ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಂದಾಗ ಮೋದಿಗೆ ಕರ್ನಾಟಕದ ನೆನಪು: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ
Published 24 ಏಪ್ರಿಲ್ 2024, 18:04 IST
Last Updated 24 ಏಪ್ರಿಲ್ 2024, 18:04 IST
ಅಕ್ಷರ ಗಾತ್ರ

ಬೀದರ್‌: ‘ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಬಂದಾಗಲಷ್ಟೇ ಕರ್ನಾಟಕದ ನೆನಪು ಆಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಗಣೇಶ ಮೈದಾನದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ–2 ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 2019ರಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿತ್ತು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಆಗಲೂ ರಾಜ್ಯಕ್ಕೆ ಬರಲಿಲ್ಲ. ಈಗ ರಾಜ್ಯದಲ್ಲಿ ಭೀಕರ ಬರಗಾಲವಿದೆ. ರಾಜ್ಯದ ಜನರ ಸುಖ, ದುಃಖ ಕೇಳಲು ಬರಲಿಲ್ಲ. ಆದರೆ, ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದಾರೆ. ಇವರಿಗೆ ಯಾವ ಮುಖವಿದೆ ಎಂದು ಪ್ರಶ್ನಿಸಿದರು.

ನಾವು ಚುನಾವಣೆಗೂ ಮುನ್ನ ಹೇಳಿದಂತೆ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಅದರ ಪ್ರಯೋಜನವಾಗುತ್ತಿದೆ. ನಮಗೆ ಮತ ಕೇಳಲು ನೈತಿಕ ಹಕ್ಕಿದೆ. ಆದರೆ, ಮೋದಿಯವರಿಗೆ ಇದೆಯಾ? ಹಾಗಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಈ ಸಲ ಕಿತ್ತೊಗೆಯಬೇಕು. ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಕೆಲಸಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸ್ವತಂತ್ರ ಭಾರತದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು. ಬಿಜೆಪಿ ಸುಳ್ಳಿನ ಕಾರ್ಖಾನೆ. ಸುಳ್ಳು ಬಿಜೆಪಿಯ ಮನೆದೇವರು. ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೊಳಿಸಿದಂತೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ 25 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ನಾವು ನುಡಿದಂತೆ ನಡೆದುಕೊಳ್ಳುತ್ತೇವೆ. ಮೋದಿಯವರು ಸುಳ್ಳು ಹೇಳುತ್ತಾರೆ ಹೊರತು ಯಾರಿಗೂ ಸಹಾಯ ಮಾಡಲ್ಲ ಎಂದರು.

ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಎರಡೂ ಅಪಾಯದಲ್ಲಿವೆ. ಸಂವಿಧಾನ ಉಳಿದರೆ ಎಲ್ಲರೂ ಉಳಿಯುತ್ತಾರೆ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ. ಬಿಜೆಪಿಯವರು ಹೇಗಾದರೂ ಮಾಡಿ ಸಂವಿಧಾನ ಬದಲಿಸಲು ಕುತಂತ್ರ ನಡೆಸಿದ್ದಾರೆ. ಸರ್ವಾಧಿಕಾರ ತರುವ ಪ್ರಯತ್ನದಲ್ಲಿದ್ದಾರೆ. ಆದರೆ, ಸಂವಿಧಾನ ಮುಟ್ಟಿದರೆ ದೇಶದಲ್ಲಿ ರಕ್ತಕ್ರಾಂತಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಚಿವ ಈಶ್ವರ ಬಿ. ಖಂಡ್ರೆ, ವಿಧಾನ ಪರಿಷತ್‌ ಸದಸ್ಯರಾದ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಧನರಾಜ ತಾಳಂಪಳ್ಳಿ, ರಾಜಶೇಖರ ಪಾಟೀಲ ಹುಮನಾಬಾದ್‌, ವಿಜಯ್‌ ಸಿಂಗ್‌, ಅಶೋಕ ಖೇಣಿ, ಭೀಮಸೇನರಾವ ಶಿಂಧೆ, ಗೀತಾ ಪಂಡಿತರಾವ್ ಚಿದ್ರಿ, ಮೀನಾಕ್ಷಿ ಸಂಗ್ರಾಮ, ಪರಿಹಾರ ಮಲ್ಲಿಕಾರ್ಜುನ, ಆನಂದ ದೇವಪ್ಪ ಮೊದಲಾದವರು ಹಾಜರಿದ್ದರು.

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು
–ಪ್ರಜಾವಾಣಿ ಚಿತ್ರಗಳು
ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು –ಪ್ರಜಾವಾಣಿ ಚಿತ್ರಗಳು

‘ಸಾಗರ್‌ ಖಂಡ್ರೆ ಗೆಲುತ್ತಾರೆ; ಇಂಟೆಲಿಟೆನ್ಸ್‌ ರಿಪೋರ್ಟ್‌’

‘ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರು ಗೆಲ್ಲುತ್ತಾರೆ ಎಂದು ಇಂಟೆಲಿಜೆನ್ಸ್‌ ರಿಪೋರ್ಟ್‌ ಬಂದಿದೆ’ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ಹೇಳಿದರು.

ಸಾಗರ್‌ ಖಂಡ್ರೆ ಹಿಂದೆ ಅವರ ತಂದೆ ಸಚಿವ ಈಶ್ವರ ಬಿ. ಖಂಡ್ರೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಎಲ್ಲ ಮುಖಂಡರಿದ್ಧಾರೆ. ಸಾಗರ್‌ ಖಂಡ್ರೆಯವರು ಕಾನೂನು ಪದವೀಧರರು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳ ಅಡಿ ಅನುಭವ ಪಡೆದಿದ್ದಾರೆ. ಅವರಿಗೆ ವಕೀಲ ಸಾಬ್‌ ಎಂದು ಕರೆಯಬೇಕು. ಕಪಿಲ್‌ ಸಿಬಲ್‌ ಜಾಗವನ್ನು ಸಾಗರ್‌ ಖಂಡ್ರೆ ತುಂಬುತ್ತಾರೆ. ಇದರಿಂದ ಜಿಲ್ಲೆಯ ಜನರಿಗೂ ಅನುಕೂಲವಾಗಲಿದೆ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ ಅವರು ಹತ್ತು ವರ್ಷಗಳಲ್ಲಿ ‘ಚೇರ್‌’ ಹಾಕಿಸಿರುವುದು ಬಿಟ್ಟರೆ ಬೇರೇನೂ ಕೆಲಸ ಮಾಡಿಲ್ಲ. ಮಂದಿರ ಮಸೀದಿಗಳನ್ನು ನಾವು ಅಭಿವೃದ್ಧಿಪಡಿಸಿದರೆ ಖೂಬಾ ಅವರು ಅವುಗಳ ಹೊರತೆ ಚೇರ್‌ ಹಾಕಿಸಿದ್ದಾರೆ. ಪಂಚಾಯಿತಿ ಸದಸ್ಯನಲ್ಲದವನು ಆ ಕೆಲಸ ಮಾಡಬಹುದು ಎಂದು ವ್ಯಂಗ್ಯವಾಡಿದರು.

‘ಖೂಬಾ ಅನ್ಯಾಯದ ಬಗ್ಗೆ ಮಾತನಾಡಿಲ್ಲ’

ಭಗವಂತ ಖೂಬಾ ಅವರು ಒಂದು ಸಲವೂ ಕೇಂದ್ರದಿಂದ ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಅವರನ್ನು ಗೆಲ್ಲಿಸ್ತೀರಾ ಅಥವಾ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸ್ತೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕರ್ತರನ್ನು ಪ್ರಶ್ನಿಸಿದಾಗ ಸಾಗರ್‌ ಖಂಡ್ರೆ ಎಂದು ಉದ್ಗಾರ ತೆಗೆದರು.

ರಾಜ್ಯದಿಂದ ಸಂಸದ ಡಿ.ಕೆ. ಸುರೇಶ ಹೊರತುಪಡಿಸಿ ಬಿಜೆಪಿಯ ಯಾವ ಸಂಸದರೂ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಹೋದ ಚುನಾವಣೆಯಲ್ಲಿ ಬಿಜೆಪಿಯಿಂದ 25 ಸಂಸದರು ಗೆದ್ದಿದ್ದರು. ಖೂಬಾ ಅವರು ಹತ್ತು ವರ್ಷ ಸಂಸದರಾಗಿ ಮಂತ್ರಿಯಾಗಿ ಏನೂ ಮಾಡಿಲ್ಲ. ಈ ಸಲ ಅವರನ್ನು ಮನೆಗೆ ಕಳಿಸಿ ಎಂದು ಹೇಳಿದರು.

‘2028ರ ವರೆಗೆ ಗ್ಯಾರಂಟಿ ಮುಂದುವರಿಕೆ’

‘2028ರ ಮೇ ತಿಂಗಳ ವರೆಗೆ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ. ಯಾರು ಕೂಡ ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಎಂಪಿ ಚುನಾವಣೆ ಆದ ನಂತರ ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಯಾವ ಕಾರಣಕ್ಕೂ 2028ರ ವರೆಗೆ ನಿಲ್ಲಿಸುವುದಿಲ್ಲ. 2028ರಲ್ಲಿ ನಡೆಯುವ ಚುನಾವಣೆಯಲ್ಲೂ ಗೆದ್ದ ನಂತರ ಮತ್ತೆ ಮುಂದುವರೆಸುತ್ತೇವೆ ಎಂದು ತಿಳಿಸಿದರು.

2024–25ನೇ ಸಾಲಿನ ಬಜೆಟ್‌ನಲ್ಲಿ ₹52,900 ಕೋಟಿ ಗ್ಯಾರಂಟಿಗಳಿಗೆ ₹68,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ತೆಗೆದಿರಿಸಲಾಗಿದೆ ಎಂದರು. ನಾವು ನುಡಿದಂತೆ ನಡೆದಿದ್ದೇವೆ. ಬಸವಾದಿ ಶರಣರ ಆದರ್ಶಗಳಲ್ಲಿ ನಂಬಿಕೆ ಇಟ್ಟವರು ನಾವು. ಅದಕ್ಕಾಗಿಯೇ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿ ಎಲ್ಲ ಸರ್ಕಾರಿ ಕಚೇರಿ ಅನುದಾನಿತ ಸಂಸ್ಥೆಗಳಲ್ಲಿ ಅವರ ಫೋಟೋ ಹಾಕಿಸಲು ಆದೇಶಿಸಲಾಗಿದೆ. ಅನುಭವ ಮಂಟಪದ ಪುನರುಜ್ಜೀವನಕ್ಕೆ ಕ್ರಮ ಜರುಗಿಸಲಾಗಿದೆ. ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿ ಇದ್ದಾಗ ಈ ಕೆಲಸ ಮಾಡಿದ್ದಾರಾ? ಎಂದು ಜನರನ್ನು ಕೇಳಿದರು.

ಲಿಂಗಾಯತ ಮುಸ್ಲಿಂ ಮುಖಂಡರು ಕಾಂಗ್ರೆಸ್‌ ಸೇರ್ಪಡೆ

ಲಿಂಗಾಯತ ಹಾಗೂ ಮುಸ್ಲಿಂ ಸಮಾಜದ ಹಲವು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು. ಲಿಂಗಾಯತ ಸಮಾಜದ ಮುಖಂಡ ಬಸವರಾಜ ಧನ್ನೂರ ಮುಸ್ಲಿಂ ಸಮಾಜದ ಅಶ್ರಫ್‌ ಅಲಿ ಖಾನ್‌ ಗಿಲಾನಿ ನಾಸಿರ್‌ ಖಾದ್ರಿ ನಬಿ ಖುರೇಷಿ ಮತ್ತಿತರರು ಕೈ ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT