ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಾಧ್ಯವೇ?: ದೇವೇಗೌಡ

ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಇಲ್ಲ: ಎಚ್.ಡಿ. ದೇವೇಗೌಡ
Published 6 ಏಪ್ರಿಲ್ 2024, 12:10 IST
Last Updated 6 ಏಪ್ರಿಲ್ 2024, 12:10 IST
ಅಕ್ಷರ ಗಾತ್ರ

ಹಾಸನ: ಕೇವಲ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಅಧಿಕಾರ ಹಿಡಿಯಲು ಸಾಧ್ಯವೇ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಪ್ರಶ್ನಿಸಿದರು.

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ಗೆ ಈವರೆಗೆ ಲೋಕಸಭೆಯಲ್ಲಿ ಅಧಿಕೃತವಾಗಿ ಪ್ರತಿಪಕ್ಷದ ಸ್ಥಾನ ಕೂಡ ಸಿಕ್ಕಿಲ್ಲ. ಇಲ್ಲಸಲ್ಲದ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದರು.

ಇತ್ತೀಚಿಗೆ ಕಾಂಗ್ರೆಸ್‌ನ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ವಿವಿಧ ನಾಯಕರು ಸುದ್ದಿಗೋಷ್ಠಿ ನಡೆಸಿ ಒಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 25 ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ತಮ್ಮ ಸರ್ಕಾರ ಬಂದರೆ ದೇಶದಲ್ಲಿ 8 ಕೋಟಿ ಮನೆಗಳನ್ನು ನಿರ್ಮಾಣ ಮಾಡಿ, ಎಲ್ಲ ರೀತಿಯ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಇವರ ಈ ಎಲ್ಲ ಭರವಸೆಗಳನ್ನು ಈಡೇರಿಸಲು ಹಣ ಎಲ್ಲಿದೆ? ಇಂತಹ ಸುಳ್ಳನ್ನು ಜನ ನಂಬಬಾರದು ಎಂದರು.

ಅರಸೀಕೆರೆಯಲ್ಲಿ 28 ಕೊಳವೆಬಾವಿ ಕೊರೆದರೂ ಅದು ಕುಡಿಯಲು ಯೋಗ್ಯವಲ್ಲದ ನೀರು ಎಂದು ತಿಳಿದಾಗ, ಹೇಮಾವತಿಯಿಂದ ನೀರು ಕೊಡಲು ಮುಂದಾದೆ. ಆದರೆ, ಎತ್ತಿನಹೊಳೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಮುಂದಾಗಿರುವ ಕಾಂಗ್ರೆಸ್, ಅರಸೀಕೆರೆಗೆ ನೀರನ್ನು ಹರಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರು.

ನಿನ್ನೆ ಬಾಬು ಜಗಜೀವನ್‌ರಾಂ ಜಯಂತಿ ನಡೆದಿದೆ. ಆದರೆ ಕಾಂಗ್ರೆಸ್‌ನ ಯಾವೊಬ್ಬ ನಾಯಕ ಬಾಬು ಜಗಜೀವನ್‌ರಾಂ ಬಗ್ಗೆ ಒಂದು ಮಾತನಾಡಿಲ್ಲ. ಇಂದಿರಾಗಾಂಧಿ, ನೆಹರೂ ಕಾಲದಲ್ಲಿ ಸಚಿವರಾಗಿದ್ದವರಿಗೆ ಸಲ್ಲಿಸುವ ಗೌರವ ಇದೇನಾ ಎಂದು ಪ್ರಶ್ನಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಎಸ್ಸಿ, ಎಸ್ಟಿ  ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದ್ದು ಇದೇ ದೇವೇಗೌಡ. ಇದರ ಬಗ್ಗೆ ಜನರು ಯೋಚಿಸಬೇಕು ಎಂದರು.

ತೆಂಗಿನ ಮರದ ಕೆಳಗೆ ಮಲಗಿ, ಪರಿಹಾರಕ್ಕಾಗಿ ಡ್ರಾಮಾ ಮಾಡಿದ ವ್ಯಕ್ತಿಗಳನ್ನು ನಾನು ನೋಡಿದ್ದೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡರ ವಿರುದ್ಧದ ವಾಗ್ದಾಳಿ ನಡೆಸಿದ ಅವರು, ಬೆಂಗಳೂರಿನಲ್ಲಿ ಡಾ.ಸಿ.ಎನ್‌. ಮಂಜುನಾಥ ಅವರನ್ನು ಸೋಲಿಸಲು ಅದೇ ಹೆಸರಿನ ಹಲವರನ್ನು ನಾಮಪತ್ರ ಸಲ್ಲಿಸಿದ್ದಾರೆ. ಇಂತಹ ವಿಧಾನಗಳಿಂದ ಅವರನ್ನು ಸೋಲಿಸಲು ಸಾಧ್ಯವೇ? ಎಂದು ಕೇಳಿದರು.

ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ಅರಸೀಕೆರೆ ತಾಲ್ಲೂಕಿಗೆ ಕುಡಿಯುವ ನೀರು , ಗಂಡಸಿಯಲ್ಲಿ ವಿದ್ಯುತ್ ಕೇಂದ್ರ ನಿರ್ಮಾಣ, ರಸ್ತೆ, ಶಿಕ್ಷಣ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಕೆಲಸ ಮಾಡಿದೆ. ಜೊತೆಗೆ ಕೈಗಾರಿಕೆ ಸ್ಥಾಪಿಸಿ, ಸಾವಿರಾರು ಜನರಿಗೆ ಕೆಲಸ ಮಾಡಲು ಅನುಕೂಲ ಕಲ್ಪಿಸುವ ಜೆಡಿಎಸ್ ಬಗ್ಗೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತವರಿಗೆ ದೇವರೇ ಶಿಕ್ಷೆ ಕೊಡುವ ಕಾಲ ಬರಲಿದೆ ಎಂದರು.

ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ, ಬಡವರ, ದಲಿತರ, ನೊಂದವರ ಪರವಾಗಿ ಕೆಲಸ ಮಾಡಿದ್ದಾರೆ. 30 ವರ್ಷಗಳಿಂದ ದೇವೇಗೌಡರಿಗೆ ಹಾಗೂ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಈ ಭಾಗದ ಜನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಅವರಿಗೂ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮುಖಂಡರಾದ ಹೆರಗು ವಾಸುದೇವ್, ಮುಖಂಡರು ಹಾಜರಿದ್ದರು.

‘15 ವರ್ಷ ನಮ್ಮಲ್ಲಿ ತಿಂದು ತೇಗಿರುವ ಗಿರಾಕಿ’

ದೇವೇಗೌಡರ ಮುಖ ನೋಡಿ ಯಾರು ಮತ ಹಾಕಲ್ಲ. ಹಣ ಕೊಟ್ಟರೆ ಮಾತ್ರ ಮತ ಹಾಕುತ್ತಾರೆ ಎಂದು ಹೇಳುವ ಮೂಲಕ ಹಣದಲ್ಲಿ ಅಳೆಯುವ ವ್ಯಕ್ತಿಗಳಿಗೆ ಕ್ಷೇತ್ರದ ಜನ ಬುದ್ದಿ ಕಲಿಸಬೇಕು. 15 ವರ್ಷ ನಮ್ಮ ಬಳಿ ತಿಂದು ತೇಗಿ ಹೋಗಿರುವ ಗಿರಾಕಿಗೆ ಈ ಬಾರಿಯ ಚುನಾವಣೆಯಲ್ಲೇ ತಕ್ಕ ಉತ್ತರ ನೀಡಬೇಕು ಎಂದು ಕೆ.ಎಂ. ಶಿವಲಿಂಗೇಗೌಡ ವಿರುದ್ದ ಶಾಸಕ ಎಚ್‌.ಡಿ. ರೇವಣ್ಣ ತೀವ್ರ ವಾಗ್ದಾಳಿ ನಡೆಸಿದರು. 91 ರ ವಯಸ್ಸಿನಲ್ಲಿ ಕೂಡ ಜಿಲ್ಲೆಯ ಜನರ ಒಳಿತಿಗಾಗಿ ಕೆಲಸ ಮಾಡುತ್ತಿರುವ ದೇವೇಗೌಡರ ಬಗ್ಗೆ ತುಮಕೂರಿನಲ್ಲಿ ಸಚಿವರೊಬ್ಬರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇನ್ನು ಕೆಲವರು ಎಲ್ಲವೂ ಸಿದ್ದರಾಮಯ್ಯ ಅವರಿಂದಲೇ ಆಗಿದೆ ಎಂದು ಹೇಳಿಕೊಂಡು ಒಡಾಡಿದ್ದಾರೆ ಎನ್ನುವ ಮೂಲಕ ಸಚಿವ ಕೆ.ಎನ್. ರಾಜಣ್ಣ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ ಪರಿಣಾಮ ಇಂದು ಅರಸೀಕೆರೆ ಭಾಗದ ಜನರಿಗೆ ಸಾಕಷ್ಟು ಅನುಕೂಲ ಆಗಿದೆ. ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದ ಕೊಬ್ಬರಿ ಖರೀದಿಗೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT