ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಮತದಾನಕ್ಕೆ ಕೊಡಗು ಜಿಲ್ಲಾಡಳಿತ ಸರ್ವಸನ್ನದ್ಧ

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಪೂರ್ಣ; ಜಿಲ್ಲಾಧಿಕಾರಿ
Published 25 ಏಪ್ರಿಲ್ 2024, 4:48 IST
Last Updated 25 ಏಪ್ರಿಲ್ 2024, 4:48 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಎಲ್ಲ 546 ಮತಗಟ್ಟೆಗಳಲ್ಲಿ ಏ. 26ರಂದು ಬೆಳಿಗ್ಗೆ 7 ಗಂಟೆಯಿಂದ 6 ಗಂಟೆಯವರೆಗೂ ಮತದಾನ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

‘ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತಲಾ 273 ಮತಗಟ್ಟೆಗಳಿವೆ. ಎರಡೂ ಕ್ಷೇತ್ರಗಳಲ್ಲಿ 2,30,568 ಪುರುಷ ಮತದಾರರು, 2,40,182 ಮಹಿಳಾ ಮತದಾರರು ಹಾಗೂ 16 ತೃತೀಯ ಲಿಂಗಿ ಮತದಾರರು ಇದ್ದಾರೆ. ಇವರೆಲ್ಲರೂ ನಿರ್ಭೀತಿಯಿಂದ ಮತದಾನ ಮಾಡಲು ಸಕಲ ಸೌಲಭ್ಯಗಳನ್ನೂ ಒದಗಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘546 ಮತಗಟ್ಟೆಗಳಲ್ಲಿ 2,416 ಮಂದಿ ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಎಂದು ಗುರುತಿಸಲಾದ ಮತಗಟ್ಟೆಗಳಲ್ಲಿ ವೆಬ್‌ಕ್ಯಾಸ್ಟಿಂಗ್ ಸೌಲಭ್ಯ, ಸೂಕ್ಷ್ಮ ವೀಕ್ಷಕರು ಹಾಗೂ ಸಿಎಪಿಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಹೇಳಿದರು.

ಬುಧವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಗಿಯಲಿದೆ. ನಂತರ, ಮನೆಮನೆ ಪ್ರಚಾರ ನಡೆಸಲು ಮಾತ್ರವೇ ಅವಕಾಶ ಇದೆ. ಅಬ್ಬರದ ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದರು.

ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪ್ರಯಾಣಕ್ಕೆ 80 ಕೆಎಸ್‌ಆರ್‌ಟಿಸಿ ಬಸ್‌ಗಳು, 47 ಮಿನಿ ಬಸ್‌ಗಳು, 74 ಜೀಪುಗಳು ಹಾಗೂ 13 ಮ್ಯಾಕ್ಸಿಕ್ಯಾಬ್‌ಗಳನ್ನು ನಿಯೋಜಿಸಲಾಗಿದೆ ಎಂದರು.

200 ಮೀಟರ್‌ ಒಳಗೆ ಪ್ರಚಾರಕ್ಕೆ ಅವಕಾಶ ಇಲ್ಲ: ಮತಗಟ್ಟೆಯ 200 ಮೀಟರ್‌ ಒಳಗೆ ಯಾವುದೇ ರಾಜಕೀಯ ಪಕ್ಷಗಳಿಗೆ ಅಥವಾ ಯಾವುದೇ ಅಭ್ಯರ್ಥಿಯ ಪರ ಹಾಗೂ ವಿರೋಧವಾಗಿ ಪ್ರಚಾರ ಮಾಡಲು ಅವಕಾಶ ಇಲ್ಲವೇ ಇಲ್ಲ. ಇದನ್ನು ಅತ್ಯಂತ ಕರಾರುವಕ್ಕಾಗಿ ಪಾಲಿಸಲಾಗುವುದು. ಎಲ್ಲರೂ ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

200 ಮೀಟರ್‌ ನಂತರವೂ ದೊಡ್ಡದಾದ ಶಾಮಿಯಾನ ಹಾಕಲು ಅವಕಾಶ ಇಲ್ಲ. ಕೇವಲ 2 ಕುರ್ಚಿ ಹಾಗೂ 1 ಟೇಬಲ್‌ ಹಾಕಿಕೊಳ್ಳುವುದು, ಅದಕ್ಕೆ ಸೀಮಿತವಾಗುವಂತೆ ಮಾತ್ರ ನೆರಳಿನ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ಇದೆ. ಈ ನಿಯಮವನ್ನು ಯಾರೂ ಉಲ್ಲಂಘಿಸಬಾರದು ಎಂದು ಮನವಿ ಮಾಡಿದರು.

ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಶೇಷ ಮತಗಟ್ಟೆಗಳ ಸ್ಥಾಪನೆ: ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಡಿಕೇರಿಯಲ್ಲಿ 2, ವಿರಾಜಪೇಟೆಯಲ್ಲಿ 4 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ತಲಾ ಒಂದೊಂದು ದಿವ್ಯಾಂಗ ಮತಗಟ್ಟೆಗಳು, ಯುವ ಮತದಾರರ ಮತಗಟ್ಟೆಗಳಿವೆ. ಜೊತೆಗೆ, ಕಾಫಿ ಮೊದಲಾದ ಥೀಮ್ಸ್‌ ಆಧಾರಿತ ಮತಗಟ್ಟೆಗಳು ಮಡಿಕೇರಿಯಲ್ಲಿ 2 ಹಾಗೂ ವಿರಾಜಪೇಟೆಯಲ್ಲಿ 1 ಇದೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭಾಗವಹಿಸಿದ್ದರು.

ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಪೊಲೀಸರಿಗೆ ಮಡಿಕೇರಿಯ ಪೊಲೀಸ್ ಕವಾಯತು ಮೈದಾನದಲ್ಲಿ ಅವರ ಕರ್ತವ್ಯ ಕುರಿತು ಮಾಹಿತಿ ನೀಡಲಾಯಿತು
ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಪೊಲೀಸರಿಗೆ ಮಡಿಕೇರಿಯ ಪೊಲೀಸ್ ಕವಾಯತು ಮೈದಾನದಲ್ಲಿ ಅವರ ಕರ್ತವ್ಯ ಕುರಿತು ಮಾಹಿತಿ ನೀಡಲಾಯಿತು

ಕೊಡಗು ಜಿಲ್ಲೆಯಲ್ಲಿ ವಿಶೇಷ ಮತಗಟ್ಟೆಗಳ ಸ್ಥಾಪನೆ ಎಲ್ಲೆಡೆ ಹದ್ದಿನ ಕಣ್ಣು 200 ಮೀಟರ್ ಒಳಗೆ ಪ್ರಚಾರಕ್ಕೆ ಅವಕಾಶವೇ ಇಲ್ಲ

ಸೌಜನ್ಯದಿಂದ ವರ್ತಿಸಿ: ಎಸ್‌.ಪಿ

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮತದಾನದ ದಿನ ಜಿಲ್ಲೆಯ ಜನರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಪೊಲೀಸರಿಗೆ ಕಿವಿಮಾತು ಹೇಳಿದರು. ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಪೊಲೀಸರನ್ನು ಉದ್ದೇಶಿಸಿ ಬುಧವಾರ ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಜನರು ಹೆಚ್ಚು ಪ್ರಜ್ಞಾವಂತರು. ಬೇರೆ ಜಿಲ್ಲೆಯ ಜನರಿಗೆ ಹೋಲಿಸಿದರೆ ನಿಯಮ ಪಾಲನೆಯಲ್ಲಿ ಮುಂದಿದ್ದಾರೆ. ಇಂತಹ ಶಿಸ್ತುಬದ್ಧವಾದ ಜೀವನ ನಡೆಸುವ ಜನರೊಂದಿಗೆ ವರ್ತಿಸುವಾಗ ಮಾತನಾಡುವಾಗ ಸೌಜನ್ಯದ ಎಲ್ಲೆಯನ್ನು ಮೀರಬಾರದು ಎಂದು ಅವರು ಹೇಳಿದರು. ಇದಕ್ಕೆ ಉದಾಹರಣೆಯಾಗಿ ಅವರು ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಡೆದ ಘಟನೆಗಳನ್ನು ಪ್ರಸ್ತಾಪಿಸಿದರು. ಗುಜರಾತ್‌ ಕಲಬುರಗಿ ಹಾಗೂ ಗದಗದಿಂದ ಬಂದಿರುವ ಪೊಲೀಸರು ವಿಶೇಷವಾಗಿ ಈ ಸಂಗತಿಯನ್ನು ನೆನಪಿನಲ್ಲಿಡಬೇಕು. ಯಾವುದೇ ಕಾರಣಕ್ಕೂ ಪೊಲೀಸರಿಂದಲೇ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದರು. ಒಂದು ವೇಳೆ ಯಾರಿಗಾದರೂ ಸಹಾಯಬೇಕಿದ್ದರೆ ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ನೇರವಾಗಿ ಮತದಾರರೊಂದಿಗೆ ಮತಗಟ್ಟೆ ಪ್ರವೇಶಿಸಬಾರದು. ಕೆಲವೊಂದು ಸೂಕ್ಷ್ಮತೆಗಳನ್ನು ಅರಿತು ಕರ್ತವ್ಯ ನಿಭಾಯಿಸಬೇಕು ಎಂದರು. ಒಂದು ವೇಳೆ ಯಾರಿಗಾದರೂ ತೀರಾ ತುರ್ತು ಸಂದರ್ಭಗಳಿದ್ದರೆ ಅಂತಹವರಿಗೆ ರಜೆ ಕೊಡಲು ಸಿದ್ಧ. ಆದರೆ ನಿಯೋಜಿಸಿರುವ ಸಿಬ್ಬಂದಿ ಕಡ್ಡಾಯವಾಗಿ ತಮಗೆ ಸೂಚಿಸಿದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ತಪ್ಪಿದ್ದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದೂ ಎಚ್ಚರಿಸಿದರು.

ಗುಜರಾತ್‌ನಿಂದ 190 ‍ಪೊಲೀಸರು!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತದಾನದ ದಿನ ಭದ್ರತೆ ಕೈಗೊಳ್ಳಲು ಕೇವಲ ಹೊರ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ‘ಗುಜರಾತ್‌ನಿಂದ 190 ಪೊಲೀಸರನ್ನು ಒಳಗೊಂಡ 2 ತುಕಡಿ ಈಗಾಗಲೇ ಬಂದಿದೆ. ಇದರೊಂದಿಗೆ ಕಲಬುರಗಿಯಿಂದ ಪೊಲೀಸರು ಗದಗ ಜಿಲ್ಲೆಯಿಂದ ಗೃಹರಕ್ಷಕ ದಳದ ಸಿಬ್ಬಂದಿಯೂ ಬಂದಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು. ಚಿಕ್ಕ ಜಿಲ್ಲೆಯಾದರೂ ನಕ್ಸಲರ ಚಲನವಲನಗಳು ಪತ್ತೆಯಾಗಿರುವುದರಿಂದ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಒಟ್ಟು 1600 ಪೊಲೀಸರನ್ನು ಭದ್ರತೆಗೆಂದೇ ನಿಯೋಜಿಸಲಾಗಿದೆ. ಇದರಲ್ಲಿ ಕೆಎಸ್‌ಆರ್‌ಪಿಯ 8 ತುಕಡಿಗಳೂ ಇವೆ ಎಂದರು.

ಹಣ ಹಂಚಿಕೆ ಕಂಡು ಬಂದರೆ ಸಂಪರ್ಕಿಸಿ

‘ಯಾವುದೇ ರಾಜಕೀಯ ಪಕ್ಷಗಳು ವ್ಯಕ್ತಿಗಳು ಮತದಾನ ಮಾಡುವ ಸಲುವಾಗಿ ಹಣ ಅಥವಾ ಇನ್ನಾವುದೇ ವಸ್ತುಗಳನ್ನು ಹಂಚುತ್ತಿರುವುದು ಕಂಡು ಬಂದಲ್ಲಿ ದೂ:08272228300 ಹಾಗೂ ಮೊ: 9480804900 ತುರ್ತು ಸಹಾಯವಾಣಿ 112 ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡುವವರು ವಿವರಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT