ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುಣಾವಣೆ | ಶೆಟ್ಟರ್ ಅವರ ಬೆಳಗಾವಿ ಮನೆ ವಿಳಾಸ ಕೇಳಿ: ಲಕ್ಷ್ಮಿ ಹೆಬ್ಬಾಳಕರ

Published 31 ಮಾರ್ಚ್ 2024, 12:42 IST
Last Updated 31 ಮಾರ್ಚ್ 2024, 12:42 IST
ಅಕ್ಷರ ಗಾತ್ರ

ಬೆಳಗಾವಿ: ‘ಜಗದೀಶ ಶೆಟ್ಟರ್ ಆರು ಬಾರಿ ಹುಬ್ಬಳ್ಳಿಯಲ್ಲಿ ಶಾಸಕರಾಗಿದ್ದಾರೆ‌. ಈಗ ಬೆಳಗಾವಿಗೆ ಬಂದು, ‘ಇದು ನನ್ನ ಕರ್ಮಭೂಮಿ’ ಎಂದು ಹೇಳುತ್ತಿದ್ದಾರೆ. ಮೊದಲು ಬೆಳಗಾವಿಯಲ್ಲಿನ ಅವರ ಮನೆ ವಿಳಾಸ ಕೇಳಿ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನರೇಂದ್ರ ಮೋದಿ ಹೆಸರಿನಲ್ಲಿ ಗೆದ್ದುಬಂದ ಇಲ್ಲಿನ ಸಂಸದರು ಕಳೆದ 10 ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಮೂಕ, ಕಿವುಡ ಮತ್ತು ಕುರುಡರಾಗಿರುವ ಇಂಥ ಸಂಸದರು ನಮಗೆ ಬೇಕೇ?’ ಎಂದು ಪ್ರಶ್ನಿಸಿದರು.

‘ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಹಿಂದಕ್ಕೆ ತಳ್ಳಿ, ಲಕ್ಷ್ಮಿ ಹೆಬ್ಬಾಳಕರ ಸಚಿವೆಯಾಗಿದ್ದಾರೆ’ ಎಂಬ ಸಂಸದೆ ಮಂಗಲಾ ಅಂಗಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಬ್ಬಾಳಕರ, ‘ನಾನು ಮಹಿಳಾ ಕೋಟಾದಡಿ ಸಚಿವೆಯಾಗಿದ್ದೇನೆಯೇ ಹೊರತು, ಯಾರಿಂದಲೂ ಸಚಿವ ಸ್ಥಾನ ಕಸಿದುಕೊಂಡಿಲ್ಲ. ರೂಪಾ ಶಶಿಧರ್ ಮತ್ತು ನಾನು ಎರಡನೇ ಬಾರಿ ಶಾಸಕಿಯರಾಗಿದ್ದೇವೆ. ರೂಪಾ ಅವರ ತಂದೆ ಮುನಿಯಪ್ಪ ಸಚಿವರಾದ ಕಾರಣ, ನನಗೆ ಮಂತ್ರಿಯಾಗುವ ಯೋಗ ಬಂತು. ಆದರೆ, ಮಂಗಲಾ ಅಂಗಡಿ ಅವರಿಗೆ ಇಂಥ ಸೂಕ್ಷ್ಮವಾದ ವಿಚಾರಗಳು ತಿಳಿದಿಲ್ಲ. ವಯಸ್ಸಿನಲ್ಲಿ ಹಿರಿಯರಾದ ಅವರಿಗೆ ರಾಜಕೀಯ ಅನುಭವ ಕಡಿಮೆ. ಯಾರೋ ಬರೆದುಕೊಟ್ಟಿದ್ದನ್ನು ಹೇಳುತ್ತಾರೆ’ ಎಂದು ತಿರುಗೇಟು ನೀಡಿದರು.

‘ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರು, ಹಾಲಿ ಸಂಸದರಾಗಿದ್ದರೂ ಸುಮಲತಾ ಮತ್ತು ಮಂಗಲಾ ಅಂಗಡಿ ಅವರಿಗೆ ಏಕೆ ಟಿಕೆಟ್ ಕೊಡಲಿಲ್ಲ’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ವಿರೋಧಿಸಿದರು. ಈಗ ಚುನಾವಣೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀಗಳನ್ನು ಭೇಟಿಯಾಗುತ್ತಾರೆ. ಆದರೆ, ಮೀಸಲಾತಿಗಾಗಿ ನಿಜವಾಗಿ ಹೋರಾಡಿದವರು ಯಾರು ಎಂಬುದು ಸಮಾಜಕ್ಕೆ ಗೊತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT