ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಬಿಜೆಪಿ ಮೈತ್ರಿ ಬಿಡಬೇಕಿತ್ತು: ಸಲೀಂ ಅಹಮ್ಮದ್‌

Published 2 ಮೇ 2024, 9:57 IST
Last Updated 2 ಮೇ 2024, 9:57 IST
ಅಕ್ಷರ ಗಾತ್ರ

ಬೀದರ್‌: ‘ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣನವರ ಪೆನ್‌ಡ್ರೈವ್‌ ಘಟನೆ ನಂತರ ಬಿಜೆಪಿ, ಜೆಡಿಎಸ್‌ ಪಕ್ಷದೊಂದಿಗಿನ ಮೈತ್ರಿ ಬಿಡಬೇಕಿತ್ತು’ ಎಂದು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್‌ ಹೇಳಿದರು.

ಬಿಜೆಪಿಯವರು ಬೇಟಿ ಬಚಾವೋ, ಬೇಟಿ ಪಡಾವೋ ಅಂತಾರೆ. ಆದರೆ, ಇದುವರೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಷಾ ಅವರನ್ನು ಘಟನೆಯನ್ನು ಖಂಡಿಸಿಲ್ಲ. ಕನಿಷ್ಠ ಪ್ರಜ್ವಲ್‌ ಬಂಧನಕ್ಕಾದರೂ ಕ್ರಮ ಕೈಗೊಳ್ಳಬೇಕಿತ್ತು ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜ್ವಲ್‌ ಪ್ರಕರಣದಿಂದ ಇಡೀ ದೇಶ ತಲೆ ತಗ್ಗಿಸುವಂತಾಗಿದೆ. ಇದರಲ್ಲಿ ರಾಜಕೀಯ ಮಾಡಬಾರದು. ಪ್ರಜ್ವಲ್‌ ರೇವಣ್ಣ ಹೊರದೇಶಕ್ಕೆ ಹೋಗಲು ಕ್ಲಿಯರೆನ್ಸ್‌ ಕೊಟ್ಟವರ್‍ಯಾರು? ಅವರ ವಿರುದ್ಧವೂ ಕ್ರಮ ಜರುಗಿಸಬೇಕು. ಪ್ರಜ್ವಲ್‌ ಪ್ರಕರಣದ ಕುರಿತು ಮೋದಿ, ಅಮಿತ್‌ ಷಾ ಅವರಿಗೆ ಮುಂಚೆಯೇ ವಿಷಯ ಗೊತ್ತಿತ್ತು. ಹೀಗಿದ್ದು ಅವರು ಜೆಡಿಎಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು ಎಂದು ಆರೋಪಿಸಿದರು.

ಬರ ಪರಿಹಾರದ ವಿಷಯದಲ್ಲಿ ರಾಜ್ಯದ 25 ಬಿಜೆಪಿ ಸಂಸದರು, ಐದು ಜನ ಕೇಂದ್ರ ಸಚಿವರು ಒಮ್ಮೆಯೂ ಧ್ವನಿ ಎತ್ತಲಿಲ್ಲ. ಮೋದಿ ಎದುರು ನಿಂತುಕೊಂಡು ಮಾತನಾಡಲು ರಾಜ್ಯದ ಸಂಸದರಿಗೆ ಮೀಟರ್‌ ಇಲ್ಲ. ಸುಪ್ರೀಂಕೋರ್ಟ್‌ನಿಂದ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ. ಜನ ಕೂಡ ಆಶೀರ್ವದಿಸುವರು. ಈ ಸಲ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭರವಸೆ ಇದೆ ಎಂದು ಹೇಳಿದರು.

ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಯಾವ ಘನ ಕಾರ್ಯ ಮಾಡಿದೆಯೆಂದು ಜನ ಅವರಿಗೆ ಮತ ಕೊಡುತ್ತಾರೆ? ಎಲ್ಲದರ ಬೆಲೆ ಹೆಚ್ಚಾಗಿದೆ. ಜನ ಬಿಜೆಪಿಯಿಂದ ಭ್ರಮನಿರಸನಗೊಂಡಿದ್ದಾರೆ. ಬದಲಾವಣೆ ಬಯಸಿದ್ದಾರೆ. ಮೋದಿ ಇಡೀ ಜಗತ್ತು ಸುತ್ತಾಡಿದರೆ ಹೊರತು ಜನೋಪಯೋಗಿ ಕೆಲಸ ಮಾಡಲಿಲ್ಲ. 70 ವರ್ಷಗಳ ಶಾಂತಿ, ನೆಮ್ಮದಿ ದೇಶದಲ್ಲಿ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಸುಳ್ಳು ಹೇಳುವುದಕ್ಕಾಗಿ ಮೋದಿ ಅವರಿಗೆ ‘ಆಸ್ಕರ್‌ ಅವಾರ್ಡ್‌’ ಕೊಡಬೇಕು. ಏಕೆಂದರೆ ಅವರು ಹೇಳಿದ ಯಾವ ಭರವಸೆಗಳನ್ನು ಕೂಡ ಈಡೇರಿಸಲಿಲ್ಲ. ಒಂದಾದ ನಂತರ ಒಂದು ಸುಳ್ಳು ಹೇಳುತ್ತಲೇ ಇದ್ದಾರೆ ಎಂದು ಟೀಕಿಸಿದರು.

‘ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 20 ಸ್ಥಾನ’

‘ನಮ್ಮ ಪಕ್ಷದ ಸರ್ವೇ ಪ್ರಕಾರ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ 20 ಸ್ಥಾನಗಳಲ್ಲಿ ಗೆಲ್ಲಲಿದೆ. ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಕೂಡ ಜಯ ಸಾಧಿಸಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಐದು ಗ್ಯಾರಂಟಿಗಳು ಶ್ರೀರಕ್ಷೆಯಾಗಲಿವೆ’ ಎಂದು ಸಲೀಂ ಅಹಮ್ಮದ್‌ ಭರವಸೆ ವ್ಯಕ್ತಪಡಿಸಿದರು.

ಇದು ಸುಳ್ಳು ಹಾಗೂ ಸತ್ಯದ ನಡುವಿನ ಚುನಾವಣೆ. ಕಾಂಗ್ರೆಸ್‌ ಸತ್ಯದ ಮೇಲೆ ಚುನಾವಣೆ ಸ್ಪರ್ಧಿಸುತ್ತಿದೆ. ನುಡಿದಂತೆ ನಡೆದ ಪಕ್ಷ ನಮ್ಮದು. ಕಾಂಗ್ರೆಸ್‌ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವವನ್ನು ನಂಬಿದೆ. ಅದು ಪಕ್ಷದ ಸಂಕಲ್ಪ ಕೂಡ ಹೌದು. ಆದರೆ, ಬಿಜೆಪಿ ಹತ್ತು ವರ್ಷಗಳಿಂದ ಸುಳ್ಳು ಹೇಳುತ್ತ ಕಾಲ ಕಳೆದಿದೆ. ಐದು ಗ್ಯಾರಂಟಿ ಜಾರಿಗೆ ತಂದಿರುವುದರಿಂದ ನಮಗೆ ಮತ ಕೇಳುವ ನೈತಿಕ ಹಕ್ಕಿದೆ. ಕಾಂಗ್ರೆಸ್‌ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT