ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಕ್ಕೆ ನೂರು ‘ಇಂಡಿಯಾ’ ಮೈತ್ರಿಗೆ ಅಧಿಕಾರ: ಈಶ್ವರ ಖಂಡ್ರೆ

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ವಿಶ್ವಾಸ
Published 16 ಮೇ 2024, 14:00 IST
Last Updated 16 ಮೇ 2024, 14:00 IST
ಅಕ್ಷರ ಗಾತ್ರ

ಬೀದರ್‌: ‘ದೇಶದಲ್ಲಿ ಈ ಸಲ ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಬೀದರ್‌ ಸೇರಿದಂತೆ ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ. ಜನರೇ ಅದನ್ನು ಹೇಳುತ್ತಿದ್ದಾರೆ. ಕಳೆದ 11 ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜೂನ್‌ 3ರಂದು ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ತಲಾ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದ ಹಾಲಿ ಶಾಸಕ ಡಾ. ಚಂದ್ರಶೇಖರ ಪಾಟೀಲ ಅವರನ್ನು ಪುನಃ ಕಣಕ್ಕಿಳಿಸಲಾಗಿದೆ ಎಂದರು.

ಕಳೆದ ಹತ್ತು ವರ್ಷಗಳ ಹಿಂದೆ ಬಿಜೆಪಿಯವರು ಏನೇನು ಭರವಸೆಗಳನ್ನು ಜನರಿಗೆ ಕೊಟ್ಟಿದ್ದರು. ಅವುಗಳನ್ನು ಈಡೇರಿಸಲು ಅವರಿಗೆ ಸಾಧ್ಯವಾಗಿಲ್ಲ. 45 ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗದ ಪ್ರಮಾಣ ಕೇಂದ್ರದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾಸ್ತಿ ಆಗಿದೆ. ನಮ್ಮ ಸರ್ಕಾರ ‘ಯುವನಿಧಿ’ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ ನೆರವಾಗಿದೆ ಎಂದರು.

ಜೂನ್‌ 4ರ ನಂತರ ಕೇಂದ್ರದಲ್ಲಿ ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು, ‘ಯುವ ನ್ಯಾಯ’ ಯೋಜನೆಯಡಿ ವಿದ್ಯಾವಂತ ಯುವಕರಿಗೆ ಪ್ರತಿ ತಿಂಗಳು ₹8,500 ಕೊಟ್ಟು, ಖಾಸಗಿ ಹಾಗೂ ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ಕೌಶಲ ತರಬೇತಿ ಕೊಟ್ಟು ಕಾಯಂ ಕೆಲಸ ಕೊಡಲಾಗುವುದು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 30 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಯುವಕರ ಭವಿಷ್ಯ ಉಜ್ವಲವಾಗಬೇಕಾದರೆ ಅವರಿಗೆ ಕೆಲಸ ಕೊಡಬೇಕಿದೆ ಎಂದರು.

ಬಿಜೆಪಿಗೆ ಹೇಳಿಕೊಳ್ಳಲು ಏನೂ ಇಲ್ಲ. ಸುಳ್ಳು ಹೇಳಿ ಯುವಕರ ಭವಿಷ್ಯ ಹಾಳು ಮಾಡಿದ್ದಾರೆ. ಸರ್ಕಾರಿ ಸ್ವಾಮ್ಯದ ಅನೇಕ ಕಂಪನಿಗಳನ್ನು ಮುಚ್ಚಿ, ಯುವಕರನ್ನು ಬೀದಿಗೆ ತಳ್ಳಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಬಿಜೆಪಿ ಸಂಪೂರ್ಣ ಹಾಳು ಮಾಡಿದೆ ಎಂದು ಆರೋಪಿಸಿದರು.

ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನದಿಂದ ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ದೊರೆತ ನಂತರ 30 ಸಾವಿರ ಹುದ್ದೆಗಳನ್ನು ತುಂಬಲಾಗಿದೆ. ಹಿಂದಿನ ನಾಲ್ಕು ವರ್ಷಗಳ ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಹುದ್ದೆ ತುಂಬಿಲ್ಲ. ಅರಣ್ಯ ಇಲಾಖೆಯಲ್ಲಿ 540 ಅರಣ್ಯ ವೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 850 ಹೊಸ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣೆ ನಂತರ 152 ಹುದ್ದೆಗಳಿಗೆ ಅನುಮತಿ ಪಡೆದು, ಅಧಿಸೂಚನೆ ಹೊರಡಿಸಿ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ವಿಧಾನ ಪರಿಷತ್‌ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಅರವಿಂದ ಅರಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಮುಖಂಡರಾದ ರಾಜಶೇಖರ ಪಾಟೀಲ ಹುಮನಾಬಾದ್‌, ಅಶೋಕ ಖೇಣಿ, ಧನರಾಜ ತಾಳಂಪಳ್ಳಿ, ಶರಣಪ್ಪ ಮಟ್ಟೂರ, ಅಭಿಷೇಕ ಪಾಟೀಲ, ಅಮೃತರಾವ ಚಿಮಕೋಡೆ, ಸಾಗರ್‌ ಖಂಡ್ರೆ ಹಾಜರಿದ್ದರು.

‘ಮಹಾ ಸಿಎಂ ಕರ್ನಾಟಕಕ್ಕೆ ಕಾಲಿಟ್ಟು ನೋಡಲಿ’

‘ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕರ್ನಾಟಕದಲ್ಲಿ ಆಪರೇಷನ್‌ ಕಮಲ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ನಾಚಿಕೆ ಆಗುವುದಿಲ್ಲವೇ? ಅವರು ಕರ್ನಾಟಕಕ್ಕೆ ಕಾಲಿಟ್ಟು ನೋಡಲಿ’ ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು. ಕರ್ನಾಟಕದ ಕಾಂಗ್ರೆಸ್‌ ಶಾಸಕರು ಖರೀದಿಗೆ ಗಿರಾಕಿಗಳಲ್ಲ. ಬಿಜೆಪಿಯವರಿಗೆ ಯಾವುದೇ ಮಾನ ಮರ್ಯಾದೆ ಇಲ್ಲ. ಈ ಸಲದ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶಿಂಧೆ ಸರ್ಕಾರ ಸಂಪೂರ್ಣ ನೆಲಕಚ್ಚಲಿದೆ. ಹುಬ್ಬಳ್ಳಿಯಲ್ಲಿ ನಡೆದ ಇನ್ನೊಂದು ಕೊಲೆ ಘಟನೆಯಲ್ಲಿ ರಾಜಕೀಯ ಮಾಡಬಾರದು. ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು. ‘ಇಂಡಿಯಾ’ ಒಕ್ಕೂಟದ ಭಾಗವಾಗಿರುವ ಎಎಪಿ ಈಶಾನ್ಯ ಪದವೀಧರ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಹಾಗೊಂದು ವೇಳೆ ಮಾಡಿದರೆ ಹೈಕಮಾಂಡ್‌ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

‘ಅಮರನಾಥ ತರಹ ನಾನು ಅಶಿಕ್ಷಿತನಲ್ಲ’ 

‘ಈಶಾನ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ತರಹ ನಾನು ಅಶಿಕ್ಷಿತನಲ್ಲ. ನಾನೊಬ್ಬ ಡಾಕ್ಟರ್‌. ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ಪದವೀಧರ ಮತದಾರರು ಪ್ರಜ್ಞಾವಂತರು. ಈ ಸಲವೂ ನನ್ನನ್ನು ಬೆಂಬಲಿಸುತ್ತಾರೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಹೇಳಿದರು. ನಮ್ಮ ಸರ್ಕಾರದ ಅವದಿಯಲ್ಲಿ ಶಿಕ್ಷಕರ ವರ್ಗಾವಣೆ ಮಾಡಲಾಗಿದೆ. ಒಪಿಎಸ್‌ ಜಾರಿಗೂ ಸರ್ಕಾರ ಕ್ರಮ ಕೈಗೊಳ್ಳಲಿದೆ. 7ನೇ ವೇತನ ಆಯೋಗ ಜಾರಿಗೊಳಿಸಲಾಗುವುದು. ವೈಯಕ್ತಿಕವಾಗಿ ನಾನು ಕೂಡ ಸಾಕಷ್ಟು ಕೆಲಸ ಮಾಡಿದ್ದೇನೆ. ವಿಶಾಲ ಕ್ಷೇತ್ರ ಆಗಿರುವುದರಿಂದ ಜನರಿಗೆ ಗೊತ್ತಾಗುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT