ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಜನಶಕ್ತಿಗಿಂತ ಮತಶಕ್ತಿ ಮುಖ್ಯ: ಮಂಜುನಾಥ್

ವೈಟ್ ಕಾಲರ್ ವ್ಯಕ್ತಿಯ ಪ್ರಯೋಜನವನ್ನು ಜನ ತೀರ್ಮಾನಿಸುತ್ತಾರೆ: ಸಿಪಿವೈ
Published 29 ಮಾರ್ಚ್ 2024, 14:07 IST
Last Updated 29 ಮಾರ್ಚ್ 2024, 14:07 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ಜನಶಕ್ತಿ ಪ್ರದರ್ಶನಕ್ಕಿಂತ ಮತಗಟ್ಟೆಯಲ್ಲಿ ಶಕ್ತಿ ಪ್ರದರ್ಶನವಾಗೋದು ಮುಖ್ಯ. ಮತಯಂತ್ರದಲ್ಲಿ ಜನ ತೋರಿಸುವ ಶಕ್ತಿಗೆ ಮಿಗಿಲಾದುದು ಮತ್ತೊಂದಿಲ್ಲ’ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ನಾಮಪತ್ರ ಸಲ್ಲಿಸುವಾಗ ರಾಮನಗರದಲ್ಲಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದರ ಕುರಿತು ತಾಲ್ಲೂಕಿನ ಕೋಡಂಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಷ್ಟು ಜನ ಸೇರಿದರು ಎಂಬುದು ಮುಖ್ಯವಾಗುವುದಿಲ್ಲ. ಕೆಲವೆಡೆ ಒಬ್ಬರೇ ಹೋಗಿ ನಾಮಪತ್ರ ಸಲ್ಲಿಸಿ ಗೆದ್ದಿರುವ ನಿದರ್ಶನವಿದೆ’ ಎಂದು ಟಾಂಗ್ ನೀಡಿದರು.

ಜನ ತೀರ್ಮಾನಿಸುತ್ತಾರೆ: ‘ಡಿ.ಕೆ. ಸುರೇಶ್ ಬೇಕೋ ಅಥವಾ ವೈಟ್ ಕಾಲರ್ ವ್ಯಕ್ತಿ ಬೇಕೋ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯಿಸಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ‘ವೈಟ್ ಕಾಲರ್ ಬಂದರೆ ಏನು ಪ್ರಯೋಜನ ಎಂದು ಜನ ಈ ಚುನಾವಣೆಯಲ್ಲಿ ತೋರಿಸುತ್ತಾರೆ’ ಎಂದು ತಿರುಗೇಟು ನೀಡಿದರು.

‘₹593 ಕೋಟಿ ಆಸ್ತಿ ಘೋಷಿಸಿಕೊಂಡಿರುವ ಸುರೇಶ್ ಅವರ ಆದಾಯ 12 ವರ್ಷಗಳ ಹಿಂದೆ ಎಷ್ಟಿತ್ತು? ಈಗ ಎಷ್ಟಿದೆ? ತಿಂಗಳಿಗೆ ₹4 ಕೋಟಿ ಸಂಪಾದನೆ ಎಂದು ಆಸ್ತಿ ವಿವರದಲ್ಲಿ ಬಹಿರಂಗಪಡಿಸಿದ್ದಾರೆ. ಇದರಲ್ಲೇ ಯಾರು ಪ್ರಾಮಾಣಿಕರು ಎಂಬುದು ಗೊತ್ತಾಗುತ್ತದೆ. ಮಂಜುನಾಥ್ ಪರವಾಗಿ ಜನರೇ ಎದ್ದು ನಿಂತಿದ್ದಾರೆ. ಭ್ರಷ್ಟ ಸಂಸದ ಬೇಕಾ? ಅಥವಾ ಸೀದಾ ಸಾದಾ ವ್ಯಕ್ತಿತ್ವದ ಮಂಜುನಾಥ್ ಬೇಕಾ ಎಂಬುದನ್ನು ಜನ ತೀರ್ಮಾನಿಸುತ್ತಾರೆ’ ಎಂದು ಹೇಳಿದರು.

‘ಗೊಂದಲ ಸೃಷ್ಟಿಯಾಗದು’

‘ಚುನಾವಣಾ ಕಣದಲ್ಲಿ ಮತ್ತೊಬ್ಬ ಡಾ. ಸಿ.ಎನ್ ಮಂಜುನಾಥ್ ಸ್ಪರ್ಧೆ’ ಕುರಿತು ಪ್ರತಿಕ್ರಿಯಿಸಿದ ಅವರು, ‘ಚುನಾವಣೆ ಸಂದರ್ಭದಲ್ಲಿ ತೀವ್ರ ಪೈಪೋಟಿ ಇರುವೆಡೆ ಇದೆಲ್ಲಾ ಸಾಮಾನ್ಯ. ನಾನು ಬಿಜೆಪಿಯಿಂದ ಸ್ಪರ್ಧಿಸಿದ್ದೇನೆ. ಹಾಗಾಗಿ, ಬೇರೆಯವರ ಸ್ಪರ್ಧೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಅವರ ಸ್ಪರ್ಧೆಯಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುವುದಿಲ್ಲ’ ಎಂದು ಡಾ. ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT