ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS polls |ಬಿರುಸು ಪಡೆದ ಕಾಂಗ್ರೆಸ್ ಪ್ರಚಾರ; ಪಕ್ಷ ಸೇರಿದ ಹಲವು ಮುಖಂಡರು

ವಿರಾಜಪೇಟೆ, ನಾಪೋಕ್ಲು, ಕುಶಾಲನಗರದಲ್ಲಿ ಸಾರ್ವಜನಿಕ ಸಭೆ, ಯತೀಂದ್ರ ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ ಭಾಗಿ
Published 1 ಏಪ್ರಿಲ್ 2024, 5:56 IST
Last Updated 1 ಏಪ್ರಿಲ್ 2024, 5:56 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಚಾರ ಕಾರ್ಯವನ್ನು ಭಾನುವಾರ ಮತ್ತಷ್ಟು ಬಿರುಸುಗೊಳಿಸಿದ್ದು, ಹಲವು ಸಂಘಟನೆಗಳ ಮುಖಂಡರನ್ನು, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮುಂದಡಿ ಇಟ್ಟಿದೆ.

ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಡಾ.ಯತೀಂದ್ರ ಸಿದ್ದರಾಮಯ್ಯ ಜಿಲ್ಲೆಯ ವಿರಾಜಪೇಟೆ, ನಾಪೋಕ್ಲು ಹಾಗೂ ಕುಶಾಲನಗರದಲ್ಲಿ ಸಾರ್ವಜನಿಕ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಇಲ್ಲಿನ ವಿರಾಜಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ನೇತೃತ್ವದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಜೊತೆಗೆ, ಇನ್ನಷ್ಟು ಮಂದಿ ಮುಖಂಡರು ಸೇರ್ಪಡೆಯಾಗಿದ್ದು ವಿಶೇಷ ಎನಿಸಿತ್ತು. ನಾಪೋಕ್ಲುವಿನಲ್ಲು ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.

ಸರ್ವಾಧಿಕಾರಿ ಸೃಷ್ಟಿಗೆ ವ್ಯಕ್ತಿಪೂಜೆ ಕಾರಣ

ವಿರಾಜಪೇಟೆ: ‘ಸರ್ವಾಧಿಕಾರಿ ಸೃಷ್ಟಿಗೆ ವ್ಯಕ್ತಿಪೂಜೆ ಕಾರಣ’ ಎಂದು ಸಚಿವ ಡಾ. ಎಚ್.ಸಿ.ಮಹದೇವಪ್ಪ ತಿಳಿಸಿದರು.

ಇಲ್ಲಿನ ವಿರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೊಡಗು– ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸೃಷ್ಟಿಯಾದ ಸರ್ವಾಧಿಕಾರಿಯು ದೇಶದ ಸಂವಿಧಾನವನ್ನು ಮಾತ್ರವಲ್ಲ, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವುತ್ತಾನೆ’ ಎಂದು ಎಚ್ಚರಿಸಿದರು.

ಬಿಜೆಪಿಯ ಯಾವುದೇ ಕಾರ್ಯಕ್ರಮಕ್ಕೆ ಹೋದರು ಅಲ್ಲಿ ಮೋದಿ ಮೋದಿ ಎಂಬ ಘೋಷಣೆಯಷ್ಟೇ ಕೇಳಿ ಬರುತ್ತದೆ. ದೇಶದ ಅಭಿವೃದ್ಧಿಯ ಕುರಿತಾಗಲಿ, ಜನಪರ ಕೆಲಸಗಳ ಬಗ್ಗೆಯಾಗಲಿ ಒಂದು ಮಾತೂ ಕೇಳಿ ಬರುವುದಿಲ್ಲ. ಇಂತಹ ವ್ಯಕ್ತಿಪೂಜೆ ನಿಜಕ್ಕೂ ಅಪಾಯಕಾರಿ ಎಂದರು.

‘ಇಂದು ಸಂಸದೀಯ ವ್ಯವಸ್ಥೆ ಕ್ಷೀಣವಾಗುತ್ತಿದೆ. ಸರ್ವಾಧಿಕಾರ ಭಾವನೆ ಬಲವಾಗುತ್ತಿದೆ. ಸಂವಿಧಾನಕ್ಕೆ ಅಪಾಯವಿದೆ. ನಾವು ಸಂವಿಧಾನ ಉಳಿಸಿದರೆ, ಸಂವಿಧಾನ ನಮ್ಮನ್ನು ಉಳಿಸುತ್ತದೆ’ ಎಂದು ಪ್ರತಿಪಾದಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಮೋದಿ 10 ವರ್ಷದಲ್ಲಿ ಎಷ್ಟು ಹಾಳು ಮಾಡಿದ್ದಾರೆ ಎಂದರೆ, ದೇಶದ ಪ್ರಗತಿ 25 ವರ್ಷದಷ್ಟು ಹಿಂದಕ್ಕೆ ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅವರು ಕೊಟ್ಟ ಯಾವುದೇ ಭರವಸೆಗಳನ್ನೂ ಈಡೇರಿಸಿಲ್ಲ. ಕಪ್ಪುಹಣ ತರಲಿಲ್ಲ, ತಿಂಗಳಿಗೆ ₹ 15 ಸಾವಿರ ಖಾತೆಗೆ ಬರಲಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ, ಈಗ ಅವರ ಆದಾಯವಲ್ಲ ಖರ್ಚು ದುಪ್ಪಟ್ಟಾಗಿದೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಈಗ ನಿರುದ್ಯೋಗ ಹೆಚ್ಚಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಚುನಾವಣಾ ಬಾಂಡ್‌ ಹಗರಣವು ಇದಕ್ಕೆ ಸ್ಪಷ್ಟ ಉದಾಹರಣೆ’ ಎಂದರು.

ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಸೇರಿದಂತೆ ಎಲ್ಲವನ್ನೂ ತಮ್ಮ ಕಪಿಮುಷ್ಠಿಯಲ್ಲಿಟ್ಟು ಕೊಂಡಿದೆ. ಇವುಗಳ ಮೂಲಕ ಚಳವಳಿಗಾರರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಭಾರತದಲ್ಲಿ ಮುಕ್ತ ಪ್ರಜಾಪ್ರಭುತ್ವ ಇಲ್ಲ ಎಂದು ಹಲವು ವಿದೇಶಿ ಸಂಸ್ಥೆಗಳು ಹೇಳಿವೆ ಎಂದು ಕಿಡಿಕಾರಿದರು.

ಮುಖ್ಯಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಇಂದು ಮೈಸೂರು ಕೊಡಗೂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಹಿಂದೆ ಸಂದರ್ಶನ ಒದರಲ್ಲಿ ತಾವು ಯಾವುದೇ ಕಾರಣಕ್ಕೆ ರಾಜಕೀಯಕ್ಕೆ ಬರುದಿಲ್ಲ. ಇದು ತಮ್ಮ ತಾಯಿಗೆ ಇಷ್ಟವಿಲ್ಲ ಎಂದಿದ್ದರು. ಇವರನ್ನು ಬಲವಂತವಾಗಿ ಇಂದು ಬಿಜೆಪಿ ಚುನಾವಣ ಕಣಕ್ಕೆ ಇಳಿಸಿ ಜನರಿಗೆ ಹೊರೆ ಏರಿಸಿದ್ದಾರೆ’ ಎಂದು ದೂರಿದರು.

‘ನಾವು ಬರೆ ಗುದ್ದಲಿ ಪೂಜೆ ಮಾಡುವವರಲ್ಲ. ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ₹ 250 ಕೋಟಿ ಮೊತ್ತದ ಅಭಿವೃದ್ಧಿ ಕೆಲಸ ಮಾಡಿರುವೆ’ ಎಂದರು.

ಕೊಡಗು– ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ ಮಾತನಾಡಿ, ‘ನನ್ನಲ್ಲಿ ಧನ ಬಲವಿಲ್ಲ. ಆದರೆ ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಸಂಸದನಾಗಿ ಆಯ್ಕೆ ಮಾಡಿದರೆ ಅಷ್ಟೇ ನಿಷ್ಠೆಯಿಂದ ಜನರ ಸೇವೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಚುನಾವಣೆಯಲ್ಲಿ ಜಯ ಗಳಿಸಿದರೆ ಕೊಡವ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದು, ಪೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಭಾರತರತ್ನ ನೀಡುವುದು, ಕಾಫಿ ಬೆಳೆಗಾರಿಗೆ ಬೆಂಬಲ ಬೆಲೆಯ ಪ್ಯಾಕೇಜ್ ನೀಡುವುದು ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.

ರೇಷ್ಮೆ ಹಾಗೂ ಪಶುಸಂಗೋಪನೆ ಸಚಿವ ವೆಂಕಟೇಶ್ ಸಭೆಯನ್ನು ಉದೇಶಿಸಿ ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ವಹಿಸಿದ್ದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ಹಿರಿಯ ಮುಖಂಡರಾದ ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಲೇಖಕ ಸುಶ್ರಾಂತ್‍ಗೌಡ ಭಾಗವಹಿಸಿದ್ದರು.

ವಿರಾಜಪೇಟೆಯಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದರು. ಪಕ್ಷದ ಹಿರಿಯ ಮುಖಂಡರಾದ ಅರುಣ್ ಮಾಚಯ್ಯ ಅಭ್ಯರ್ಥಿ ಎಂ.ಲಕ್ಷ್ಮಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ ಶಾಸಕ ಎ.ಎಸ್.ಪೊನ್ನಣ್ಣ ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಭಾಗವಹಿಸಿದ್ದರು
ವಿರಾಜಪೇಟೆಯಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದರು. ಪಕ್ಷದ ಹಿರಿಯ ಮುಖಂಡರಾದ ಅರುಣ್ ಮಾಚಯ್ಯ ಅಭ್ಯರ್ಥಿ ಎಂ.ಲಕ್ಷ್ಮಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ ಶಾಸಕ ಎ.ಎಸ್.ಪೊನ್ನಣ್ಣ ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಭಾಗವಹಿಸಿದ್ದರು

ಪ್ರಾಮಾಣಿಕ ಅಭ್ಯರ್ಥಿ ಎಂ.ಲಕ್ಷ್ಮಣ್ ಬೆಂಬಲಿಸಿ; ಯತೀಂದ್ರ

ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ‘ಭ್ರಷ್ಟಾಚಾರ ರಹಿತ ಸರ್ಕಾರವನ್ನು ಜನತೆ ಆಯ್ಕೆ ಮಾಡಬೇಕಿದ್ದು ಪ್ರಾಮಾಣಿಕ ಅಭ್ಯರ್ಥಿಯಾದ ಎಂ.ಲಕ್ಷಣ್ ಅವರನ್ನು ಗೆಲ್ಲಿಸಲು ಪಣ ತೊಡಿ’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ನಾಪೋಕ್ಲು ಕೊಡವ ಸಮಾಜದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ‘10 ತಿಂಗಳಿನಲ್ಲಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯ ನಡೆದಿದೆ. ಬಸ್‌ನಿಲ್ದಾಣ ಸಮುದಾಯ ಭವನ ರಸ್ತೆ ದೇವಾಲಯ ಮಸೀದಿ ಚರ್ಚ್‌ಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೆರವು ನೀಡಿದೆ. ಇಂತಹ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರೆ ಎಂ.ಲಕ್ಷ್ಮಣ್ ಅವರನ್ನು ಅತ್ಯಧಿಕ ಮತದಿಂದ ಆಯ್ಕೆ ಮಾಡಬೇಕು’ ಎಂದು ಹೇಳಿದರು. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ ‘ಮುಂಬರುವ ಚುನಾವಣೆ ಅಧಿಕಾರ ಮತ್ತು ಸಿದ್ದಾಂತದ ನಡುವಿನ ಸವಾಲು ಆಗಿದ್ದು ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಮತ್ತು ಸಂವಿಧಾನವನ್ನು ಪಾಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು’ ಎಂದು ತಿಳಿಸಿದರು. ಅಭ್ಯರ್ಥಿ ಎಂ.ಲಕ್ಷ್ಮಣ್ ಮತ ಯಾಚಿಸಿದರು. ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅವರನಾಥ್ ಪಕ್ಷದ ಹಿರಿಯ ಮುಖಂಡರು ವೀಣಾ ಅಚ್ಚಯ್ಯ ಅರುಣ್ ಮಾಚಯ್ಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಸುರಯ್ಯ ಅಬ್ರಹಾಂ ಅಕ್ರಮ ಸಕ್ರಮ ಸಮಿತಿಯ ತಾಲ್ಲೂಕು ಅಧ್ಯಕ್ಷ ನೆರವಂಡ ಉಮೇಶ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಚ್.ಅಬ್ದುಲ್ ರಹಿಮಾನ್ ವಲಯ ಅಧ್ಯಕ್ಷ ಮಾಚೆಟ್ಟಿರ ಕುಶು ಕುಶಾಲಪ್ಪ ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ಉಪಾಧ್ಯಕ್ಷೆ ಹೇಮ ಅರುಣ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT