ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJP ಜೊತೆ KRPP ವಿಲೀನ, ರೆಡ್ಡಿ ನಿಲುವಿನಲ್ಲಿ ಬದಲಾವಣೆ ತಂದ ಅಸ್ತ್ರ ಯಾವುದು?

Published 25 ಮಾರ್ಚ್ 2024, 6:28 IST
Last Updated 25 ಮಾರ್ಚ್ 2024, 6:28 IST
ಅಕ್ಷರ ಗಾತ್ರ

ಕೊಪ್ಪಳ: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ‘ಫುಟ್‌ಬಾಲ್‌’ ಚಿಹ್ನೆಯೊಂದಿಗೆ ಸ್ಪರ್ಧಿಸಿ ಗಂಗಾವತಿ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಜೊತೆ ವಿಲೀನವಾಗಲು ಮುಂದಾಗಿದೆ. ಇದರಿಂದಾಗಿ ಪಕ್ಷ ಅಸ್ತಿತ್ವಕ್ಕೆ ಬಂದು 15 ತಿಂಗಳಲ್ಲಿಯೇ ‘ಫುಟ್‌ಬಾಲ್‌’ ಪಂದ್ಯ ಮುಗಿದಂತಾಗಿದೆ.

ಪಕ್ಷದ ಸಂಸ್ಥಾಪಕ ಮತ್ತು ಏಕೈಕ ಶಾಸಕ ಜನಾರ್ದನ ರೆಡ್ಡಿ ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು. ಅದಾದ ಕೆಲ ದಿನಗಳಲ್ಲಿಯೇ ಅವರು ಮಾತೃಪಕ್ಷ ಸೇರುವ ಇರಾದೆಯನ್ನು ಬೆಂಗಳೂರಿನಲ್ಲಿ ವ್ಯಕ್ತಪಡಿಸಿದ್ದಾರೆ. ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರುವರು. ಏಕಾಏಕಿ ಅವರು ಈ ನಿರ್ಧಾರ ಕೈಗೊಳ್ಳಲು ಅಮಿತ್‌ ಶಾ ಪ್ರಯೋಗಿಸಿದ ‘ಅಸ್ತ್ರ’ ಯಾವುದು ಎನ್ನುವುದು ಚರ್ಚೆಗೆ ಕಾರಣವಾಗಿದೆ.

ಗಣಿ ನಾಡು ಬಳ್ಳಾರಿಯನ್ನು ಕೇಂದ್ರವಾಗಿಟ್ಟುಕೊಂಡು ರಾಜಕೀಯ ಆರಂಭಿಸಿದ ಜನಾರ್ದನ ರೆಡ್ಡಿ ವಿಧಾನಪರಿಷತ್‌ ಸದಸ್ಯರಾಗಿ ಸಚಿವರೂ ಆದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದರು. 2008ರ ಚುನಾವಣೆಯಲ್ಲಿ ಬಿಜೆಪಿ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೂ ಬಹುಮತಕ್ಕೆ ಮೂರು ಸ್ಥಾನಗಳ ಅಗತ್ಯವಿತ್ತು. ಆಗಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಆರು ಜನರನ್ನು ‘ಆಪರೇಷನ್‌’ ಮಾಡಿ ಸರ್ಕಾರ ರಚನೆಗೆ ರೆಡ್ಡಿ ಹಾಗೂ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಜನಾರ್ದನ ರೆಡ್ಡಿ ಹೆಸರು ಭಾರಿ ಚಾಲ್ತಿಯಲ್ಲಿತ್ತು. ಬಳಿಕ ಆದ ರಾಜಕೀಯ ಸ್ಥಿತ್ಯಂತರ ಮತ್ತು ಅಕ್ರಮ ಗಣಿಗಾಗಿಕೆ ನಡೆಸಿದ ಆರೋಪದ ಮೇಲೆ ಜೈಲುವಾಸ, ಹಲವು ಪ್ರಕರಣಗಳ ದಾಖಲು ಹೀಗೆ ಅನೇಕ ಘಟನೆಗಳ ಬಳಿಕ ರಾಜಕೀಯದಿಂದ ದೂರ ಉಳಿಯಬೇಕಾಯಿತು. 2022ರ ಡಿಸೆಂಬರ್‌ನಲ್ಲಿ ಗಂಗಾವತಿ ಮೂಲಕ ರಾಜಕೀಯ ಬದುಕಿನ ಎರಡನೇ ಇನಿಂಗ್ಸ್‌ ಆರಂಭಿಸಿದರು.

ಗಂಗಾವತಿ ಕ್ಷೇತ್ರದಲ್ಲಿ ತಾವು ಸ್ಪರ್ಧೆ ಮಾಡಿ ಉಳಿದ 40 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಅದರಲ್ಲಿ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಸ್ಪರ್ಧೆ ಮಾಡಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಪಕ್ಷ 48,577 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿತ್ತು. ಹುನಗುಂದದಲ್ಲಿ 33,790, ನಾಗಠಾಣದಲ್ಲಿ 10,770, ಲಿಂಗಸೂರಿನಲ್ಲಿ 13,764 ಮತ್ತು ಸಂಡೂರಿನಲ್ಲಿ 31,375 ಮತಗಳನ್ನು ಪಡೆದಿದ್ದರೂ ಅಭ್ಯರ್ಥಿಗಳು ಗೆಲುವು ಸಾಧಿಸಿರಲಿಲ್ಲ. ತಮ್ಮ ರಾಜಕೀಯ ಕಡುವೈರಿ ಎಂದು ಹೇಳುತ್ತಿದ್ದ ಬಿಜೆಪಿಯ ಕೆಲ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹೀಗಾಗಿ ಸಾಕಷ್ಟು ಯುವಜನತೆ, ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿದ್ದ ಕಾರ್ಯಕರ್ತರು ಅವಕಾಶ ಹುಡುಕಿಕೊಂಡು ಕೆಆರ್‌ಪಿಪಿ ಸೇರಿದರು. ರಾಷ್ಟ್ರೀಯ ಪಕ್ಷಗಳಲ್ಲಿ ಸಣ್ಣ ಸ್ಥಾನಮಾನವೂ ಲಭಿಸಿದ ಪರಿಸ್ಥಿತಿಯಲ್ಲಿದ್ದವರಿಗೆ ಈ ಪಕ್ಷದಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಒಲಿದವು. ರೆಡ್ಡಿ ಜೊತೆಗೆ ತಾರಾ ವರ್ಚಸ್ಸು ಲಭಿಸಿತು. ಈಗ ಅವರು ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿಗೆ ಹೋಗಬೇಕಾಗಿದೆ.

ಲೋಕಸಭಾ ಚುನಾವಣೆ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ 2028ರ ವೇಳೆಗೆ ಪಕ್ಷವನ್ನು ಬಲಗೊಳಿಸುವುದಾಗಿ ರೆಡ್ಡಿ ಹಾಗೂ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದರು. ಆದರೆ ಸೂಕ್ಷ್ಮ ರಾಜಕೀಯ ಸ್ಥಿತಿಯಲ್ಲಿ ಎಲ್ಲದಕ್ಕೂ ರೆಡ್ಡಿ ಏಕಾಂಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಹೀಗೆ ಬೇರೆ ಪಕ್ಷಗಳ ಆಡಳಿತದ ಸಂದರ್ಭದಲ್ಲಿ ಶಾಸಕರಾದ ರೆಡ್ಡಿ ಯಾವ ಕಡೆ ವಾಲಿದರೆ ಹೆಚ್ಚು ಲಾಭ ಎನ್ನುವ ಲೆಕ್ಕಾಚಾರದ ಮೊರೆ ಹೋದರು. ಹೀಗಾಗಿ ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ‘ನಾನೊಬ್ಬ ಐಪಿಎಲ್‌ ಆಟಗಾರ ನನ್ನ ಕ್ಷೇತ್ರದ ಅಭಿವೃದ್ಧಿಗೆ ಯಾರು ಹೆಚ್ಚು ಅನುದಾನ ಕೊಡುತ್ತಾರೆ. ನನಗೆ ನೆರವಾಗುತ್ತಾರೆ ಅವರ ಪರ ಬ್ಯಾಟ್‌ ಮಾಡುತ್ತೇನೆ’ ಎಂದಿದ್ದರು. ಅದರಂತೆ ರಾಜಕೀಯ ಸೂಕ್ಷ್ಮತೆ ಲೆಕ್ಕ ಹಾಕಿ ಅಳೆದು ತೂಗಿಯೇ ಬಿಜೆಪಿ ಪರ ಬ್ಯಾಟ್ ಬೀಸಿದಂತಿದೆ.

ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕೊಪ್ಪಳದ ಮತ ಎಣಿಕೆ ಕೇಂದ್ರದ ಎದುರು ಸೇರಿದ್ದ ಕೆಆರ್‌ಪಿಪಿ ಕಾರ್ಯಕರ್ತರು 
ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕೊಪ್ಪಳದ ಮತ ಎಣಿಕೆ ಕೇಂದ್ರದ ಎದುರು ಸೇರಿದ್ದ ಕೆಆರ್‌ಪಿಪಿ ಕಾರ್ಯಕರ್ತರು 
ಕೆಆರ್‌ಪಿಪಿಯಲ್ಲಿ ರಾಜ್ಯಾಧ್ಯಕ್ಷ ಉಪಾಧ್ಯಕ್ಷರಾಗಿದ್ದವರು ಈಗ ಬಿಜೆಪಿಗೆ ಸಾಮಾನ್ಯ ಕಾರ್ಯಕರ್ತರಾಗಿ ಹೋಗಬೇಕಾಗಿದೆ. ಹೀಗಾಗಿ ಅವರ ತ್ಯಾಗದ ಮುಂದೆ ನನ್ನದೇನೂ ಅಲ್ಲ.
ಸಂಗಮೇಶ ಬಾದವಾಡಗಿ ಕೆಆರ್‌ಪಿಪಿ ಜಿಲ್ಲಾಧ್ಯಕ್ಷ
ಸಂಸದ ಸಂಗಣ್ಣ ಜೊತೆ ಇಂದು ವರಿಷ್ಠರ ಸಭೆ
ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ತಪ್ಪಿರುವ ಕಾರಣ ಅಸಮಾಧಾನಗೊಂಡಿರುವ ಸಂಸದ ಸಂಗಣ್ಣ ಕರಡಿ ಅವರ ಜೊತೆ ಸೋಮವಾರ ವರಿಷ್ಠರ ಸಭೆ ನಿಗದಿಯಾಗಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನ 3ಗಂಟೆಗೆ ಸಭೆ ನಡೆಯಲಿದ್ದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಲ್ಹಾದ ಜೋಶಿ ಬಸವರಾಜ ಬೊಮ್ಮಾಯಿ ಮತ್ತು ಆರ್‌. ಅಶೋಕ ಅವರ ಜೊತೆ ಸಭೆ ನಡೆಯಲಿದೆ. ಟಿಕೆಟ್‌ ತಪ್ಪಿದ ದಿನದಿಂದಲೂ ಬೇಸರಗೊಂಡಿರುವ ಅವರನ್ನು ಸಮಾಧಾನಪಡಿಸಲು ರಾಜ್ಯ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ‘ವರಿಷ್ಠರ ಸಭೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವೆ’ ಎಂದು ಸಂಗಣ್ಣ ಕರಡಿ ಹೇಳಿದ್ದರು. ಕೊಪ್ಪಳದಲ್ಲಿ ಇತ್ತೀಚೆಗೆ ನಡೆದಿದ್ದ ಬೆಂಬಲಿಗರ ಸ್ವಾಭಿಮಾನಿ ಸಮಾವೇಶದಲ್ಲಿ ಕೆಲ ಕಾರ್ಯಕರ್ತರು ‘ಕೊಪ್ಪಳ ಕ್ಷೇತ್ರದ ಟಿಕೆಟ್‌ ಬದಲಿಸಬೇಕು. ಇಲ್ಲವಾದರೆ ಸ್ವತಂತ್ರ್ಯವಾಗಿ ಸ್ಪರ್ಧಿಸಬೇಕು’ ಎಂದಿದ್ದರು. ಹೀಗಾಗಿ ಸಭೆ ಮಹತ್ವ ಪಡೆದುಕೊಂಡಿದೆ.
ನಿರುಪಾದಿ ಅಭ್ಯರ್ಥಿ
ಲೋಕಸಭಾ ಚುನಾವಣೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯಾಗಿ ನಿರುಪಾದಿ ಕೆ. ಗೋಮರ್ಸಿ ಆಯ್ಕೆಯಾಗಿದ್ದಾರೆ. ನಿರುಪಾದಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಮತ್ತು ಸಿಂಧನೂರು ವಿಧಾನಸಭಾ ಕ್ಷೇತ್ರದ ಪಕ್ಷದ ಪರಾಜಿತ ಅಭ್ಯರ್ಥಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT