ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ ಕ್ಷೇತ್ರದ ಟಿಕೆಟ್‌ ಬಿಕ್ಕಟ್ಟಿಗೆ ತೆರೆ; ಬಣ ರಾಜಕೀಯಕ್ಕೆ ಬ್ರೇಕ್‌ ಕಷ್ಟ!

ಸೋತು ಗೆದ್ದಿತೇ ಘಟಬಂಧನ್?
Published 31 ಮಾರ್ಚ್ 2024, 6:30 IST
Last Updated 31 ಮಾರ್ಚ್ 2024, 6:30 IST
ಅಕ್ಷರ ಗಾತ್ರ

ಕೋಲಾರ: ಬೆಂಗಳೂರಿನ ಕೆ.ವಿ.ಗೌತಮ್‌ ಅವರಿಗೆ ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದ ಎರಡು ಬಣಗಳಲ್ಲಿ ಯಾರದ್ದು ಮೇಲುಗೈ ಎಂಬ ಚರ್ಚೆ ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಶುರುವಾಗಿದೆ.

ಆರಂಭದಲ್ಲಿ ಕ್ಷೇತ್ರದ ಟಿಕೆಟ್‌ ಅನ್ನು ಬಲಗೈ ಸಮುದಾಯದ ಸಿ.ಎಂ.ಮುನಿಯಪ್ಪ ಅವರಿಗೇ ಕೊಡಬೇಕೆಂದು ಪಟ್ಟು ಹಿಡಿದಿದ್ದ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಬಣ ಕೆ.ಎಚ್.ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದೇ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಬಣದವರು ಸಿ.ಎಂ.ಮುನಿಯಪ್ಪ ಅವರಿಗೆ ಟಿಕೆಟ್‌ ಕೊಡಿಸುವ ‌ಪ್ರಯತ್ನದಲ್ಲಿ ಸೋತಿದ್ದಾರೆ. ಆದರೆ, ಕೆ.ಎಚ್‌.ಮುನಿಯಪ್ಪ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸೋತು ಗೆದ್ದಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌,
‘ನಮ್ಮ ಹೋರಾಟ ಇದ್ದದ್ದು ಬಲಗೈ ಸಮುದಾಯದ ಸಿ.ಎಂ.ಮುನಿಯಪ್ಪ ಅವರಿಗೆ ಟಿಕೆಟ್‌ ಕೊಡಿಸಬೇಕು ಎಂಬುದು. ಅದಕ್ಕಾಗಿ ರಾಜಕೀಯ ಜೀವನ ಪಣಕ್ಕಿಟ್ಟು ರಾಜೀನಾಮೆ ನೀಡಲು ಮುಂದಾದೆವು. ಆದರೆ, ಈ ಕ್ರಮ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತದೆ ಎಂಬುದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಮ್ಮನ್ನು ಗದರಿದರು. ಸಂಧಾನ ಸಭೆಯಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಬದ್ಧ ಎಂಬುದಾಗಿ ಭರವಸೆ ನೀಡಿದ್ದೆವು. ಅದರಂತೆ ಕೆ.ವಿ.ಗೌತಮ್‌ ಅವರಿಗೆ ನಮ್ಮ ಬೆಂಬಲವಿದೆ. ನಮ್ಮ ಮುಂದಿನ ಹೋರಾಟ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ವಿರುದ್ಧ’ ಎಂದರು.

ಈ ನಡುವೆ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ತಪ್ಪಿರುವುದು ಸಹಜವಾಗಿಯೇ ಮುನಿಯಪ್ಪ ಬಣದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಹೈಕಮಾಂಡ್‌ ತಮ್ಮೊಂದಿಗೆ ಮಾತನಾಡಿದ ಬಳಿಕವೇ ಟಿಕೆಟ್‌ ಘೋಷಿಸಿದ್ದು, ಸ್ವಾಗತಿಸುವುದಾಗಿ ಮುನಿಯಪ್ಪ ಹೇಳಿದ್ದಾರೆ.

‘ಎಲ್ಲಾ ಸೇರಿ ಕಾಂಗ್ರೆಸ್‌ ಪಕ್ಷ ಗೆಲ್ಲಿಸುವುದು ನಮ್ಮ ಗುರಿ. ಅದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪ್ರಚಾರದಲ್ಲಿ ಭಾಗವಹಿಸುತ್ತೇನೆ. ನಾನು ಏಳು ಸಲ ಗೆದ್ದಿದ್ದೇನೆ, 10 ವರ್ಷ ಕೇಂದ್ರ ಸಚಿವನಾಗಿದ್ದೆ. ಕಾಂಗ್ರೆಸ್‌ ನನಗೆ ಎಲ್ಲವನ್ನೂ ನೀಡಿದೆ. ಈ ಬಾರಿ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಕೊಡಲು ತೀರ್ಮಾನ ಆಗಿತ್ತು. ಆದರೆ, ನಮ್ಮಲ್ಲಿ ಒಗ್ಗಟ್ಟು ಇರಲಿಲ್ಲ’ ಎಂದು ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪರ–ವಿರೋಧದ ನಡುವೆ ಟಿಕೆಟ್‌ ಘೋಷಣೆ ಆಗಿ ಅಭ್ಯರ್ಥಿ ಬಿಕ್ಕಟ್ಟಿಗೆ ತೆರೆ ಬಿದ್ದಿದ್ದರೂ ಬಣ ರಾಜಕೀಯಕ್ಕೆ ಸದ್ಯದ ಮಟ್ಟಿಗೆ ಬ್ರೇಕ್‌ ಬೀಳುವ ಲಕ್ಷಣ ಇಲ್ಲ. ಬಣ ರಾಜಕೀಯಕ್ಕೆ ಇನ್ನುಮುಂದೆ ಆಸ್ಪದ ನೀಡಬಾರದೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ಆದರೆ, ಟಿಕೆಟ್‌ ತಪ್ಪಿಸಿದ್ದು ಹಾಗೂ ತಮ್ಮ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿರುವ ವಿಚಾರ ಮುನಿಯಪ್ಪ ಹಾಗೂ ಅವರ ಬೆಂಬಲಿಗರಲ್ಲಿ ಬೇಸರ ಮೂಡಿಸಿದೆ.

ಇನ್ನು ಈ ಬಣಗಳ ಜಗಳದ ನಡುವೆ ಅಭ್ಯರ್ಥಿಯಾಗಿರುವ ಗೌತಮ್‌ ಮುಂದೆ ದೊಡ್ಡ ಸವಾಲು ಇದೆ. ಹೊಸಬರಾಗಿರುವ ಅವರಿಗೆ ಮೊದಲೇ ಕ್ಷೇತ್ರದ ಪರಿಚಯ ಇರಲ್ಲ; ಇನ್ನು ಮತದಾನಕ್ಕೆ ಕೇವಲ 25 ದಿನಗಳು ಬಾಕಿ ಇವೆ. ಅಷ್ಟರಲ್ಲಲಿ ಉಭಯ ಬಣಗಳನ್ನು ವಿಶ್ವಾಸಕ್ಕೆ ಪಡೆದು ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರ ಸುತ್ತಾಡಬೇಕಿದೆ.

ಎನ್‌ಎಸ್‌ಯುಐನಿಂದ ಲೋಕಸಭೆ ಟಿಕೆಟ್‌ವರೆಗೆ...
ಬೆಂಗಳೂರಿನ ಕೆ.ವಿ.ಗೌತಮ್‌ 1994ರಲ್ಲಿ ರಾಜ್ಯ ಎನ್‌ಎಸ್‌ಯುಐ ಕಾರ್ಯದರ್ಶಿಯಾಗಿ 2000ರಲ್ಲಿ ಬೆಂಗಳೂರು ಜಿಲ್ಲಾ ಯೂತ್‌ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಹಾಗೂ ನಂತರ ಕರ್ನಾಟಕ ಪ್ರದೇಶ ಯೂತ್‌ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಬೆಂಗಳೂರು ಕೇಂದ್ರ ಜಿಲ್ಲೆ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ . ಪರಿಶಿಷ್ಟ ಜಾತಿ (ಆದಿಜಾಂಬವ) ಎಡಗೈ ಸಮುದಾಯದವರಾಗಿದ್ದು ಈಗ ಅವರಿಗೆ ಕೋಲಾರ ಲೋಕಸಭೆ ಕ್ಷೇತ್ರದ ಟಿಕೆಟ್‌ ಲಭಿಸುವ ಮೂಲಕ ಅದೃಷ್ಟ ಒಲಿದಿದೆ‌. ಇವರ ಸಹೋದರಿಯರಿಬ್ಬರು ಕೋಲಾರ ಜಿಲ್ಲೆಯಲ್ಲಿ ಇದ್ದಾರೆ. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿ ಸಭೆ ನಡೆದಾಗ ಕಾಂಗ್ರೆಸ್‌ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದರು.
‘ಟಿಕೆಟ್‌ ವಿಚಾರ ಚರ್ಚಿಸಿದ್ದು ಡಿಕೆಶಿ‘ ‘ಟಿಕೆಟ್‌ ಸಿಗಬಹುದೆಂದು ನನಗೆ ನಿರೀಕ್ಷೆ ಇರಲಿಲ್ಲ. ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ನಡೆದ ವಿದ್ಯಮಾನದ ಬಳಿಕ ಡಿ.ಕೆ.ಶಿವಕಮಾರ್‌ ಮೊದಲು ನನಗೆ ಕರೆ ಮಾಡಿ ಚರ್ಚಿಸಿದರು. ಎರಡೂ ಬಣದಿಂದ ದೂರವಿರುವ ನನಗೆ ಟಿಕೆಟ್‌ ಕೊಟ್ಟರೆ ಒಳ್ಳೆಯದಾಗುತ್ತದೆ ಎಂದರು. ಅದಕ್ಕೆ ನಾನೂ ಒಪ್ಪಿದೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  ‘ಇದೊಂದು ನನಗೆ ಒಲಿದ ಅದೃಷ್ಟ. ಒಂದೊಳ್ಳೆ ಅವಕಾಶ. ನನಗೆ ಕೋಲಾರದ ಎಲ್ಲಾ ನಾಯಕರ ಪರಿಚಯವಿದೆ. ನಾನು ಯಾವ ಬಣಕ್ಕೂ ಸೇರಿಲ್ಲ. ರಮೇಶ್‌ ಕುಮಾರ್‌ ಹಾಗೂ ಕೆ.ಎಚ್‌.ಮುನಿಯಪ್ಪ ಇಬ್ಬರೂ ನನ್ನ ತಂದೆಗೆ ಪರಿಚಯ’ ಎಂದರು. ‘ಪಕ್ಷದಲ್ಲಿ 28 ವರ್ಷಗಳ ಅನುಭವ ಇರುವ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರಕ್ಕೆ ಇಳಿಯುತ್ತೇನೆ. ಕೋಲಾರ ಕಾಂಗ್ರೆಸ್‌ ಭದ್ರಕೋಟೆ ಆಗಿದ್ದು ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.
ಸ್ಥಳೀಯ ವರ್ಸಸ್‌ ಹೊರಗಿನವರು!
ಬೆಂಗಳೂರಿನ ಕೆ.ವಿ.ಗೌತಮ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಖಚಿತವಾಗುತ್ತಿದ್ದಂತೆ ಸ್ಥಳೀಯ ವರ್ಸಸ್‌ ಹೊರಗಿನವರು ಎಂಬ ಚರ್ಚೆಯೂ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಹಲವರು ಪೋಸ್ಟ್‌ ಕೂಡ ಹಾಕಿಕೊಂಡು ಪರ–ವಿರೋಧದಲ್ಲಿ ತೊಡಗಿದ್ದಾರೆ. ಇದನ್ನು ದೊಡ್ಡಮಟ್ಟದಲ್ಲಿ ‌ಪ್ರಚುರಪಡಿಸಿಕೊಳ್ಳಲು ಜೆಡಿಎಸ್‌ ಮುಖಂಡರು ಮುಂದಾಗಿದ್ದಾರೆ. ‌ ‘ಸ್ಥಳೀಯ ವರ್ಸಸ್‌ ಹೊರಗಿನವರು ಅಲ್ಲ; ಸ್ವಾಭಿಮಾನಿ ವರ್ಸಸ್‌ ಹೊರಗಿನವರು ಎಂಬುದು ನಮ್ಮ ಪ್ರಚಾರದ ವೇದ ವಾಕ್ಯವಾಗಲಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಇಂಚರ ಗೋವಿಂದರಾಜು ತಿಳಿಸಿದರು.
‘ಜೆಡಿಎಸ್‌–ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ’ ಹೊರಗಿನವರು ಸ್ಥಳೀಯರು ಎಂಬ ಚರ್ಚೆಗೆ ಅರ್ಥ ಇಲ್ಲ. ಜೆಡಿಎಸ್‌–ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ತೋರಿಸುತ್ತಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಆಗಿರಲಿಲ್ಲವೇ? ಈ ಬಾರಿ ಮಂಡ್ಯದಲ್ಲಿ ಕಣಕ್ಕಿಳಿಯುತ್ತಿಲ್ಲವೇ? ಹುಬ್ಬಳ್ಳಿ–ಧಾರವಾಡದ ಜಗದೀಶ ಶೆಟ್ಟರ್‌ ಬೆಳಗಾವಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮುಖಂಡರು ವಿವಿಧೆಡೆ ಸ್ಪರ್ಧಿಸುವುದು ಎಲ್ಲಾ ಪಕ್ಷಗಳಲ್ಲಿ ಇದ್ದದ್ದೇ
–ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ

‘ಗೋಬ್ಯಾಕ್‌ ಗೌತಮ್‌’ ಅಭಿಯಾನ

ಬೆಂಗಳೂರಿನ ಕೆ.ವಿ.ಗೌತಮ್‌ ಕೋಲಾರ ಕ್ಷೇತ್ರಕ್ಕೆ ಕಾಲಿಡುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ‘ಗೋಬ್ಯಾಕ್‌ ಗೌತಮ್‌’ ಅಭಿಯಾನ ಆರಂಭವಾಗಿದೆ. ಜಿಲ್ಲೆಗೆ ಸಂಬಂಧವಿಲ್ಲದವರಿಗೆ ಟಿಕೆಟ್‌ ನೀಡಿರುವುದನ್ನು ಕೋಲಾರ ನಾಗರಿಕರ ವೇದಿಕೆ ಖಂಡಿಸಿದೆ.

‘ಸ್ಥಳೀಯವಾಗಿ ವಾಸವಿದ್ದು ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಜೆಡಿಎಸ್‌ನ ಮಲ್ಲೇಶ್ ಬಾಬು ಬೇಕಾ? ಬೆಂಗಳೂರಿನಲ್ಲಿ ವಾಸವಿದ್ದು, ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ, ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದ ಕಾಂಗ್ರೆಸ್‌ನ ಗೌತಮ್‌ ಬೇಕಾ’ ಎಂಬ ಅಭಿಯಾನ ಶುರುವಿಟ್ಟುಕೊಂಡಿದ್ದಾರೆ. ಸ್ಥಳೀಯವಾಗಿ ನಾಯಕರನ್ನು ಬೆಳೆಸುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆಯೋ ಅಥವಾ ಬಣಗಳ ಜಗಳ ಸರಿದೂಗಿಸಿಕೊಂಡು ಹೋಗುವ ಅಭ್ಯರ್ಥಿ ಸಿಗಲಿಲ್ಲವೋ ಎಂಬ ಪ್ರಶ್ನೆಯೂ ಕಾರ್ಯಕರ್ತರಲ್ಲಿ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT