ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ: ಹಾಲಿ, ಮಾಜಿಗಳಿಗೆ ಮತ ಕೊಡಿಸುವ ಸವಾಲು

ಕೊಪ್ಪಳ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕೈ ಪಡೆಯದ್ದೇ ಹೆಚ್ಚಿನ ಬಲ
Published 22 ಏಪ್ರಿಲ್ 2024, 6:38 IST
Last Updated 22 ಏಪ್ರಿಲ್ 2024, 6:38 IST
ಅಕ್ಷರ ಗಾತ್ರ

ಕೊಪ್ಪಳ: ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಮುನ್ನಡೆ ಸಿಗುತ್ತದೆ, ಎಲ್ಲಿ ಹಿನ್ನಡೆಯಾಗುತ್ತದೆ ಎನ್ನುವ ಲೆಕ್ಕಾಚಾರ ಜೋರಾಗಿದೆ.

ಕೊಪ್ಪಳ ವ್ಯಾಪ್ತಿಯಲ್ಲಿ ಕೊಪ್ಪಳ, ಯಲಬುರ್ಗಾ, ಗಂಗಾವತಿ, ಕುಷ್ಟಗಿ, ಕನಕಗಿರಿ, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಪ್ರಸ್ತುತ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು, ಕುಷ್ಟಗಿ ಮತ್ತು ಗಂಗಾವತಿಯಲ್ಲಿ ಬಿಜೆಪಿ ಶಾಸಕರು ಇದ್ದಾರೆ.

ಇದಕ್ಕೂ ಹಿಂದಿನ ಅಂದರೆ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿ ಗೆದ್ದರೆ, ಜೆಡಿಎಸ್‌ ಒಂದು ಸ್ಥಾನ ಪಡೆದುಕೊಂಡಿತ್ತು. ಬಿಜೆಪಿಯ ಬಸವರಾಜ ದಢೇಸೂಗೂರು (ಕನಕಗಿರಿ), ಪರಣ್ಣ ಮುನವಳ್ಳಿ (ಗಂಗಾವತಿ), ಹಾಲಪ್ಪ ಆಚಾರ್‌ (ಯಲಬುರ್ಗಾ) ಮತ್ತು ಸಿರಗುಪ್ಪದಿಂದ ಎಂ.ಎಸ್‌. ಸೋಮಲಿಂಗಪ್ಪ ಗೆಲುವು ಸಾಧಿಸಿದ್ದರಿಂದ ಬಿಜೆಪಿಯ ಶಕ್ತಿ ವೃದ್ಧಿಯಾಗಿತ್ತು. ಆದರೆ 2023ರ ಚುನಾವಣೆಯಲ್ಲಿ ಕುಷ್ಟಗಿಯಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಹಲವು ದಿನಗಳ ತನಕ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕುಷ್ಟಗಿಯಲ್ಲಿ ಮಾತ್ರ ಬಿಜೆಪಿ ಬಾವುಟ ಹಾರಾಡಿತ್ತು. ಇತ್ತೀಚೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತೊರೆದು ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದರಿಂದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ಹೀಗಾಗಿ ಆಯಾ ಕ್ಷೇತ್ರದಲ್ಲಿರುವ ಶಾಸಕರು ಹಾಗೂ ಮಾಜಿ ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗೆ ಮುನ್ನಡೆ ತಂದುಕೊಡಲು ಇನ್ನಿಲ್ಲದ ಕಸರತ್ತು ನಡೆಸಬೇಕಾಗಿದೆ. ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯ ಎಲ್ಲೆಡೆಯೂ ಪ್ರಚಾರ ಮಾಡುತ್ತಿದ್ದರೂ ಸ್ಥಳೀಯ ನಾಯಕರ ಮೇಲೆಯೇ ಮತ ಕೊಡಿಸುವ ಹೆಚ್ಚಿನ ಜವಾಬ್ದಾರಿಯಿದೆ.

ಕುಷ್ಟಗಿಯಲ್ಲಿ ಬಿಜೆಪಿ ಶಾಸಕರಿದ್ದರೂ ಅವರೆದುರು ಸ್ಪರ್ಧಿಸಿ ಸೋಲು ಕಂಡಿರುವ ಕಾಂಗ್ರೆಸ್‌ ಪಕ್ಷದ ಅಮರೇಗೌಡ ಬಯ್ಯಾಪುರ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮುಸ್ಲಿಂ ಮತಗಳ ಕ್ರೋಢಿಕರಣಕ್ಕೆ ತುಂಗಭದ್ರಾ ವ್ಯಾಪ್ತಿಯ ಹೊರಗಿದ್ದರೂ ಹಸನಸಾಬ್‌ ದೋಟಿಹಾಳ್‌ ಅವರನ್ನು ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಹಿಂದಿನ ಎರಡೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸಂಗಣ್ಣ ಕರಡಿ ಅವರು ಕಾಂಗ್ರೆಸ್‌ ಅಭ್ಯರ್ಥಿಗಳು ಎದುರು ಕಡಿಮೆ ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದರು. 2014ರಲ್ಲಿ 32,414 ಮತ್ತು 2018ರಲ್ಲಿ 38,397 ಮತಗಳ ಅಂತರದಲ್ಲಷ್ಟೇ ಗೆಲುವು ಸಾಧಿಸಿದ್ದರು. ಹೀಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ಮತಗಳಿಕೆ ಪ್ರಮಾಣವೂ ಅಭ್ಯರ್ಥಿ ಗೆಲುವಿನ ಭವಿಷ್ಯ ನಿರ್ಧಾರ ಮಾಡಲಿದೆ.

ಆದರೆ ಈಗಿನ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಸಂಗಣ್ಣ ಕರಡಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಬಿಜೆಪಿ ಹೊಸ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಅವರನ್ನು ಕಣಕ್ಕಿಳಿಸಿದೆ. ಸಂಗಣ್ಣ ಅವರ ಒಂದಷ್ಟು ಜನ ಬೆಂಬಲಿಗರು ಕೂಡ ’ಕೈ’ ಹಿಡಿದಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಗೆಲುವಿನ ಅಂತರ ಹೆಚ್ಚಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಆತ್ಮವಿಶ್ವಾಸದಲ್ಲಿದ್ದಾರೆ.

ಆದರೆ, ಬಿಜೆಪಿ ತನ್ನದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದು ಬೂತ್‌ ಮಟ್ಟದಿಂದಲೇ ಪಕ್ಷದ ಕಾರ್ಯಕರ್ತರಿದ್ದು ಆರು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರು ಮಾಜಿಯಿದ್ದರೂ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗೆ ಗೆಲುವು ಎನ್ನುವ ಭರವಸೆ ಹೊಂದಿದ್ದಾರೆ. ಇನ್ನೊಂದು ಸಕಾರಾತ್ಮಕ ಅಂಶವೆಂದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಜೆಡಿಎಸ್‌ನ ಸವಾಲನ್ನೂ ಎದುರಿಸಿದ್ದವು. ಈ ಬಾರಿ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು ಕಮಲ ಪಾಳೆಯಕ್ಕೆ ವರವಾಗಬಹುದು ಎನ್ನುವ ನಿರೀಕ್ಷೆಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT