ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | ತಾಂಡಾವಾಸಿಗಳಿಗೆ ಮತ ಕೇಂದ್ರಕ್ಕೆ ಹೋಗುವುದೇ ಸವಾಲು

Published 10 ಮೇ 2023, 5:16 IST
Last Updated 10 ಮೇ 2023, 5:16 IST
ಅಕ್ಷರ ಗಾತ್ರ

ಜಗನ್ನಾಥ ಡಿ. ಶೇರಿಕಾರ

ಚಿಂಚೋಳಿ: ರಾಜ್ಯದಲ್ಲಿ ಅತಿ ಹೆಚ್ಚು ಲಂಬಾಣಿ ಸಮುದಾಯದ ಜನರಿರುವ ವಿಧಾನಸಭಾ ಮತಕ್ಷೇತ್ರ ಎಂಬ ಕೀರ್ತಿ ಹೊಂದಿರುವ ಚಿಂಚೋಳಿ ಕ್ಷೇತ್ರದಲ್ಲಿನ ತಾಂಡಾವಾಸಿಗಳು ಮತಗಟ್ಟೆಗೆ ತೆರಳಬೇಕಾದರೆ ಹಲವು ಕೀ.ಮೀ ಕಾಲ್ನಡಿಗೆ ಮತ್ತು ವಾಹನಗಳಲ್ಲಿ ತೆರಳುವುದು ಅನಿವಾರ್ಯವಾಗಿದೆ.

ಮತಗಟ್ಟೆಗಳು ಜನವಸತಿ ಪ್ರದೇಶದಿಂದ ದೂರ ಇರುವುದು ಗೊತ್ತಿದ್ದರೂ ಮತದಾನಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡದೇ ಚುನಾವಣಾ ಆಯೋಗ ಪರೋಕ್ಷವಾಗಿ ಚುನಾವಣಾ ಅಕ್ರಮಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮತಕ್ಷೇತ್ರದ ಮೋಘಾ ಗ್ರಾ.ಪಂ. ವ್ಯಾಪ್ತಿಗೆ ಬರುವ ಧಾವಜಿ ನಾಯಕ ತಾಂಡಾದಿಂದ ಮೋಘಾ ಗ್ರಾಮದಲ್ಲಿರುವ ಮತಗಟ್ಟೆಗೆ ತೆರಳಲು ಸೂಕ್ತ ರಸ್ತೆ ಇಲ್ಲದಿಂದ ಕಾಲ್ನಡಿಗೆಯಲ್ಲಿ 4 ಕೀ.ಮೀ ತೆರಳಿ ಮತ ಚಲಾಯಿಸಬೇಕಿದೆ. 

ವಾಹನಗಳಲ್ಲಿ ತೆರಳಬೇಕಾದರೆ ಧಾಮಜಿ ನಾಯಕ ತಾಂಡಾ, ನರನಾಳ, ರಾಣಾಪುರ ಕ್ರಾಸ್, ಸಾಸರಗಾಂವ್ ಕ್ರಾಸ, ರುಮ್ಮನಗೂಡ ಮೂಲಕ ಮೋಘಾ ತಲುಪಬೇಕು ಇದು ಸುಮಾರು 14 ಕಿ.ಮೀ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಪಂಚಾಯಿತಿಯ ಧಾವಜಿ ನಾಯಕ ತಾಂಡಾದ ಕೆಳಭಾಗದಲ್ಲಿ ಬರುವ ಸಕ್ರು ನಾಯಕ ತಾಂಡಾ ವಾಸಿಗಳು 2 ಕಿ.ಮೀ ದೂರದ ಮತಗಟ್ಟೆಗೆ ತೆರಳುವ ಸ್ಥಿತಿಯಿದೆ.

ಚಿಂಚೋಳಿ ವನ್ಯಜೀವಿ ಧಾಮದ ಶೇರಿಭಿಕನಳ್ಳಿ ಗ್ರಾಮದ ವಾಸಿಗಳು 4 ಕಿ.ಮೀ ದೂರದ ಧರ್ಮಾಸಾಗರ ಮತ್ತು 1.4 ಕಿ.ಮೀ ದೂರದ ಮೋಟಿಮೋಕ್ ತಾಂಡಾವಾಸಿಗಳು ಧರ್ಮಾಸಾಗರಕ್ಕೆ ಬಂದು ಹಕ್ಕು ಚಲಾಯಿಸಬೇಕಿದೆ. ಶಾದಿಪುರ ಮತಗಟ್ಟೆಗೆ 2 ಕಿ.ಮೀ ದೂರದ ಧನಸಿಂಗ್ ನಾಯಕ ತಾಂಡಾದ ಮತದಾರರು ಬಂದು ಹಕ್ಕು ಚಲಾಯಿಸಬೇಕು.

ತಾಲ್ಲೂಕಿನ ಚಂದನಕೇರಾ ಗ್ರಾ.ಪಂ. ವ್ಯಾಪ್ತಿಯ ಖೂನಿ ತಾಂಡಾ ಮತಗಟ್ಟೆಗೆ 5 ಕಿ.ಮೀ ದೂರದ ಮಂಡಗೊಳ ತಾಂಡಾವಾಸಿಗಳು ಮತ್ತು 3 ಕಿ.ಮೀ ದೂರದ ಸಿರಸನ್ ಬುಗುಡಿ ತಾಂಡಾವಾಸಿಗಳು ತೆರಳಿಮತದಾನ ಮಾಡಬೇಕು. ಚಂದನಕೇರಾದಿಂದ 2 ಕಿ.ಮೀ ದೂರದ ಕಲದೊಡ್ಡಿ ತಾಂಡಾದ ಮತದಾರರು ಚಂದನಕೇರಾ ಮತದಾನ ಕೇಂದ್ರಕ್ಕೆ ಬರಬೇಕು. ಕಮಲಾಪುರ ತಾಲ್ಲೂಕಿನ ಚೇಂಗಟಾ ಗ್ರಾ.ಪಂ. ವ್ಯಾಪ್ತಿಯ ಮೋತಿರಾಮ ನಾಯಕ ತಾಂಡಾದ ಮತದಾರರು 5 ಕಿ.ಮೀ ದೂರದ ಚೇಂಗಟಾ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಬೇಕು.

ಇಲ್ಲಿನ ಹೊನಬಟ್ಟ ತಾಂಡಾವಾಸಿಗಳು 2 ಕಿ.ಮೀ ದೂರದ ಚೇಂಗಟಾಕ್ಕೆ ಬಂದು ಮತದಾನ ಮಾಡಬೇಕು. ಕಾಳಗಿ ತಾಲ್ಲೂಕಿನ ರಟಕಲ ಮತಗಟ್ಟೆಗೆ ಸಣ್ಣ ತಾಂಡಾದ 7 ಕಿ.ಮೀ, ದೊಡ್ಡ ತಾಂಡಾ 3 ಕಿ.ಮೀ ಕ್ರಮಿಸಿ ಬರಬೇಕು. ಭೈರಂಪಳ್ಳಿ ತಾಂಡಾವಾಸಿಗಳು 2 ಕಿ.ಮೀ ದೂರದ ಭೈರಂಪಳ್ಳಿಗೆ ಬಂದು ಮತದಾನ ಮಾಡಬೇಕು.

ಪಸ್ತಪುರ ತಾಂಡಾವಾಸಿಗಳು 2 ಕಿ.ಮೀ ದೂರ ಕ್ರಮಿಸುವುದು ಅನಿವಾರ್ಯವಾಗಿದೆ. ಕಾಳಗಿ ತಾಲ್ಲೂಕಿನ ಕಿಂಡಿ ತಾಂಡಾದಿಂದ ಕರಿಕಲ್ ತಾಂಡಾ ಮತಗಟ್ಟೆ 2 ಕಿ.ಮೀ, ನಾಮು ನಾಯಕ ತಾಂಡಾ 2.5 ಕಿ,ಮೀ ತೆರಳಿ ಮತದಾನ ಮಾಡಬೇಕು. ಅಣಕಲ್ ಬಳಿಯ ಖಿಂಡಿ ತಾಂಡಾದವರು ರೇವಗ್ಗಿ ಮತಗಟ್ಟೆಗೆ 3.5 ಕಿ.ಮೀ, ಶಿಂಗ್ಯಾನಅಣಿ ತಾಂಡಾದವರು ಅಣಕಲ್ ಬುಗುಡಿ ತಾಂಡಾ ಮತಗಟ್ಟೆಗೆ 3.5 ಕಿ.ಮೀ ತೆರಳಬೇಕು.

ಜನವಸತಿ ಪ್ರದೇಶದಿಂದ ಮತಗಟ್ಟೆಗಳು ತುಂಬಾ ದೂರ ಇರುವುದರಿಂದ ಮತದಾನ ಕಡಿಮೆ ಆಗುವ ಸಾಧ್ಯತೆಯಿದೆ. ಇಲ್ಲವೇ ರಾಜಕೀಯ ಪಕ್ಷಗಳು ಸಾರಿಗೆ ಸೌಲಭ್ಯ ಕಲ್ಪಿಸಿ ಪರೋಕ್ಷ ಪ್ರಭಾವ ಬೀರುತ್ತವೆ. ಹೀಗಾಗಿ ಚುನಾವಣಾ ಆಯೋಗವೇ ಇಂತಹವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು
ಭೀಮಶೆಟ್ಟಿ ಮುಕ್ಕಾ, ಸಾಮಾಜಿಕ ಕಾರ್ಯಕರ್ತ

ಇದ್ದಲಮೋಕ ತಾಂಡಾ 2 ಕಿ.ಮೀ, ಯತೆಬಾಪುರ, ಜಂಗ್ಲಿಪೀರ ತಾಂಡಾದವರು 3.5 ಕಿ,ಮೀ ದೂರದ ಗೌಡಪಗುಡಿ ತಾಂಡಾ ಮತಗಟ್ಟೆಗೆ ಬರಬೇಕು. ಕುಸ್ರಂಪಳ್ಳಿ ತಾಂಡಾದವರು ಕುಸ್ರಂಪಳ್ಳಿ 2 ಕಿ.ಮೀ, ಧರಿ ತಾಂಡಾದವರು ಸಜ್ಜನಕೊಳ್ಳ 2. ಕಿ.ಮೀ, ಕ್ರಮಿಸುವುದು ಅನಿವಾರ್ಯವಾಗಿದೆ.

ಮತಗಟ್ಟೆಗಳಿಗೆ ಮೂಲಸೌಕರ್ಯ: ಮತಗಟ್ಟೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಕಟ್ಟಡ ತಾತ್ಕಾಲಿಕ ದುರಸ್ತಿಗೊಳಿಸಿ, ವಿದ್ಯುತ್ ಸೌಲಭ್ಯ, ಬೆಳಕಿನ ವ್ಯವಸ್ಥೆ ಹಾಗೂ ಟೇಬಲ್ ಫ್ಯಾನ ಹಾಗೂ ರ‍್ಯಾಂಪ್ ಮತ್ತು ಕಟ್ಟಡದ ಹೊರಗಡೆ ಶೌಚಾಲಯ ಸೌಲಭ್ಯ ಒದಗಿಸಿದ್ದು ತಾಲ್ಲೂಕಿನ ಮತಗಟ್ಟೆಗಳಲ್ಲಿ ಗೋಚರಿಸಿತು.

ಕೆಲವೊಂದು ಕಟ್ಟಡಗಳು ನಿರುಪಯುಕ್ತವಾಗಿದ್ದರಿಂದ ಚುನಾವಣೆಯಲ್ಲಿ ಬಳಕೆಯಾಗುತ್ತಿರುವುದರಿಂದ ಇವುಗಳ ದುರಸ್ತಿ ಅನಿವಾರ್ಯವಾಗಿತ್ತು. ಅದರಂತೆ ದುರಸ್ತಿ ಮಾಡಿ ಅಲ್ಲಿ ಚುನಾವಣಾ ಕಾರ್ಯ ಸರಳವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ತಾಲ್ಲೂಕಿನ ಯಲಕಪಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕಟ್ಟಡದ ಹೊರಗಡೆ ಶೌಚಾಲಯವಿರುವುದು ಗೋಚರಿಸಿತು. ಈ ಬಗ್ಗೆ ಚುನಾವಣೆ ಸಿಬ್ಬಂದಿಗಳಿಗೆ ಮಾತನಾಡಿಸಿದಾಗ ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಪ್ರತಿಕ್ರಿಯಿಸಿದರು.

ಭೀಮಶೆಟ್ಟಿ ಮುಕ್ಕಾ ಸಾಮಾಜಿಕ ಕಾರ್ಯಕರ್ತ
ಭೀಮಶೆಟ್ಟಿ ಮುಕ್ಕಾ ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT