ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

'ಕರುನಾಡ ಚಕ್ರವರ್ತಿ' ಶಿವರಾಜ್ ಕುಮಾರ್‌ಗೆ 60ನೇ ಜನ್ಮದಿನದ ಸಂಭ್ರಮ

ಸಾಲು ಸಾಲು ಚಿತ್ರಗಳ ಪೋಸ್ಟರ್‌ ರಿಲೀಸ್‌
Last Updated 12 ಜುಲೈ 2022, 7:19 IST
ಅಕ್ಷರ ಗಾತ್ರ

ಸೆಂಚುರಿ ಸ್ಟಾರ್‌, ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್‌ ಅವರಿಗೆ ಇಂದು(ಜುಲೈ 12) 60ನೇ ಜನ್ಮದಿನದ ಸಂಭ್ರಮ. ತಮ್ಮ, ನಟ ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ಕಾರಣದಿಂದ ಈ ವರ್ಷ ಸರಳವಾಗಿ ಜನ್ಮದಿನವನ್ನು ಶಿವರಾಜ್‌ಕುಮಾರ್‌ ಅವರು ಆಚರಿಸಿಕೊಂಡಿದ್ದಾರೆ. ಚಂದನವನದ ‘ಶಿವಣ್ಣ’ನಿಗೆ ನೂರಾರು ಕಲಾವಿದರು ಶುಭಾಶಯ ಕೋರಿದ್ದಾರೆ. ಜನ್ಮದಿನದ ಕಾಮನ್‌ ಡಿಪಿಯನ್ನೂ ನಿರ್ದೇಶಕ ಯೋಗರಾಜ್‌ ಭಟ್‌ ಪೋಸ್ಟ್‌ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್‌ಕುಮಾರ್‌ ಅವರ ಹೊಸ ಚಿತ್ರಗಳ ಪೋಸ್ಟರ್‌ಗಳೂ ರಿಲೀಸ್‌ ಆಗಿವೆ.

1986..ಶಿವರಾಜ್‌ಕುಮಾರ್‌ ಅವರು ನಾಯಕನಾಗಿ ತೆರೆ ಮೇಲೆ ಹೆಜ್ಜೆ ಇಟ್ಟ ವರ್ಷ.‘ಆನಂದ್‌’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಶಿವರಾಜ್‌ಕುಮಾರ್‌ ಈಗ ಸ್ಯಾಂಡಲ್‌ವುಡ್‌ ನೇತಾರ. ತಮ್ಮ ಮೊದಲ ಚಿತ್ರದ ಬಗ್ಗೆ ‘ಪ್ರಜಾವಾಣಿ’ ಜೊತೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಚಿತ್ರದ ಮುಹೂರ್ತ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿತ್ತು. ಅಪ್ಪಾಜಿ, ಅಮ್ಮ, ಉದಯ್‌ಶಂಕರ್‌ ಸೇರಿದಂತೆ ಇಡೀ ಗಾಂಧಿನಗರವೇ ಅಲ್ಲಿತ್ತು. ಮೊದಲ ದೃಶ್ಯದ ಚಿತ್ರೀಕರಣದ ಬಳಿಕ, ನಾನು ಅತ್ತಿದ್ದೆ. 1986ರಿಂದ ಇಲ್ಲಿಯವರೆಗಿನ ಪಯಣವನ್ನು ತಿರುಗಿ ನೋಡಿದರೆ ವರ್ಷ ಹೇಗೆ ಕಳೆಯಿತು ಎನ್ನುವುದೇ ತಿಳಿಯುವುದಿಲ್ಲ. ಜನರು ಪ್ರೀತಿಯಿಂದ ಈ ರೀತಿ ಸಂಭ್ರಮ ಆಚರಿಸುತ್ತಾರೆ. 35 ವರ್ಷ ಕಳೆಯಿತು, 50 ವರ್ಷದವರೆಗೂ ಸಿನಿಮಾ ಮಾಡೋಣ’ ಎಂದಿದ್ದರು.

‘ಆನಂದ್‌’ ಯಶಸ್ಸಿನ ಬೆನ್ನಲ್ಲೇ ‘ರಥಸಪ್ತಮಿ’, ‘ಮನಮೆಚ್ಚಿದ ಹುಡುಗಿ’ ಚಿತ್ರಗಳೂ ಹಿಟ್‌ ಆದವು. ಹೀಗೆ ‘ಹ್ಯಾಟ್ರಿಕ್‌ ಹೀರೊ’ ಆದ ‘ಶಿವಣ್ಣ’, ಈ 36 ವರ್ಷದ ಸಿನಿಪಯಣದಲ್ಲಿ ‘ಸೆಂಚುರಿ’ ಹೊಡೆದು ದ್ವಿಶತಕ ಬಾರಿಸಲು ಸಜ್ಜಾಗಿದ್ದಾರೆ. ಅವರು ಒಪ್ಪಿಕೊಳ್ಳುತ್ತಿರುವ ಚಿತ್ರಗಳ ಸಂಖ್ಯೆಯೇ ಇದಕ್ಕೆ ಸಾಕ್ಷ್ಯ.

‘ಘೋಸ್ಟ್‌’ ಪೋಸ್ಟರ್‌ ರಿಲೀಸ್‌ ಮಾಡಿದ ಕಿಚ್ಚ ಸುದೀಪ್‌
ಸಂದೇಶ್ ಪ್ರೊಡಕ್ಷನ್ಸ್‌ನಡಿ ಮೂಡಿಬರಲಿರುವ ಶಿವರಾಜ್‌ಕುಮಾರ್ ಅವರ ಹೊಸ ಚಿತ್ರಕ್ಕೆ, ‘ಬೀರ್ ಬಲ್’, ‘ಓಲ್ಡ್ ಮಾಂಕ್’ ಸಿನಿಮಾ ಖ್ಯಾತಿಯ ನಟ ಶ್ರೀನಿ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಚಿತ್ರಕ್ಕೆ ‘ಘೋಸ್ಟ್‌’ ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ. ನಟ ಕಿಚ್ಚ ಸುದೀಪ್‌ ಮಂಗಳವಾರ, ತಮ್ಮ ಟ್ವಿಟರ್‌ ಖಾತೆಯಲ್ಲಿ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿ ಶಿವರಾಜ್‌ಕುಮಾರ್‌ ಅವರಿಗೆ ಜನ್ಮದಿನದ ಶುಭಹಾರೈಸಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆಕಾಣಲಿದೆ. ಪಕ್ಕಾ ಆ್ಯಕ್ಷನ್‌ ಸಿನಿಮಾ ಇದಾಗಿದ್ದು, ವಿಭಿನ್ನ ಲುಕ್‌ನಲ್ಲಿ ಶಿವರಾಜ್‌ಕುಮಾರ್‌ ಕಾಣಿಸಿಕೊಂಡಿದ್ದಾರೆ.

ನಿರ್ದೇಶನಕ್ಕಿಳಿದ ಅರ್ಜುನ್‌ ಜನ್ಯ
ಚಂದನವನದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಶೀಘ್ರದಲ್ಲೇ ಶಿವರಾಜ್‌ಕುಮಾರ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ‘45’ ಎಂಬ ಶೀರ್ಷಿಕೆಯಡಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕಥೆಯೂ ಅರ್ಜುನ್‌ ಜನ್ಯ ಅವರದ್ದೇ.

‘ಸಾಗ ಆಫ್‌ ಅಶ್ವತ್ಥಾಮ’
ಶಿವರಾಜ್‌ಕುಮಾರ್ ಅವರ 127ನೇ ಚಿತ್ರಕ್ಕೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ನಿರ್ದೇಶಕ ಸಚಿನ್ ರವಿ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಪೌರಾಣಿಕ ಪಾತ್ರವೊಂದನ್ನು ಆಧರಿಸಿ ಸಚಿನ್‌ ಚಿತ್ರಕಥೆ ಹೆಣೆದಿದ್ದಾರೆ. ಚಿತ್ರಕ್ಕೆ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಮಹಾಭಾರತದ ವೀರರಲ್ಲಿ ಒಬ್ಬ ಅಶ್ವತ್ಥಾಮನ ಸಾಹಸಗಾಥೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಲಿದ್ದು, ಸಿನಿಮಾದ ಶೀರ್ಷಿಕೆ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಆ್ಯಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಅಮರತ್ವ ಪಡೆದಿರುವ ಅಶ್ವತ್ಥಾಮನ ಸುತ್ತಾ ಸಾಗುವ ಇಡೀ ಕಥೆಯಲ್ಲಿ ಶಿವರಾಜ್‌ಕುಮಾರ್‌ ಸೂಪರ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಚಿನ್, ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತಿದ್ದು, ತಮ್ಮದೇ ಹೋಮ್ ಬ್ಯಾನರ್‌ನಲ್ಲಿ ಕಾರ್ಪೊರೇಟ್ ಕಂಪನಿಯೊಂದರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.

ಸದ್ಯಕ್ಕೆ, ತಮ್ಮ 125ನೇ ಸಿನಿಮಾ ‘ವೇದ’ದ ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್‌ ತೊಡಗಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್‌ ನಟನೆಯ 124ನೇ ಸಿನಿಮಾ ‘ನೀ ಸಿಗೋವರೆಗೂ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಾಮ್ ಧುಲಿಪುಡಿ ಇದನ್ನು ನಿರ್ದೇಶಿಸಿದ್ದಾರೆ. ಭಾವನಾತ್ಮಕ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌, ಸೇನಾ ಅಧಿಕಾರಿ ಸೇರಿದಂತೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದರ ಜೊತೆಗೆ ರಾಕ್‌ಲೈನ್ ಎಂಟರ್‌ಟೈನ್ಮೆಂಟ್‌ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ ಚಿತ್ರವೊಂದರಲ್ಲೂ ಶಿವರಾಜ್‌ಕುಮಾರ್‌ ನಟಿಸುತ್ತಿದ್ದು, ಇದಕ್ಕೆ ಯೋಗರಾಜ್‌ ಭಟ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಬಹುಭಾಷಾ ನಟ ಪ್ರಭುದೇವ ಅವರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT