ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ, ರಾಷ್ಟ್ರ ಗಮನ ಸೆಳೆದ 'ಬಾಗಲಕೋಟೆ' ಲೋಕಸಭಾ ಕ್ಷೇತ್ರ

1952ರಿಂದ 2019ರವರೆಗಿನ ಬಾಗಲಕೋಟೆ ಲೋಕಸಭಾ ಚುನಾವಣಾ ಇತಿಹಾಸ
Published 4 ಏಪ್ರಿಲ್ 2024, 5:55 IST
Last Updated 4 ಏಪ್ರಿಲ್ 2024, 5:55 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಜಯಪುರ ದಕ್ಷಿಣ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಹೆಸರಿನಲ್ಲಿ ಇಲ್ಲಿಯವರೆಗೆ ನಡೆದ ಚುನಾವಣೆಯ ಮೊದಲ ಹತ್ತು ಚುನಾವಣೆಗಳಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ನಂತರ ಜನತಾ ಪರಿವಾರದ ಕಡೆಗೆ ವಾಲಿತ್ತು. ಕಳೆದ ನಾಲ್ಕು ಚುನಾವಣೆಗಳಿಂದ ಬಿಜೆಪಿ ಭದ್ರಕೋಟೆಯಾಗಿ ಪರಿವರ್ತನೆಗೊಂಡಿದೆ.

1952ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಈಗಿನ ಬಾಗಲಕೋಟೆ ಕ್ಷೇತ್ರವನ್ನು ವಿಜಯಪುರ ದಕ್ಷಿಣ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಈಗಿನ ವಿಜಯಪುರ ಕ್ಷೇತ್ರವನ್ನು ವಿಜಯಪುರ ಉತ್ತರ ಎಂದು ಕರೆಯಲಾಗುತ್ತಿತ್ತು. ವಿಜಯಪುರ ದಕ್ಷಿಣ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಗುಳೇದಗುಡ್ಡ ಜೊತೆಗೆ ಅಂದಿನ ಧಾರವಾಡ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರಗಳಿದ್ದವು.

ಹಲವು ಚುನಾವಣೆಗಳ ನಂತರ ಬಾಗಲಕೋಟೆ ಲೋಕಸಭಾ ಕ್ಷೇತ್ರ ರಚನೆಯಾಯಿತು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಜೊತೆಗೆ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ಸೇರಿಕೊಂಡಿದೆ. 

ಇಲ್ಲಿಯವರೆಗೆ ನಡೆದ ಹದಿನೇಳು ಲೋಕಸಭಾ ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಒಂದು ಬಾರಿ ಜನತಾ ದಳ, ಒಂದು ಬಾರಿ ಲೋಕಶಕ್ತಿ, ನಾಲ್ಕು ಬಾರಿ ಬಿಜೆಪಿ ಜಯ ಸಾಧಿಸಿದೆ. ಮೊದಲ ಹತ್ತು ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋಲನ್ನೇ ಕಂಡಿರಲಿಲ್ಲ. 1996ರಲ್ಲಿ ಮೊದಲ ಬಾರಿಗೆ ಜನತಾ ದಳ, ಕಾಂಗ್ರೆಸ್‌ ಅನ್ನು ಸೋಲಿಸಿತ್ತು. 1998ರಲ್ಲಿ ಲೋಕಶಕ್ತಿ ಜಯಸಿತ್ತು. 1999ರಲ್ಲಿ ಕಾಂಗ್ರೆಸ್‌ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ತೆಗೆದುಕೊಂಡಿತು. ನಂತರದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಈ ಕ್ಷೇತ್ರ ವೀರಶೈವ ಲಿಂಗಾಯತ ಸಮಾಜದ ಪ್ರಾಬಲ್ಯ ಹೊಂದಿದೆ. ಪ್ರಮುಖ ಪಕ್ಷಗಳಿಂದ ಅದೇ ಸಮಾಜದವರನ್ನು ಕಣಕ್ಕಿಳಿಸುವುದರಿಂದ 16 ಬಾರಿ ವೀರಶೈವ ಲಿಂಗಾಯತರೇ ಆಯ್ಕೆಯಾಗಿದ್ದಾರೆ. ಒಂದು ಬಾರಿ ಮಾತ್ರ ಕುರುಬ ಸಮಾಜದವರು ಆಯ್ಕೆಯಾಗಿದ್ದರು. 

ಇಬ್ಬರಿಗೆ ಸಚಿವ ಸ್ಥಾನ: ಬಾಗಲಕೋಟೆಯಿಂದ ಆಯ್ಕೆಯಾದ ಲೋಕಸಭಾ ಸದಸ್ಯರ ಪೈಕಿ ವೀರೇಂದ್ರ ಪಾಟೀಲ, ಸಿದ್ದು ನ್ಯಾಮಗೌಡರ ಕೇಂದ್ರದಲ್ಲಿ ಸಚಿವರಾಗಿದ್ದರು. ಒಬ್ಬರು ಮಾಜಿ ಮುಖ್ಯಮಂತ್ರಿಯಾಗಿದ್ದರೆ, ಇನ್ನೊಬ್ಬರು ಮಾಜಿ ಮುಖ್ಯಮಂತ್ರಿಯನ್ನು ಸೋಲಿಸಿ ಮಂತ್ರಿಯಾಗಿದ್ದರು.

ಘಟಾನುಘಟಿಗಳ ಸೋಲು–ಗೆಲುವು
ಬಾಗಲಕೋಟೆ: ಈ ಲೋಕಸಭಾ ಕ್ಷೇತ್ರದಿಂದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸಿದ್ದರು ಎನ್ನುವುದು ವಿಶೇಷ. ಒಬ್ಬರು ಗೆಲುವು ಸಾಧಿಸಿದರೆ, ಇನ್ನೊಬ್ಬರು ಸೋಲು ಕಂಡಿದ್ದರು.  1980ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಸ್ಪರ್ಧಿಸಿದ್ದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹುಂಡೇಕಾರ ತೋಟಪ್ಪ ಮಲ್ಲಪ್ಪ ವಿರುದ್ಧ ಗೆಲುವು ಸಾಧಿಸಿದ್ದರು. ಅಲ್ಲದೇ ಕೇಂದ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 1991ರಲ್ಲಿ ಜನತಾ ದಳದಿಂದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸ್ಪರ್ಧಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿದ್ದು ನ್ಯಾಮಗೌಡರ ಗೆಲುವು ಸಾಧಿಸಿದ್ದರು. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಸಾವು, ಅಂದು ಮುಖ್ಯಮಂತ್ರಿಯಾಗಿದ್ದ ಎಸ್‌. ಬಂಗಾರಪ್ಪ ಅವರ ಪ್ರಯತ್ನದ ಫಲವಾಗಿ ಹೆಗಡೆ ಅವರಿಗೆ ಸೋಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT