ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಯ ಭವಿಷ್ಯ: ಬಿಜೆಪಿಯೊಳಗೆ ಚರ್ಚೆ

Published 6 ಮೇ 2024, 23:51 IST
Last Updated 6 ಮೇ 2024, 23:51 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣ ಬಿಜೆಪಿ–ಜೆಡಿಎಸ್‌ ಮೈತ್ರಿಯ ಭವಿಷ್ಯದ ಮೇಲೆ ಪರಿಣಾಮ ಬೀರುವುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಿರುಸಾಗಿದೆ. ಮೈತ್ರಿ ಮುಂದುವರಿಕೆ ಕುರಿತು ಬಿಜೆಪಿ ನಾಯಕರ ಮಧ್ಯೆಯೂ ಚಿಂತನ–ಮಂಥನ ಆರಂಭವಾಗಿದೆ.

ಜೂನ್‌ 3 ರಂದು ವಿಧಾನಪರಿಷತ್‌ನ ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯನ್ನೂ ಮೈತ್ರಿಕೂಟದ ಮೂಲಕ ಎದುರಿಸಬೇಕೆ? ಅಥವಾ ಸ್ವತಂತ್ರವಾಗಿ ಎದುರಿಸಬೇಕೆ? ಎಂಬ ಪ್ರಶ್ನೆ ರಾಜ್ಯದ ಬಿಜೆಪಿ ನಾಯಕರ ಮುಂದಿದೆ. ಪ್ರಜ್ವಲ್ ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ಹಗರಣ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಮುಂದುವರಿಸುವ ಅಗತ್ಯವಿದೆಯೇ ಎಂಬ ಚರ್ಚೆ ಬಿಜೆಪಿ ರಾಜ್ಯ ಘಟಕದಲ್ಲಿ ನಡೆದಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜತೆ ಚರ್ಚೆ ನಡೆಸಿ, ಪ್ರಜ್ವಲ್‌ ಪ್ರಕರಣದ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅಮಿತ್ ಶಾ ಅವರು ಎರಡೂ ಪಕ್ಷಗಳ ಮಧ್ಯೆ ಮೈತ್ರಿ ಮುಂದುವರಿಸುವ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ‘ಎಚ್‌.ಡಿ.ಕುಮಾರಸ್ವಾಮಿ ಮತ್ತು ಅಮಿತ್‌ ಶಾ ಅವರು ಏನು ಮಾತನಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಮೈತ್ರಿ ತೀರ್ಮಾನ ಕೇಂದ್ರ ಮಟ್ಟದಲ್ಲಿ ಆಗಿದೆ. ಮೈತ್ರಿ ಮುಂದುವರಿಸುವ ಬಗ್ಗೆ ವರಿಷ್ಠರೇ ತೀರ್ಮಾನ ಮಾಡುತ್ತಾರೆ. ಪದವೀಧರ, ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೇಂದ್ರ ನಾಯಕರ ಜತೆ ಚರ್ಚೆ ಮಾಡುತ್ತೇವೆ’ ಎಂದು ಹೇಳಿದರು.

‘ಎರಡನೇ ಹಂತದ ಮತದಾನ (ಮೇ 7) ಮುಗಿದ ಬಳಿಕ ಪರಿಷತ್‌ ಚುನಾವಣೆ ಕುರಿತು ಪಕ್ಷದ ಪ್ರಮುಖ ನಾಯಕರ ಸಭೆ ನಡೆಯಲಿದೆ. ಜೆಡಿಎಸ್‌ ಜತೆ ಸೀಟು ಹಂಚಿಕೆಯ ಕುರಿತೂ ಆ ಸಭೆಯಲ್ಲೇ ಚರ್ಚೆ ನಡೆಯುತ್ತದೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೆಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT