ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯವಂತನೊ, ಲೂಟಿಕೋರನೊ ನಿರ್ಧರಿಸಿ: ನಿಖಿಲ್

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಪರ ನಿಖಿಲ್ ಭರ್ಜರಿ ಪ್ರಚಾರ
Published 24 ಏಪ್ರಿಲ್ 2024, 5:12 IST
Last Updated 24 ಏಪ್ರಿಲ್ 2024, 5:12 IST
ಅಕ್ಷರ ಗಾತ್ರ

ರಾಮನಗರ: ‘ಬೆಂಗಳೂರು ಗ್ರಾಮಾಂತರದ ಜನರು ಈ ಸಲದ ಚುನಾವಣೆಯಲ್ಲಿ ಸಂಸತ್ತಿಗೆ ಹೃದಯವಂತನನ್ನು ಕಳಿಸುತ್ತಿರೋ ಅಥವಾ ಲೂಟಿಕೋರನನ್ನೊ ಎಂಬುದನ್ನು ಯೋಚಿಸಿ ನಿರ್ಧರಿಸಬೇಕು. ಕ್ಷೇತ್ರವಷ್ಟೇ ಅಲ್ಲದೆ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೃಯವಂತನನ್ನು ಕಳಿಸಿದರೆ, ಇಡೀ ದೇಶಕ್ಕೆ ಒಳ್ಳೆಯದು ಮಾಡಿದಂತಾಗುತ್ತದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ತಮ್ಮ ಮಾವ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಪರವಾಗಿ ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಮಂಗಳವಾರ ಮತಯಾಚಿಸಿ ಅವರು ಮಾತನಾಡಿದರು.

‘ದೇಶ ವಿಭಜನೆಯ ಹೇಳಿಕೆ ಕೊಟ್ಟಿರುವ ಸುರೇಶ್ ಅವರ ಮನಸ್ಥಿತಿ ಏನೆಂದು ನಿಮಗೆಲ್ಲಾ ಗೊತ್ತಿದೆ. ಅಂತವರನ್ನು ಮತ್ತೆ ಸಂಸತ್ತಿಗೆ ಕಳಿಸಿ ಆವಾಂತರ ಮಾಡಿಕೊಳ್ಳುತ್ತೀರಾ? ಸಾಕು, ಅವರ ಬದಲಿಗೆ ಸೇವೆಗೆ ತಮ್ಮ ಬದುಕು ಮುಡಿಪಾಗಿಟ್ಟಿರುವ ಮಂಜುನಾಥ್ ಅವರಿಗೆ ಒಂದು ಅವಕಾಶ ಕೊಟ್ಟು ನೋಡಿ’ ಎಂದು ಮನವಿ ಮಾಡಿದರು.

‘ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದ ನಾವು ಮೈತ್ರಿ ಧರ್ಮ ಪಾಲಿಸಿದ ಕಾರಣಕ್ಕೆ, ಸುರೇಶ್ ಅವರು ಸಂಸದರಾದರು. ಆದರೆ, ಮಂಡ್ಯ ಮತ್ತು ತುಮಕೂರಿನಲ್ಲಿ ಮೈತ್ರಿ ಧರ್ಮ ಪಾಲಿಸದ ಕಾಂಗ್ರೆಸ್‌ನವರು ಬೆನ್ನಿಗೆ ಚೂರಿ ಹಾಕಿದರು. ಹಿರಿಯರಾದ ಎಚ್‌.ಡಿ. ದೇವೇಗೌಡರು ಮತ್ತು ನನ್ನ ವಿರುದ್ಧ ಷಡ್ಯಂತ್ರ ಮಾಡಿ ಸೋಲಿಸಿದರು. ಹಿಂದಿನ ಸೋಲಿನ ಸೇಡನ್ನು ಮತದಾರರು ತೀರಿಸಿಕೊಳ್ಳಬೇಕು’ ಎಂದು ಹುರಿದುಂಬಿಸಿದರು.

ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ‘ರಾಮನಗರವನ್ನು ಜಿಲ್ಲೆ ಮಾಡಿ ಅಭಿವೃದ್ಧಿಗೆ ಬುನಾದಿ ಹಾಕಿದ್ದೇ ಎಚ್.ಡಿ. ಕುಮಾರಸ್ವಾಮಿ. ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಮಹತ್ತರವಾದುದು. ಜಿಲ್ಲೆಯ ಪ್ರಗತಿ ಕುರಿತು ಅವರು ಕಂಡಿರುವ ಕನಸುಗಳು ಈಡೇರಬೇಕಾದರೆ ನೀವು ನನ್ನನ್ನು ಸಂಸತ್ತಿಗೆ ಕಳಿಸಬೇಕು. ಕ್ಷೇತ್ರದಲ್ಲಿ ಕೈ ಬದಲು ಕಮಲ ಅರಳಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ ಮಾತನಾಡಿ, ‘ಈ ಚುನಾವಣೆ ದೇಶದ ಅಭಿವೃದ್ಧಿ ಜೊತೆಗೆ ಸಂಸ್ಕೃತಿ ಕಾಪಾಡುವ ನಿಟ್ಟಿನಲ್ಲಿ ಮಹತ್ತರವಾದುದು. ಜನ ಮತ ಹಾಕುವುದಕ್ಕೆ ಮುಂಚೆ ಈ ಕುರಿತು ಆಲೋಚನೆ ಮಾಡಿ ಉತ್ತಮರಿಗೆ ಮತ ಹಾಕಬೇಕು. ಮಂಜುನಾಥ್ ಗೆದ್ದರೆ ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ, ದೊಡ್ಡ ಕ್ರಾಂತಿಯನ್ನೇ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ರುದ್ರೇಶ್, ಗೌತಮ್ ಗೌಡ ಸೇರಿದಂತೆ ಹಲವರು ಇದ್ದರು.

ಮತದಾನ ಮಹತ್ವದ ‘ಸ್ವರ್ಗ–ನರಕ’ ಕಥೆ

ಭಾಷಣದಲ್ಲಿ ಡಾ. ಮಂಜುನಾಥ್ ಅವರು ಸ್ವರ್ಗ–ನರಕದ ಕಥೆ ಮೂಲಕ ಮತದಾನದ ಮಹತ್ವ ಹೇಳಿದರು. ಸತ್ತು ಯಮಲೋಕಕ್ಕೆ ಹೋದ ವ್ಯಕ್ತಿಯೊಬ್ಬನಿಗೆ ಚಿತ್ರಗುಪ‍್ತ ‘ನಿನಗೆ ಸ್ವರ್ಗ ಬೇಕೋ ನರಕ ಬೇಕೋ. ಯಾವುದಕ್ಕೂ ಎರಡನ್ನೂ ಒಮ್ಮೆ ನೋಡಿ ಆಮೇಲೆ ಹೇಳು ಎಂದು ಸೂಚಿಸಿದ. ನರಕದತ್ತ ಕಣ್ಣಾಡಿಸಿದ ಆ ವ್ಯಕ್ತಿಗೆ ಅಲ್ಲಿ ಮೋಜು–ಮಸ್ತಿ ಮಾಡುತ್ತಿರುವವರು ಕಂಡರು. ಸ್ವರ್ಗದತ್ತ ಬಂದಾಗ ಅಲ್ಲಿದ್ದವರು ಸಮಾಧಾನಚಿತ್ತರಾಗಿ ಓಡಾಡುತ್ತಿದ್ದರು. ಬಳಿಕ ಚಿತ್ರಗುಪ್ತನ ಬಳಿಗೆ ಬಂದ ವ್ಯಕ್ತಿ ಸ್ವರ್ಗಕ್ಕಿಂತ ನರಕವೇ ಚನ್ನಾಗಿದೆ. ನಾನು ಅಲ್ಲಿಗೇ ಹೋಗುವೆ ಎಂದ. ಮೊದಲ ದಿನ ಮೋಜು–ಮಸ್ತಿ ಮಾಡಿದ. ಮಾರನೆಯ ದಿನ ಯಥಾ ಪ್ರಕಾರ ನರಕಲೋಕದಲ್ಲಿ ಶಿಕ್ಷೆಗಳು ಪ್ರಾರಂಭವಾದವು. ಆಗ ಚಿತ್ರಗುಪ್ತನ ಬಳಿಗೆ ಓಡಿ ಬಂದ ವ್ಯಕ್ತಿ ‘ಇದೇನಿದು? ನೆನ್ನೆ ಇಲ್ಲಿ ಮೋಜು–ಮಸ್ತಿ ಇತ್ತು. ಇಂದು ಶಿಕ್ಷೆ ಕೊಡುತ್ತಿದ್ದಾರೆ’ ಎಂದು ಪ್ರಶ್ನಿಸಿದ. ಅದಕ್ಕೆ ಚಿತ್ರಗುಪ್ತ ‘ನೆನ್ನೆ ಅಲ್ಲಿ ಚುನಾವಣೆ ಇತ್ತು. ಹಾಗಾಗಿ ಅಲ್ಲಿನವರು ಮೋಜು–ಮಸ್ತಿ ಮಾಡುತ್ತಿದ್ದರು. ಮುಗಿದ ಬಳಿಕ ಅಲ್ಲಿನ ಸ್ಥಿತಿ ಯಥಾ ರೀತಿ ಇದೆ’ ಎಂದ. ಜನರು ಚುನಾವಣೆ ಬಂದಾಗ ಕ್ಷಣಿಕ ಆಮಿಷಗಳಿಗೆ ಒಳಗಾಗದೆ ತಮ್ಮ ಭವಿಷ್ಯದ ದೃಷ್ಟಿಯಿಂದ ಮತ ಚಲಾಯಿಸಬೇಕು ಎಂದು ಮಂಜುನಾಥ್ ಕಥೆಯ ತಾತ್ಪರ್ಯ ಹೇಳಿದಾಗ ಜನ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT