ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ನಾಯಕ ಯು.ಟಿ.ಖಾದರ್‌ ಎಷ್ಟು ಕೋಟಿ ಆಸ್ತಿ ಒಡೆಯ?

ಶಾಸಕನ ಬಳಿ ವಾಹನವಿಲ್ಲ, ಪತ್ನಿ ಬಳಿ ಇದೆ ಕಾರು, ಟ್ಯಾಂಕರ್‌
Last Updated 19 ಏಪ್ರಿಲ್ 2023, 7:07 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು (ಉಳ್ಳಾಲ) ಕ್ಷೇತ್ರದ ಶಾಸಕ ಯು.ಟಿ.ಖಾದರ್‌ ₹ 3.41 ಕೋಟಿ ಆಸ್ತಿಯ ಒಡೆಯ. ಬಿಎಎಲ್‌ಎಲ್‌ಬಿ ಪದವೀಧರರಾಗಿರುವ ಖಾದರ್‌ (54 ವರ್ಷ) ವಕೀಲರಾಗಿದ್ದು, ಕೃಷಿ ಹಾಗೂ ಕಟ್ಟಡಗಳ ಬಾಡಿಗೆ ರೂಪದಲ್ಲಿ ವಾರ್ಷಿಕ ₹10.58 ಲಕ್ಷ ವರಮಾನ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಅವರ ಬಳಿ ₹ 60.24 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ₹ 2.81 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಲಮೀಸಾ ಬಳಿ ₹ 1.48 ಕೋಟಿ ಚರಾಸ್ತಿ ಹಾಗೂ ₹ 1.41 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಮಗಳು ಹವ್ವಾ ನಸೀಮಾ ಅವರ ಬಳಿ ₹ 67.32 ಲಕ್ಷ ಆಸ್ತಿ ಇದೆ. ಖಾದರ್‌ ಕುಟುಂಬದ ಒಟ್ಟು ಆಸ್ತಿಯ ಪ್ರಮಾಣ ₹ 6.98 ಕೋಟಿ.

ಅವರ ಪತ್ನಿ ಉದ್ಯಮಿಯಾಗಿದ್ದು ಬೆಂಗಳೂರಿನ ಹೈಪರ್ ಮಾರ್ಟ್‌ ಮಾಲ್‌ನ ಪಾಲುದಾರರು. ಟೆಕ್ನೋ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಹವ್ವಾ ಪೆಟ್ರೋಲ್‌ ಪಂಪ್‌ ಮಾಲಕಿ ಯಾಗಿದ್ದು, ವಾರ್ಷಿಕ ₹ 11.86 ಲಕ್ಷ ವರಮಾನ ಹೊಂದಿದ್ದಾರೆ.

ಖಾದರ್‌ ವಿರುದ್ಧ ಕೋವಿಡ್‌ ನಿರ್ಬಂಧ ಜಾರಿಯಲ್ಲಿದ್ದಾಗ ಮಾಸ್ಕ್‌ ಧರಿಸದಿರುವುದು, ಅಂತರ ಕಾಪಾಡದಿರುವುದು, ಪೊಲೀಸ್‌ ಆದೇಶ ಉಲ್ಲಂಘನೆಗೆ ಸಂಬಂಧಿಸಿ ಸಾತನೂರು, ರಾಮನಗರ ಹಾಗೂ ಬೆಂಗಳೂರಿನಲ್ಲಿ ಪ್ರಕರಣಗಳು ದಾಖಲಾಗಿವೆ.

ಖಾದರ್‌ ಬಳಿ ₹ 60ಸಾವಿರ ಹಾಗೂ ಪತ್ನಿ ಬಳಿ ₹ 94 ಸಾವಿರ ನಗದು ಇದೆ. ಠೇವಣಿ ಹಾಗೂ ಬಾಂಡ್‌ ರೂಪದಲ್ಲಿ ಖಾದರ್‌ ₹ 12.52 ಲಕ್ಷ ಹಾಗೂ ಅವರ ಪತ್ನಿ ₹ 3.64 ಲಕ್ಷ ಹೂಡಿಕೆ ಮಾಡಿದ್ದಾರೆ. ಖಾದರ್‌ ಸಂಸ್ಥೆಯೊಂದಕ್ಕೆ ₹ 25 ಲಕ್ಷ ಸಾಲ ನೀಡಿದ್ದಾರೆ.

ಖಾದರ್‌ ಬಳಿ ವಾಹನ ಹಾಗೂ ಚಿನ್ನ ಇಲ್ಲ. ಆದರೆ, ಅವರ ಪತ್ನಿ ಬಳಿ 75ಸಾವಿರ ಮೌಲ್ಯದ ಟುಸ್ಸಾನ್ ಕಾರ್‌, ₹22.80 ಲಕ್ಷ ಮೌಲ್ಯದ ಟಾಟಾ ಟ್ಯಾಂಕರ್‌ ಇದೆ. ಪತ್ನಿ ಬಳಿ ತಂದೆ ಉಡುಗೊರೆಯಾಗಿ ನೀಡಿದ ಅರ್ಧ ಕೆ.ಜಿ. ಚಿನ್ನಾಭರಣಗಳಿವೆ. ಅದರ ಮೌಲ್ಯ ₹ 28 ಲಕ್ಷ. ಮಗಳ ಬಳಿ ಉಡುಗೊರೆ ರೂಪದಲ್ಲಿ ಪಡೆದ 300 ಗ್ರಾಂ ಚಿನ್ನಾಭರಣಗಳಿದ್ದು, ಅದರ ಮೌಲ್ಯ ₹ 16.80 ಲಕ್ಷ. ಖಾದರ್‌ ಪತ್ನಿ ಹವ್ವಾ ಪೆಟ್ರೋಲ್‌ ಬಂಕ್‌ನಲ್ಲಿ ₹ 87 ಲಕ್ಷ ಹಾಗೂ ಮಗಳು ಬೆಂಗಳೂರಿನ ಹೈಪರ್‌ ಮಾರ್ಕೆಟ್‌ನಲ್ಲಿ ₹ 50 ಲಕ್ಷ ಹೂಡಿಕೆ ಮಾಡಿದ್ದಾರೆ.

ಖಾದರ್‌ ಅವರಿಗೆ ಪುಣಚ ಹಾಗೂ ಉಪ್ಪಳದಲ್ಲಿ ಒಟ್ಟು 3 ಎಕರೆ 27 ಸೆಂಟ್ಸ್‌ ಕೃಷಿ ಭೂಮಿಯಲ್ಲಿ ಪಾಲು ಇದೆ. ಅದರ ಮೌಲ್ಯ ₹ 6.21 ಲಕ್ಷ. ಅವರು ಪುಣಚ ಹಾಗೂ ಕೇರಳದ ಉಪ್ಪಳ ಮತ್ತು ಮಜಿಬೈಲ್‌ಗಳಲ್ಲಿ ಒಟ್ಟು 0.374 ಎಕರೆ ಕೃಷಿಯೇತರ ಜಮೀನು ಹೊಂದಿದ್ದು, ಅದರ ಮೌಲ್ಯ ₹ 1.73 ಕೋಟಿ. ಕದ್ರಿಯಲ್ಲಿ 0.28 ಸೆಂಟ್ಸ್‌ ಹಾಗೂ ಅತ್ತಾವರದಲ್ಲಿ 0.08 ಸೆಂಟ್ಸ್‌ ವಿಸ್ತೀರ್ಣದ ಜಮೀನು ಮತ್ತು ಕಟ್ಟಡ ಹೊಂದಿದ್ದು ಅದರ ಮೌಲ್ಯ ₹ 1.01 ಕೋಟಿ.

ಪತ್ನಿ ಲಮೀಸಾ ಕೇರಳದ ನೀಲೇಶ್ವರದಲ್ಲಿ 51 ಸೆಂಟ್ಸ್ ಕೃಷಿ ಭೂಮಿ (₹7.34 ಲಕ್ಷ), ಕೇರಳದ ಹೊಸದುರ್ಗ ಪೆರಿಯದಲ್ಲಿ 3 ಎಕರೆ 25 ಸೆಂಟ್ಸ್‌ ಕೃಷಿಯೇತರ ಜಮೀನು (₹27.5 ಲಕ್ಷ) ಹೊಂದಿದ್ದು, ಅವುಗಳ ಒಟ್ಟು ಮೌಲ್ಯ ₹46.74 ಲಕ್ಷ. ತೆಕ್ಕಿಲದಲ್ಲಿ 0.46 ಸೆಂಟ್ಸ್‌, ನಗರದ ಪದವು ಎಂಬಲ್ಲಿ 1,522 ಚ.ಅಡಿ ವಿಸ್ತೀರ್ಣದ ಫ್ಲ್ಯಾಟ್‌ ಹೊಂದಿದ್ದು ಅವುಗಳ ಒಟ್ಟು ಮೌಲ್ಯ ₹61.82 ಲಕ್ಷ.

ಖಾದರ್‌ ಅವರು 2018ರ ಚುನಾವಣೆ ಸಂದರ್ಭದಲ್ಲಿ ಕುಟುಂಬವು ₹ 2.47 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ ಎಂಬುದಾಗಿ ಘೋಷಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT