ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಬಾವುಟ ನೀಡಿ ಶಿವಲಿಂಗೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಶಿವಕುಮಾರ್‌

Last Updated 9 ಏಪ್ರಿಲ್ 2023, 15:48 IST
ಅಕ್ಷರ ಗಾತ್ರ

ಅರಸೀಕೆರೆ: ‘ಶಿವಲಿಂಗೇಗೌಡರನ್ನು ಸುಮಾರು 10 ವರ್ಷಗಳಿಂದ ಕಾಂಗ್ರೆಸ್‌ಗೆ ಕರೆತರಲು ಪ್ರಯತ್ನಿಸಿದ್ದರೂ ಆಗಿರಲಿಲ್ಲ. ನನ್ನ ಮತ್ತು ಸಿದ್ದರಾಮಯ್ಯನವರ ಮಾತಿಗೂ ಒಪ್ಟಿರಲಿಲ್ಲ. ಅಂತಿಮವಾಗಿ ಕ್ಷೇತ್ರದ ಜನರ ಮಾತಿಗೆ ಬೆಲೆ ಕೊಟ್ಟು ಕಾಂಗ್ರೆಸ್ ಸೇರುತ್ತಿರುವುದು ಸಂತಸದ ವಿಷಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಇಲ್ಲಿನ ಜೇನುಕಲ್‌ ಕ್ರೀಡಾಂಗಣದಲ್ಲಿ ಭಾನುವಾರ ಕಾಂಗ್ರೆಸ್‌ ಬಾವುಟ ನೀಡಿ, ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

‘ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆ ಸಮಾವೇಶ ಎಂದರೆ ಇತಿಹಾಸ ಸೃಷ್ಟಿಯಾಗುತ್ತಿದೆ. ಕ್ಷೇತ್ರದ ಹೆಚ್ಚಿನ ಅಭಿವೃದ್ಧಿಗೆ ಕೆ.ಎಂ. ಶಿವಲಿಂಗೇಗೌಡ ಕಾಂಗ್ರೆಸ್ ಪಕ್ಷ ಸೇರುತ್ತಿರುವುದಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ’ ಎಂದರು.
‘ಹೋರಾಟ ಮಾಡುವವರು ಗೆದ್ದೇ ಗೆಲ್ಲುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ದೇವರು ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಳ್ಳುವುದು ಸಾಧನೆ. ನಂಬಿಕೆ ಮೇಲೆ ಎಲ್ಲರೂ ಬದುಕುತ್ತಿದ್ದೇವೆ. ದೇಶದ ಶಕ್ತಿ ಕಾಂಗ್ರೆಸ್. ಸಾಮಾಜಿಕ ಬದ್ದತೆ, ಬಡವರು ಮತ್ತು ರೈತರನ್ನು ಸಬಲರನ್ನಾಗಿಸುವುದು ಕಾಂಗ್ರೆಸ್ ಉದ್ದೇಶ. ರಾಜ್ಯದ ಹಿತಕ್ಕಾಗಿ ಸ್ವಾಭಿಮಾನ ಬದಿಗೊತ್ತಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಡುತ್ತಿದ್ದೇವೆ’ ಎಂದು ಹೇಳಿದರು.

‘ಮೇ 10 ಕೇವಲ ಮತದಾನ ದಿನವಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತರುವ ದಿನವಾಗಿದೆ. ಎಲ್ಲರೂ ತೀರ್ಮಾನಿಸುವ ದಿನ. ಕಮಲ ಕೆರೆಯಲ್ಲಿದ್ದರೆ ಚೆನ್ನ, ಜೆಡಿಎಸ್ ಹೊಲದಲ್ಲಿದ್ದರೆ ಚೆನ್ನ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಚೆನ್ನ. ಈ ನಿಟ್ಟಿನಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು.

‘ಯಾರೂ ಹಸಿದುಕೊಂಡು ಇರಬಾರದು ಎಂದು ಕಾಂಗ್ರೆಸ್ 10 ಕೆ.ಜಿ. ಅಕ್ಕಿ, 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ₹2 ಸಾವಿರ ನೀಡಲು ನಿರ್ಧರಿಸಿದ್ದೇವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಯಡಿ ನೀಡಿರುವ ಭರವಸೆಗಳನ್ನು ಈಡೇರಿಸಲು ಬದ್ದರಾಗಿದ್ದೇವೆ’ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ‘ಎತ್ತಿನಹೊಳೆ ನೀರಾವರಿ ಯೋಜನೆ ತಾಲ್ಲೂಕಿಗೆ ಕೊಟ್ಟಿದ್ದು ಕಾಂಗ್ರೆಸ್, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ. ಎತ್ತಿನಹೊಳೆ ನೀರಾವರಿ ಯೋಜನೆ ಹಣ ಲೂಟಿ ಮಾಡುವ ಯೋಜನೆಯಾಗಿದೆ. ಇದರ ಉದ್ಘಾಟನೆ ಸಮಾರಂಭಕ್ಕೆ ಹೋಗಬೇಡ ಎಂದು ನನ್ನ ಮೇಲೆ ಒತ್ತಡ ಹಾಕಿದ್ದರು. ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಜೆಡಿಎಸ್ ಶಾಸಕನಾಗಿ ನಾನೊಬ್ಬನೇ ಅಂದು ಎತ್ತಿನಹೊಳೆ ನೀರಾವರಿ ಯೋಜನೆ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದೆ. ಸದನದಲ್ಲಿ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಕ್ಕೆ ಜೆಡಿಎಸ್‌ನವರು ನನ್ನನ್ನು ವಿರೋಧಿಸಲು ಆರಂಭಿಸಿದರು’ ಎಂದು ತಿಳಿಸಿದರು.

‘ಬಿಜೆಪಿ ಭ್ರಷ್ಟಾಚಾರದ ಪಕ್ಷವಾಗಿದೆ. ಬಿಜೆಪಿಯಂಥ ನೀತಿಗೆಟ್ಟ ಸರ್ಕಾರ ಯಾವುದೂ ಇಲ್ಲ. ಬಿಜೆಪಿ ಅಭ್ಯರ್ಥಿ ಎಂದು ಬಂದಿರುವ ವ್ಯಕ್ತಿ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಿಲಿಂಡರ್ ಬೆಲೆ ಹಾಗೂ ಗೊಬ್ಬರದ ಬೆಲೆ ಏರಿಕೆ ಮಾಡುತ್ತಿದೆ. ರೈತರು ಹಾಗೂ ಸಾಮಾನ್ಯ ಜನರು, ಬಡವರನ್ನು ಸುಲಿಗೆ ಮಾಡುತ್ತಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಕೊಬ್ಬರಿ ಬೆಂಬಲ ಬೆಲೆ ನಿಗದಿಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಆದಾನಿ, ಅಂಬಾನಿ ಸೇರಿದಂತೆ ದೊಡ್ಡ ಕಾರ್ಪೋರೇಟ್ ಕಂಪೆನಿಗಳನ್ನು ಬೆಳೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಿನೇ ದಿನೇ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ’ ಎಂದು ಹೇಳಿದರು.

ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್, ಮಾಜಿ ಸಚಿವ ಜಮೀರ್ ಅಹ್ಮದ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷ ಶಿವಶಂಕರಸ್ವಾಮಿ, ಪಟೇಲ್ ಶಿವಪ್ಪ, ಸಿ.ಎಸ್ ಪುಟ್ಟೇಗೌಡ, ಗೋಪಾಲಸ್ವಾಮಿ, ಬಾಗೂರು ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್, ಮೆಟ್ರೊ ಬಾಬು, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ತಾರಾ ಚಂದನ್, ಜಿಲ್ಲಾ ಹಾಗೂ ತಾಲ್ಲೂಕು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಹಲವರು ಉಪಸ್ಥಿತರಿದ್ದರು.

‘ಶಿವಲಿಂಗೇಗೌಡರನ್ನು ಹಾಲಿಗೇ ಹಾಕುತ್ತೇವೆ’

‘ಕಾಂಗ್ರೆಸ್‌ ಪಕ್ಷ ನಮ್ಮೂರಿಗೆ ಬಂದು ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಅದೇ ರೀತಿ ನಿಮ್ಮೂರಿಗೆ ಬಂದು ಶಿವಲಿಂಗೇಗೌಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುತ್ತಿದ್ದೇವೆ. ನಿನಗೆ ನೀರಿಗೆ ಹಾಕಲ್ಲ, ಹಾಲಿಗೆ ಹಾಕೇ ಹಾಕುತ್ತೇವೆ. ನಿನ್ನ ಮತ್ತು ನಿನ್ನ ಕ್ಷೇತ್ರವನ್ನೂ ಕ್ಷೇಮವಾಗಿ ನೋಡಿಕೊಳ್ಳುತ್ತೇವೆ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಜೆಡಿಎಸ್‌ನಲ್ಲಿ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಹೇಳಿದ್ದನ್ನು ಕೇಳಿಕೊಂಡು ಇರಬೇಕು. ಪ್ರಶ್ನೆ ಮಾಡಿದವರನ್ನು ಜೆಡಿಎಸ್‌ನಿಂದ ಹೊರಗೆ ಹಾಕುತ್ತಾರೆ. ಶಿವಲಿಂಗೇಗೌಡರಿಗೂ ಅದನ್ನೇ ಮಾಡಿದ್ದು‘ ಎಂದರು..

ಶಿವಲಿಂಗೇಗೌಡರು ಜೆಡಿಎಸ್ ಶಾಸಕರಾಗಿದ್ದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡು ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಎತ್ತಿನಹೊಳೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿಸಿಕೊಂಡು ಜನರ ಸೇವೆ ಮಾಡಿದ್ದಾರೆ ಕ್ಷೇತ್ರದ ಜನತೆಗೆ ಕುಡಿಯುವ ನೀರನ್ನು ಕೊಟ್ಟಿದ್ದು ಶಿವಲಿಂಗೇಗೌಡ. ಎತ್ತಿನಹೊಳೆ ನೀರಾವರಿ ಯೋಜನೆ ಉದ್ಘಾಟನೆ ಸಮಾರಂಭಕ್ಕೆ ಶಿವಲಿಂಗೇಗೌಡ ಹೊರತಪಡಿಸಿ, ಉಳಿದ ಜೆಡಿಎಸ್ ಶಾಸಕರು ಸಮಾರಂಭಕ್ಕೆ ಬರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಎತ್ತಿನಹೊಳೆ ನೀರಾವರಿ ಯೋಜನೆ ವಿರೋಧಿಸಿದ್ದರು. ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದ ನಂತರ ಬಂದ ಬೇರೆ ಪಕ್ಷಗಳ ಸರ್ಕಾರಗಳು ಎತ್ತಿನಹೊಳೆ ಯೋಜನೆಗೆ ಹಣ ಮಂಜೂರು ಮಾಡುತ್ತಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT