ಮಂಗಳವಾರ, ನವೆಂಬರ್ 19, 2019
23 °C

2020 ಅಕ್ಕಿಯ ಲಕ್ಕಿ ವರ್ಷ

Published:
Updated:
Prajavani

2020ರಲ್ಲಿ ನಟ ಅಕ್ಷಯ್‌ಕುಮಾರ್‌ ಅಭಿನಯದ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೌಸ್‌ಫುಲ್‌ 4, ಗುಡ್‌ ನ್ಯೂಸ್‌, ಸೂರ್ಯವಂಶಿ, ಲಕ್ಷ್ಮಿ ಬಾಂಬ್‌, ಪೃಥ್ವಿರಾಜ್‌... ಈ ಎಲ್ಲಾ ಚಿತ್ರಗಳು ಮುಂದಿನ ದೀಪಾವಳಿ, ಕ್ರಿಸ್‌ಮಸ್‌  ಹಾಗೂ 2020ರ ಹಬ್ಬದ ದಿನಗಳಲ್ಲಿ ಬಿಡುಗಡೆಯಾಗುತ್ತಿವೆ. ಹೀಗಾಗಿ 2019 ಹಾಗೂ 2020 ವರ್ಷಗಳನ್ನು ಅಕ್ಷಯ್‌ ಕುಮಾರ್‌ ಅವರ ಲಕ್ಕಿ ವರ್ಷ ಎಂದೇ ಬಿ–ಟೌನ್‌ ಮಾತನಾಡಿಕೊಳ್ಳುತ್ತಿದೆ.

ಬಾಲಿವುಡ್‌ನಲ್ಲಿ ಹಬ್ಬ ಹಾಗೂ ಮಹತ್ವದ ದಿನಗಳಂದು ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯಾಗುವುದು ಸಂಪ್ರದಾಯ. ದೀಪಾವಳಿ ಹಬ್ಬಕ್ಕೆ ಶಾರುಕ್‌ ಚಿತ್ರಗಳು ಬಿಡುಗಡೆಯಾದರೆ, ಈದ್‌ಗೆ ಸಲ್ಮಾನ್‌ ಖಾನ್‌ ಚಿತ್ರ ಬಿಡುಗಡೆಯಾಗುತ್ತದೆ. ಹಾಗೇ ಕ್ರಿಸ್‌ಮಸ್‌ಗೆ ಅಮಿರ್‌ ಖಾನ್‌ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿರುತ್ತಾರೆ.

ಅಕ್ಷಯ್‌ ಕುಮಾರ್‌ ಅಭಿನಯದ ಚಿತ್ರಗಳು ಮುಂದಿನ ದೀಪಾವಳಿ, ಈದ್‌, ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿವೆ. ಅಕ್ಟೋಬರ್‌ 25 ದೀಪಾವಳಿಗೆ ‘ಹೌಸ್‌ಫುಲ್‌ 4’, ಡಿಸೆಂಬರ್‌ 27ಕ್ಕೆ ‘ಗುಡ್‌ನ್ಯೂಸ್‌’, ಮೇ 22ಕ್ಕೆ ‘ಸೂರ್ಯವಂಶಿ’, ಈದ್‌ಗೆ ‘ಲಕ್ಷ್ಮಿಬಾಂಬ್‌’,  2020ರ ದೀಪಾವಳಿಗೆ ‘ಪೃಥ್ವಿರಾಜ್‌’,  ಕ್ರಿಸ್‌ಮಸ್‌ಗೆ ‘ಬಚ್ಚನ್‌ ಪಾಂಡೆ’ ಬಿಡುಗಡೆಯಾಗಲಿವೆ.

ಸಾಲು ಸಾಲು ಚಿತ್ರಗಳು ಹೀಗೆ ಬಿಡುಗಡೆಯಾಗುತ್ತಿರುವುದಕ್ಕೆ ‘ಇದು ನಂಬಲಸಾಧ್ಯ’ ಎಂದು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಈ ಚಿತ್ರಗಳು ಸಲ್ಮಾನ್‌, ಶಾರುಕ್‌, ಅಮಿರ್‌ ಖಾನ್‌ ಚಿತ್ರಗಳ ಜೊತೆ ಒಂದೇ ಸಮಯದಲ್ಲಿ ಬಿಡುಗಡೆಯಾದರೆ ಬಾಕ್ಸಾಫೀಸ್‌ ಗಳಿಕೆ ಮೇಲೆ ಪೆಟ್ಟು ಬೀಳಬಹುದು ಎಂಬ ಭಯ ಕೂಡ ಸಿನಿಮಾ ತಂಡಗಳದ್ದು.

ಮುಂದಿನ ದೀಪಾವಳಿಗೆ ಕೃತಿ ಸನೆನ್‌ ಹಾಗೂ ರಿತೇಶ್‌ ದೇಶಮುಖ್‌ ಜೊತೆ ಅಕ್ಷಯ್‌ ನಟಿಸಿರುವ ‘ಹೌಸ್‌ಫುಲ್‌ 4’ ಬಿಡುಗಡೆಯಾಗುತ್ತಿದೆ.

ಪ್ರತಿವರ್ಷ ದೀಪಾವಳಿಗೆ ಶಾರುಕ್‌ ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ ಕಳೆದ ಕ್ರಿಸ್‌ಮಸ್‌ಗೆ ಅವರ ಅಭಿನಯದ ‘ಜೀರೊ’ ಬಿಡುಗಡೆಯಾಗಿತ್ತು. ಅದು ಸೋತಿತ್ತು. ಅನಂತರ ಶಾರುಕ್‌ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಹಾಗಾಗಿ ಈ ದೀಪಾವಳಿಗೆ ಅವರ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ.

2020ರ ದೀಪಾವಳಿಗೆ ಅಕ್ಷಯ್‌ ಅಭಿನಯದ ‘ಪೃಥ್ವಿರಾಜ್‌’ ಬಿಡುಗಡೆಯಾಗುತ್ತಿದೆ. ಆದರೆ ಮುಂದಿನ ವರ್ಷದ ದೀಪಾವಳಿ ಇನ್ನೂ ದೂರವಿರುವುದರಿಂದ ಬೇರೆ ಯಾವ ಚಿತ್ರಗಳೂ ಇನ್ನು ಬಿಡುಗಡೆ ದಿನಾಂಕ ಘೋಷಣೆ ಮಾಡಿಲ್ಲ.

ಕ್ರಿಸ್‌ಮಸ್‌ಗೆ ಅಕ್ಷಯ್‌ ಕುಮಾರ್‌ ಅವರ ‘ಗುಡ್‌ನ್ಯೂಸ್‌’ ಬಿಡುಗಡೆಯಾಗುತ್ತಿದೆ. ಮಾರ್ಚ್‌ 27ಕ್ಕೆ ಈ ಚಿತ್ರ ಬಿಡುಗಡೆಯಾಗುತ್ತಿದೆ.  ಕ್ರಿಸ್‌ಮಸ್‌ಗೆ ಅಮಿರ್‌ ಖಾನ್‌ ಚಿತ್ರ ಬಿಡುಗಡೆಯಾಗುವುದು ಸಂಪ್ರದಾಯ. ಆದರೆ ಈ ಬಾರಿ ಅವರ ಚಿತ್ರ ತೆರೆ ಕಾಣುತ್ತಿಲ್ಲ. ಆದರೆ 2020ರ ಕ್ರಿಸ್‌ಮಸ್‌ಗೆ ಅಮಿರ್‌ ಅವರ ‘ಲಾಲ್‌ ಸಿಂಗ್‌ ಛಡ್ಡಾ’ ಬಿಡುಗಡೆಯಾಗಲಿದೆ.

ಈದ್‌ ಸಂದರ್ಭದಲ್ಲಿ ಸಲ್ಮಾನ್‌ ನಟನೆಯ ಯಾವುದಾದರೊಂದು ಚಿತ್ರ ಬಿಡುಗಡೆಯಾಗುತ್ತದೆ. ಆ ದಿನ ಬೇರೆ ಯಾವ ನಟರ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಮುಂದಿನ ಈದ್‌ಗೆ ಸಲ್ಮಾನ್‌ ‘ಕಿಕ್‌ 2’ ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ. ಅಕ್ಷಯ್‌ ಕುಮಾರ್‌ ಅವರ ‘ಲಕ್ಷ್ಮಿ ಬಾಂಬ್‌’ ಇದೇ ದಿನ ತೆರೆಗೆ ಬರಲಿದೆ.

2019ರಲ್ಲಿ ಬಿಡುಗಡೆಗೊಂಡಿರುವ ಅಕ್ಷಯ್‌ ಅಭಿನಯದ ಎಲ್ಲಾ ಚಿತ್ರಗಳು ಯಶಸ್ಸು ಗಳಿಸಿವೆ. ಅವರು ಘೋಷಿಸಿಕೊಂಡಿರುವ ಈ ಎಲ್ಲಾ ಚಿತ್ರಗಳು ಪೋಸ್ಟರ್‌ ಹಾಗೂ ಟೀಸರ್‌ಗಳಿಂದ  ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮೂಡಿಸಿವೆ.

ಬಾಕ್ಸಾಫೀಸಿನಲ್ಲಿ ಸಂಘರ್ಷ ನಡೆಯುವ ಸಾಧ್ಯತೆ ಇರುವುದರಿಂದ ಈ ಚಿತ್ರಗಳ ನಿರ್ಮಾಪಕರು ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವ ಸಾಧ್ಯತೆಯೂ ಇದೆ.

ಪ್ರತಿಕ್ರಿಯಿಸಿ (+)