ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ‘ಉಸ್ತುವಾರಿ’ ಮಾತಿಗೆ ಬಗ್ಗದ ಮಾಜಿ ಸಚಿವ

ಮುನಿಸು ಶಮನಕ್ಕೆ ಪ್ರಯತ್ನ; ಶಿವಶಂಕರ ರೆಡ್ಡಿ ಜೊತೆ ಸುರ್ಜೇವಾಲಾ ಮಾತುಕತೆ
Published 4 ಏಪ್ರಿಲ್ 2024, 23:30 IST
Last Updated 4 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಗೌರಿಬಿದನೂರು: ಲೋಕಸಭೆ ಚುನಾವಣೆ ಸಮಯದಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಅವರ ಜೊತೆ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮನವೊಲಿಕೆಗೆ ಪ್ರಯತ್ನಿಸಿದರು. 

ಆದರೆ ಶಿವಶಂಕರ ರೆಡ್ಡಿ ಅವರು ಉಸ್ತುವಾರಿಯ ಭರವಸೆಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದರೆ ಮಾತ್ರ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿ ಆಗುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ.

‘ನಿಮ್ಮ ಹಿತವನ್ನು ಈಗ ಮತ್ತು ಮುಂದೆಯೂ ಕಾಪಾಡುತ್ತೇವೆ. ನೀವು ಹಿರಿಯ ನಾಯಕರು. ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ’ ಎಂದು ಸುರ್ಜೇವಾಲಾ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.

ಸುದೀರ್ಘವಾಗಿ ನಡೆದ ಮಾತುಕತೆಯ ವೇಳೆ ಶಿವಶಂಕರ ರೆಡ್ಡಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ತಾವು ಏಕೆ ತಟಸ್ಥವಾಗಿದ್ದೇನೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

‘ದೆಹಲಿ ಉಸ್ತುವಾರಿ ನಾಯಕರು ಈಗ ಇರುತ್ತಾರೆ. ಕೆಲವು ದಿನಗಳ ನಂತರ ಬದಲಾಗುತ್ತಾರೆ. ಅವರ ಭರವಸೆ ಮಾತನ್ನು ಎಷ್ಟರ ಮಟ್ಟಿಗೆ ನಂಬಬಹುದು? ಆದ್ದರಿಂದ ರಾಜ್ಯ ಮಟ್ಟದಲ್ಲಿ ಸಿ.ಎಂ ಮತ್ತು ಡಿಸಿಎಂ ಜೊತೆ ಮಾತುಕತೆ ನಡೆಸಿದ ನಂತರ ನಿರ್ಧಾರ ಪ್ರಕಟಿಸುವರು’ ಎಂದು ಶಿವಶಂಕರ ರೆಡ್ಡಿ ಅವರ ಆಪ್ತ ವಲಯ ತಿಳಿಸಿದೆ. 

‘ಚುನಾವಣೆ ಸಮಯದಲ್ಲಿ ಬೇಸರ, ಅಸಮಾಧಾನ ಶಮನಗೊಳಿಸಲು ಎಲ್ಲ ಪಕ್ಷಗಳಲ್ಲಿಯೂ ಮುಖಂಡರಿಗೆ ಭರವಸೆ ಕೊಡುತ್ತಾರೆ. ಸರಿಪಡಿಸುತ್ತೇವೆ ಎನ್ನುತ್ತಾರೆ. ಆದರೆ ಚುನಾವಣೆ ಮುಗಿದ ನಂತರ ಕೊಟ್ಟ ಮಾತಿಗೆ ಎಷ್ಟರ ಮಟ್ಟಿಗೆ ಬದ್ಧತೆ ಉಳಿಸಿಕೊಳ್ಳುತ್ತಾರೆ. ಈಗ ನಡೆದಿರುವುದು ಇದೇ ಚರ್ಚೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ ನಂತರ ನಮ್ಮ ನಾಯಕ ಶಿವಶಂಕರ ರೆಡ್ಡಿ ಸೂಕ್ತ ತೀರ್ಮಾನಕೈಗೊಳ್ಳುವರು. ಅವರ ನಿರ್ಧಾರಕ್ಕೆ ನಾವು ಬದ್ಧ’ ಎಂದು ಬೆಂಬಲಿಗರು ತಿಳಿಸಿದರು.

ರೆಡ್ಡಿ ಅವರ ಮುನಿಸು ಶಮನಕ್ಕೆ ಕಾಂಗ್ರೆಸ್‌ ವರಿಷ್ಠರು ಗಂಭೀರವಾಗಿಯೇ ಪ್ರಯತ್ನಿಸುತ್ತಿದ್ದಾರೆ. ಆದರೆ ಆ ಪ್ರಯತ್ನ ಎಷ್ಟರ ಮಟ್ಟಿಗೆ ಕೈಗೂಡುತ್ತದೆ ಎನ್ನುವುದು ರಾಜ್ಯ ನಾಯಕರು ಮಾಜಿ ಸಚಿವರಿಗೆ ನೀಡುವ ಭರವಸೆಯ ಮೇಲೆ ನಿಂತಿದೆ ಎನ್ನುತ್ತಾರೆ ಆಪ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT