ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾ ಬೆಂಬಲಿಸಿದ ಕಾಂಗ್ರೆಸ್‌ ಕಾರ್ಯಕರ್ತರು: ಮದ್ದೂರಿನಲ್ಲಿ ಸಭೆಯಲ್ಲಿ ನಿರ್ಣಯ

ಸಂಸದರ ವಿರುದ್ಧ ಆಕ್ರೋಶ
Last Updated 1 ಏಪ್ರಿಲ್ 2019, 14:19 IST
ಅಕ್ಷರ ಗಾತ್ರ

ಮದ್ದೂರು: ಮದ್ದೂರಿನ ಶಂಕರ್ ಪಾರ್ಟಿ ಹಾಲ್‌ನಲ್ಲಿ ನಡೆದ ಚಾಮನಹಳ್ಳಿ ಜಿ.ಪಂ. ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಸಭೆ ನಡೆಸಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರನ್ನು ಬೆಂಬಲಿಸಲು ಘೋಷಿಸಿದರು.

ಸಭೆಯಲ್ಲಿ ತೊರೆಚಾಕನಹಳ್ಳಿ ಶಂಕರೇಗೌಡ ಮಾತನಾಡಿ, ‘ಅಂಬರೀಷ್ ಅವರು ಬದುಕಿದ್ದಾಗ ಮಾತನಾಡದೇ ಇದ್ದವರು ಈಗ ಮಾತನಾಡುತ್ತಿದ್ದಾರೆ. ಸಂಸದ ಎಲ್.ಆರ್. ಶಿವರಾಮೇಗೌಡ ಅಂಬರೀಷ್‌ರ ಆಶೀರ್ವಾದ ಪಡೆದು ಆಯ್ಕೆಯಾಗಿ ಈಗ ಸುಮಲತಾ ಅಂಬರೀಷ್‌ರ ವಿರುದ್ಧವೇ ಮಾತನಾಡುತ್ತಿದ್ದಾರೆ. ಇದಲ್ಲದೆ ಸುಮಲತಾ ಅವರು ಮಂಡ್ಯದವರೇ ಅಲ್ಲ, ಗೌಡ್ತಿಯೇ ಅಲ್ಲ, ಆಂಧ್ರಪ್ರದೇಶದ ನಾಯ್ಡು ಜನಾಂಗದವರು ಎಂದು ಮತ್ತೆ ಹೇಳುವುದರ ಮುಖಾಂತರ ಅಂಬರೀಷ್ ಅಭಿಮಾನಿಗಳನ್ನು ಕೆರಳಿಸಿದ್ದಾರೆ. ಸುಮಲತಾ ಅವರು ಎಲ್ಲಿಯವರಾದರೇನು? ಮಂಡ್ಯದ ಗಂಡು ಎಂದೇ ಹೆಸರಾದ ಅಂಬರೀಷ್ ಮಡದಿಯಾದ ಮೇಲೆ ಅವರು ಈ ಜಿಲ್ಲೆಯ ಸೊಸೆಯಲ್ಲವೇ? ಇದನ್ನು ಮರೆತು ಮನಬಂದಂತೆ ಮಾತನಾಡುತ್ತಿದ್ದಾರೆ ಇದೆಲ್ಲದಕ್ಕೂ ಏ. 18ಕ್ಕೆ ನಡೆಯುವ ಚುನಾವಣೆ ಉತ್ತರ ನೀಡಲಿದೆ’ ಎಂದರು.

ಉಪ್ಪಿನಕೆರೆ ನೀಲಕಂಠೇಗೌಡ ಮಾತನಾಡಿ, ರಾಜ್ಯದಲ್ಲಿ ಕುಟುಂಬ ರಾಜಕಾರಣ ಮಿತಿ ಮೀರಿದೆ. ಇದಕ್ಕೆ ಈ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿದೆ, ಸುಮಲತಾರಿಗೆ ಆಗಿರುವ ಅಪಮಾನದ ಮಾತುಗಳನ್ನು ಸರಿ ಮಾಡಬೇಕೆಂದರೆ ಮುಂಬರುವ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಅಭಿಷೇಕ್ ಅವರು ಕಣಕ್ಕೆ ಇಳಿಯಬೇಕಾಗಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಶ್ ಮಾತನಾಡಿ, ಮದ್ದೂರಿನ ಎಳನೀರು ಮಾರುಕಟ್ಟೆಗೆ ಪ್ರಚಾರಕ್ಕೆ ಬಂದ ಸಚಿವ ಡಿ.ಸಿ.ತಮ್ಮಣ್ಣ ಅವರು ಇಲ್ಲಿನ ವರ್ತಕರು, ಹಮಾಲಿಗಳನ್ನು ಕುರಿತು ಬಳಸಿರುವ ಮಾತುಗಳಿಗೆ ಜನತೆ ಉತ್ತರ ನೀಡುತ್ತಾರೆ ಎಂದರು.

ಮುಖಂಡ ರಾಘವ್, ಕಾಂಗ್ರೆಸ್ ಕಾರ್ಯಕರ್ತರು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದರೆ, ಜಿಲ್ಲೆಯಲ್ಲಿ ಮುಂದಿನ ಇನ್ನಿಪ್ಪತ್ತು ವರ್ಷಗಳ ಕಾಲ ಜೆಡಿಎಸ್ ಪಕ್ಷದ ಗುಲಾಮರಾಗಬೇಕಾಗುತ್ತದೆ. ಆದ್ದರಿಂದ ಈ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ನೀಡಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಮಮತಾ, ಎಲ್.ಆರ್. ಶಿವರಾಮೇಗೌಡರ ವಿರುದ್ಧ ಕಿಡಿ ಕಾರಿದರು.

ಮದ್ದೂರು ಎಪಿಎಂಸಿಗೆ ಕಾಂಗ್ರೆಸ್‌ನ ನಾಗೇಶ್ ಅಧ್ಯಕ್ಷರಾಗಿದ್ದಾಗ ಹಾಗೂ ನಾನು ಉಪಾಧ್ಯಕ್ಷೆಯಾಗಿದ್ದಾಗ ₹ 12 ಕೋಟಿಗಳಷ್ಟು ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಇವೆಲ್ಲವನ್ನು ಮರೆತು ಸಾರಿಗೆ ಸಚಿವರು ತಾವೇ ಅಭಿವೃದ್ಧಿ ಕೆಲಸ ಮಾಡಿರುವುದಾಗಿ ಹೇಳುತ್ತಿದ್ದಾರೆ ಎಂದರು.

ಸಭೆಯಲ್ಲಿ ಮುಖಂಡರಾದ ಅವಿನಾಶ್, ಚಾವಿ, ರೈತ ಸಂಘದ ಶ್ರೀನಿವಾಸು, ಶಿಲ್ಪಾ, ಮದ್ದೂರು ತಾಲ್ಲೂಕು ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗೇಶ್, ಮಹೇಂದ್ರ ಮತ್ತಿತರರು ಭಾಗವಹಿಸಿದ್ದರು.

ಸಭೆಯ ಬಳಿಕ ‍‍ಹೊರಬಂದ ಕಾರ್ಯಕರ್ತರು ಸಂಸದ ಎಲ್.ಆರ್. ಶಿವರಾಮೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT