ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮತಗಟ್ಟೆಯ ಸರತಿ ಸಾಲಿನಲ್ಲಿ ನಿಂತ ಮತದಾರರಲ್ಲಿ ಯುವಜನರ ಸಂಖ್ಯೆ ತೀರಾ ಕಡಿಮೆ ಇತ್ತು.
ಮತದಾರರ ಪಟ್ಟಿಯಲ್ಲಿ ಹೆಸರಿನ ಗೊಂದಲ, ಬಹಿರಂಗವಾಗಿ ಪಕ್ಷಗಳ ಕಾರ್ಯಕರ್ತರು ಆಮಿಷವೊಡ್ಡಿದ್ದು, ಮತಯಂತ್ರಗಳ ತಾಂತ್ರಿಕ ದೋಷ ಸೇರಿದಂತೆ ಕೆಲವೆಡೆ ಸಮಸ್ಯೆಗಳು ಕಂಡುಬಂದರೆ, ಉಳಿದಂತೆ ಮತದಾನವು ಯಾವುದೇ ಆತಂಕವಿಲ್ಲದೇ ತಣ್ಣಗೆ ನಡೆಯಿತು.
ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೋತಿಹೊಸಹಳ್ಳಿ, ಇಂಪ್ಯಾಕ್ಟ್ ತಾಂತ್ರಿಕ ನಿರ್ವಹಣಾ ಶಾಲೆ, ಬ್ಯಾಟರಾಯನಪುರ ಸರ್ಕಾರಿ ಪ್ರಾಥಮಿಕ ಶಾಲೆ, ಥಣಿಸಂದ್ರ ಸರ್ಕಾರಿ ಮಾದರಿ ಪಾಠಶಾಲೆ, ರಾಮಮೂರ್ತಿ ನಗರ, ಜಯಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಕೆ.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಹೆಬ್ಬಾಳ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದ ಚಿತ್ರಣವಿದು.
ಬೆಳಿಗ್ಗೆ 9.30ರ ಸುಮಾರಿಗೆ ಕೋತಿಹೊಸಹಳ್ಳಿಯ ಮತಗಟ್ಟೆಯಲ್ಲಿ ಗೃಹಿಣಿಯರು ಗೃಹ ಕೆಲಸಗಳ ಒತ್ತಡದ ನಡುವೆಯೂ ಕಂದಮ್ಮಗಳನ್ನು ಎತ್ತಿಕೊಂಡೇ ಮತ ಚಲಾಯಿಸಿದರು. ಇತರರಿಗೆ ಪ್ರೇರಣೆಯಾದವರು: 70 ವರ್ಷದ ಅಂಧ ಬಸಪ್ಪ ಜಾಧವ ಎಂಬುವವರು ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾದರೆ, ಅಂಗವೈಕಲ್ಯದಿಂದ ಬಳಲುತ್ತಿರುವ 26ರ ಹರೆಯದ ಸಾಫ್ಟ್ವೇರ್ ಎಂಜಿನಿಯರ್ ಸುರೇಶ್ ಅವರು ಬ್ಯಾಟರಾಯನಪುರ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿ ಇತರರಲ್ಲಿ ಹುರುಪು ಮೂಡಿಸಿದರು.
ಹಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 26ರ ಸಂದೀಪ್, ಆಸ್ಪತ್ರೆಯಿಂದ ನೇರವಾಗಿ ಮಲ್ಲೇಶ್ವರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಬ್ಯಾಟರಾಯನಪುರ ಪ್ರಾಥಮಿಕ ಶಾಲೆಯ ಮತಗಟ್ಟೆಯ ಪಟ್ಟಿಯಲ್ಲಿ ಹೆಸರೇ ಕಾಣೆಯಾಗಿದ್ದರಿಂದ ಆತಂಕಗೊಂಡ 84ರ ಸುಬ್ಬೇಗೌಡ ಅವರು ಕೆಲಹೊತ್ತು ಕಾದರು. ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನನ್ನ ಇಡೀ ಕುಟುಂಬದ ಸದಸ್ಯರ ಹೆಸರು ಪಟ್ಟಿಯಲ್ಲಿದೆ. ಆದರೆ, ನನ್ನ ಹಾಗೂ ಮೊಮ್ಮಗಳ ಹೆಸರು ಮಾತ್ರ ನಾಪತ್ತೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಥಮ ಚುಂಬನಂ ದಂತ ಭಗ್ನಂ: ಪ್ರಥಮ ಬಾರಿ ಮತದಾನದ ಹಕ್ಕನ್ನು ಚಲಾಯಿಸುವ ಸಲುವಾಗಿ ಸಂಭ್ರಮದಿಂದ ಬಂದಿದ್ದ ಐಶ್ವರ್ಯ ಗಾಂಧಿ, ಸುನೀತಾ ದಾಮ್ಲೆ ಹಾಗೂ ಕಿರಣ್ ಪಾಟೀಲ ಅವರ ಹೆಸರು ಪಟ್ಟಿಯಲ್ಲಿ ಕಾಣಸಿಗದೇ ನಿರಾಶೆ ಅನುಭವಿಸಿದರು.
ಮತಗಟ್ಟೆ ನಾಪತ್ತೆ!: ‘ಬ್ಯಾಟರಾಯನಪುರದ ವಿವಿಧ ಮತಗಟ್ಟೆಗಳಿಗೆ ಅಲೆದಾಡಿದರೂ ನನ್ನ ಹೆಸರಿರುವ ಮತಗಟ್ಟೆ ಸಿಗುತ್ತಿಲ್ಲ. ನನ್ನ ಹೆಸರು 169ನೇ ಮತಗಟ್ಟೆಯಲ್ಲಿದೆ. ಆದರೆ, ಬ್ಯಾಟರಾಯನಪುರ ಕ್ಷೇತ್ರದ ವಿವಿಧ ಶಾಲೆಗಳಿಗೆ ಪರದಾಡಿದ್ದೇನೆ. ಮತಗಟ್ಟೆ ದೊರಕುತ್ತಿಲ್ಲ’ ಎಂದು ಕಾವೇರಿ ಬಡಾವಣೆಯ ನರಸಿಂಹ ದೂರಿದರು.
ಕೈಕೊಟ್ಟ ಮತಯಂತ್ರ: ಇಂಪ್ಯಾಕ್ಟ್ ತಾಂತ್ರಿಕ ನಿರ್ವಹಣೆ ಕಾಲೇಜಿನ 234ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮತಯಂತ್ರದ ದೋಷದಿಂದಾಗಿ ಅರ್ಧಗಂಟೆ ಸಿಬ್ಬಂದಿ ಹಾಗೂ ಮತದಾರರು ತೊಂದರೆ ಅನುಭವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.