಬರುವ ಮನಸ್ಥಿತಿ: ಪರಮೇಶ್ವರ

Published 30 ಮಾರ್ಚ್ 2024, 7:58 IST
Last Updated 30 ಮಾರ್ಚ್ 2024, 7:58 IST
ಅಕ್ಷರ ಗಾತ್ರ

ಬೆಂಗಳೂರು: ‘ವಿರೋಧ ಪಕ್ಷಗಳನ್ನು ಸದೆಬಡಿದು ಮತ್ತೆ ಅಧಿಕಾರಕ್ಕೆ ಬರುವ ಮನಸ್ಥಿತಿಯಿಂದ ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ದೂರಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳ ಕಾರ್ಯ ನಿರಂತರವಾಗಿ ನಡೆಯುತ್ತದೆ. ಆದರೆ, ಇಷ್ಟು ದಿನ ಸುಮ್ಮನಿದ್ದು ಚುನಾವಣೆ ಸಂದರ್ಭದಲ್ಲಿ ಆಸಕ್ತಿ ತೋರಿಸಿರುವುದು ಯಾಕೆ? ಆದಾಯ ತೆರಿಗೆ ಇಲಾಖೆಯವರು ಈಗ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವುದರ ಅರ್ಥವೇನು? ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಯಾವ ಉದ್ದೇಶಕ್ಕಾಗಿ ಜಪ್ತಿ ಮಾಡಲಾಗಿದೆ’ ಎಂದು ಪ್ರಶ್ನಿಸಿದರು.

‘ಚುನಾವಣಾ ಬಾಂಡ್‌ಗಳನ್ನು ಕೊಡಬಹುದು, ಹಣ ಕೊಡುವಂತಿಲ್ಲ ಎಂದು ಕಳೆದ ಚುನಾವಣೆಯಲ್ಲಿ ಹೇಳಲಾಗಿತ್ತು. ಇದಕ್ಕೆ ಚುನಾವಣೆ ಆಯೋಗ ಅನುಮತಿ ನೀಡಿತ್ತು. ಎಲ್ಲ ಪಕ್ಷದವರು ಚುನಾವಣಾ ಬಾಂಡ್‌ಗಳನ್ನು ದೇಣಿಗೆಯಾಗಿ ತೆಗೆದುಕೊಂಡರು. ಬಿಜೆಪಿಯವರು ಹೆಚ್ಚು ಬಾಂಡ್‌ಗಳನ್ನು ತೆಗೆದುಕೊಂಡಿದ್ದು, ₹ 8,200 ಕೋಟಿಗೂ ಹೆಚ್ಚು ತೆಗೆದುಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ₹ 1,800 ಕೋಟಿ ಬಂದಿದೆ. ಬಿಜೆಪಿಯವರು ₹ 8,200 ಕೋಟಿ ಪೈಕಿ, ₹ 6,600 ಕೋಟಿಗೆ ಲೆಕ್ಕ ಕೊಟ್ಟಿದ್ದು, ಬಾಕಿ ಹಣದ ಲೆಕ್ಕ ತೋರಿಸಿಲ್ಲ. ಇದ್ದಕ್ಕಿದ್ದಂತೆ ₹ 1,800 ಕೋಟಿ ತೆರಿಗೆ ಕಟ್ಟುವಂತೆ ನಮ್ಮ ಪಕ್ಷಕ್ಕೆ ನೋಟಿಸ್ ಕೊಡುವುದಾದರೆ, ಬಿಜೆಪಿಯವರು ಲೆಕ್ಕ ತೋರಿಸಿರುವ ₹ 6,600 ಕೋಟಿಗೂ ನೋಟಿಸ್ ನೀಡಲಿ. ಕೇವಲ ಕಾಂಗ್ರೆಸ್‌ನವರಿಗೆ ನೋಟೀಸ್ ನೀಡಿರುವುದು, ರಾಜಕೀಯ ದುರುದ್ದೇಶ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT