ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರಿಗೆ ಮುಳುವಾಯಿತೇ ‘ಭ್ರಷ್ಟಾಚಾರ’ದ ಹೇಳಿಕೆ?

ಬಿಜೆಪಿ ಸ್ಥಳೀಯ ಮುಖಂಡರೊಂದಿಗೆ ಹೊಂದಾಣಿಕೆ ಸಮಸ್ಯೆ; ಒಲವು ತೋರದ ಹೈಕಮಾಂಡ್‌
Published 28 ಮಾರ್ಚ್ 2024, 6:52 IST
Last Updated 28 ಮಾರ್ಚ್ 2024, 6:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಅವರು ಚಿತ್ರದುರ್ಗ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್‌ ಕೊನೆಗೂ ಒಲವು ತೋರಲಿಲ್ಲ. ಭ್ರಷ್ಟಾಚಾರದ ಕುರಿತು ಬಹಿರಂಗವಾಗಿ ನೀಡಿದ ಹೇಳಿಕೆಯೇ ಅವರಿಗೆ ಮುಳುವಾಗಿರುವಂತೆ ಕಾಣುತ್ತಿದೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿಯನ್ನು ನಾರಾಯಣಸ್ವಾಮಿ ಬಹಿರಂಗವಾಗಿ ತೋರಿಸಿಕೊಳ್ಳದಿದ್ದರೂ ವರಿಷ್ಠರು ಸೂಚಿಸಿದರೆ ಅಖಾಡಕ್ಕೆ ಇಳಿಯುವ ಸಿದ್ಧತೆ ಮಾಡಿಕೊಂಡಿದ್ದರು. ಮತ್ತೊಮ್ಮೆ ಸ್ಪರ್ಧಿಸುವಂತೆ ‘ಎಡಗೈ’ ಸಮುದಾಯ ಎಷ್ಟೇ ಒತ್ತಡ ಹೇರಿದರೂ ಹೈಕಮಾಂಡ್‌ನತ್ತ ಬೊಟ್ಟು ತೋರಿಸುತ್ತಿದ್ದರು. ಗೋವಿಂದ ಕಾರಜೋಳ ಅವರಿಗೆ ಅವಕಾಶ ಮಾಡಿಕೊಡುವ ಮೂಲಕ ರಾಷ್ಟ್ರ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.

ಆನೇಕಲ್‌ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ನಾರಾಯಣಸ್ವಾಮಿ, ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದು ಆಕಸ್ಮಿಕ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಂಡಿದ್ದ ಸೋಲಿನಿಂದ ಅವರನ್ನು ಹೊರತರಲು ಪಕ್ಷ ಹೊಸ ಅವಕಾಶವೊಂದನ್ನು ಮುಂದಿಟ್ಟಿತ್ತು. 2019ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾಗಿದ್ದರು.

‘ನಿರೀಕ್ಷೆಯಂತೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ’ ಎಂಬುದನ್ನು ಸ್ವತಃ ಸಂಸದರೇ ಬಹಿರಂಗವಾಗಿ ಹೇಳಿಕೊಂಡಿದ್ದರು. ಸಂಸದರಾಗಿದ್ದಾಗ ಆಗಾಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾರಾಯಣಸ್ವಾಮಿ, ಸಚಿವರಾದ ಬಳಿಕ ಕ್ಷೇತ್ರ ಭೇಟಿ ಅಪರೂಪವಾಗಿತ್ತು. ಚುನಾವಣೆ ಸಮೀಪಿಸಿದರೂ ನಾರಾಯಣಸ್ವಾಮಿ ಕ್ಷೇತ್ರದತ್ತ ಸುಳಿದಿರಲಿಲ್ಲ. ಹಾಲಿ ಸಂಸದರಿಗೆ ಮತ್ತೆ ಟಿಕೆಟ್‌ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದ ಅನೇಕರಲ್ಲಿ ಹೊಸ ಆಸೆಯನ್ನು ಇದು ಚಿಗುರಿಸಿತ್ತು.

ನಾರಾಯಣಸ್ವಾಮಿ ಸಂಸದರಾಗಿ ಆಯ್ಕೆಯಾದ ಕೆಲವೇ ದಿನಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದರು. ಜಿಲ್ಲೆಯ ಶಾಸಕರು ಹಾಗೂ ಸಂಸದರ ಒಡನಾಟ ಅಷ್ಟೇನೂ ಚೆನ್ನಾಗಿರಲಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಗಳಿಗೆ ಶಾಸಕರು ಬರುತ್ತಿರಲಿಲ್ಲ. ಸ್ಥಳೀಯ ಬಿಜೆಪಿ ಮುಖಂಡರ ಜೊತೆಗೂ ಸಂಸದರ ಒಡನಾಟವೂ ಅಷ್ಟಕ್ಕಷ್ಟೇ ಎಂಬಂತೆ ಇತ್ತು.

ಭ್ರಷ್ಟಾಚಾರದ ಬಗ್ಗೆ ಆಡಿದ ಮಾತು..
‘ಭ್ರಷ್ಟಾಚಾರದಿಂದ ಬೇಸತ್ತು ರಾಜಕಾರಣದಿಂದ ದೂರ ಉಳಿಯುವ ಬಗ್ಗೆ ಆಲೋಚಿಸಿದ್ದೇನೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ...’ ಡಿ.22ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಎ.ನಾರಾಯಣಸ್ವಾಮಿ ‘ಭ್ರಷಾಚಾರದ ಕುರ್ಚಿಯ ಪಕ್ಕದಲ್ಲಿಯೂ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ರಾಜಕಾರಣದಲ್ಲಿರುವ ಭ್ರಷ್ಟಾಚಾರ ಕಣ್ಣಿಗೆ ಬಿದ್ದಾಗಲೇ ಈ ನಿರ್ಧಾರ ಕೈಗೊಂಡಿದ್ದೇನೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಲ್ಲ. ಭವಿಷ್ಯದಲ್ಲಿ ರಾಜಕಾರಣದಿಂದಲೇ ಹೊರಗುಳಿಯುವೆ..’ ಈ ಹೇಳಿಕೆ ಭಾರಿ ಸಂಚಲನವುಂಟು ಮಾಡಿತ್ತು. ಇದಕ್ಕೆ ಬಿಜೆಪಿ ವರಿಷ್ಠರು ತೀವ್ರ ಅಸಮಾಧಾನಗೊಂಡಿದ್ದರು. ಸಚಿವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲಿದ್ದಾರೆ ಎಂಬ ವಿಶ್ಲೇಷಣೆಗಳೂ ನಡೆದಿದ್ದವು.
ರಾಜ್ಯ ರಾಜಕಾರಣದತ್ತ ಚಿತ್ತ
ನಾರಾಯಣಸ್ವಾಮಿ ಅವರು ರಾಜ್ಯ ರಾಜಕಾರಣದತ್ತ ಮುಖ ಮಾಡುವ ಸಾಧ್ಯತೆ ಇದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್‌ ವಿಧಾನಸಭಾ ಕ್ಷೇತ್ರದಿಂದಲೇ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ನಾರಾಯಣಸ್ವಾಮಿ ಸಂಸದರಾಗಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲ. ಕ್ಷೇತ್ರದ ಜನಮಾನಸದಲ್ಲಿ ಉಳಿಯಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT