ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಷೇಕ್‌ ಅಂಬರೀಶ್‌ ಸಂದರ್ಶನ | ಅಚ್ಚರಿಯ ಗುಚ್ಛ ಈ ‘ಬ್ಯಾಡ್‌ ಮ್ಯಾನರ್ಸ್‌’

Published 24 ನವೆಂಬರ್ 2023, 0:02 IST
Last Updated 24 ನವೆಂಬರ್ 2023, 0:02 IST
ಅಕ್ಷರ ಗಾತ್ರ

‘ದುನಿಯಾ’ ಸೂರಿ ನಿರ್ದೇಶಿಸಿ, ಅಭಿಷೇಕ್‌ ಅಂಬರೀಶ್‌ ನಾಯಕನಾಗಿರುವ ‘ಬ್ಯಾಡ್‌ ಮ್ಯಾನರ್ಸಸ್‌’ ಚಿತ್ರ ಇಂದು (ನ.24) ತೆರೆ ಕಾಣುತ್ತಿದೆ. ಚಿತ್ರ ಹಾಗೂ ಪಾತ್ರದ ಕುರಿತು ಅಭಿಷೇಕ್‌ ಮಾತಿಗಿಳಿದರು...

ಪ್ರ

ಚಿತ್ರದಲ್ಲಿ ನಿಮ್ಮ ಪಾತ್ರವೇನು?

ಪಾತ್ರದ ಹೆಸರು ‘ರುದ್ರ’. ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿರುತ್ತೇನೆ. ತಂದೆಯಿಂದ ಸಿಕ್ಕ ಕೆಲಸ ಅದಾಗಿರುತ್ತದೆ. ಆಗ ಗನ್‌, ಕಂಟ್ರಿಮೇಡ್‌ ವೆಪನ್‌, ಅಕ್ರಮ ಆಯುಧ ಜಗತ್ತಿನ ಪರಿಚಯವಾಗುತ್ತದೆ. ಇವು ನಾಯಕನ ಮೇಲೆ ಹೇಗೆಲ್ಲ ಪ್ರಭಾವ ಬೀರುತ್ತವೆ, ಇದರಿಂದ ಏನೆಲ್ಲ ಆಗುತ್ತದೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು. 

ಪ್ರ

ಸೂರಿ ಅವರ ಬೇರೆ ಸಿನಿಮಾಗಳಂತೆ ಇದರಲ್ಲಿಯೂ ಅಚ್ಚರಿಗಳಿವಾ?

ಇಲ್ಲಿ ಅವರ ಹಿಂದಿನ ಸಿನಿಮಾಗಳಂತೆ ಯಾವುದೋ ಒಂದು ಪಾತ್ರ ಬಂದು ಅಚ್ಚರಿ ನೀಡುವುದಿಲ್ಲ. ಇಡೀ ಸಿನಿಮಾವೇ ಒಂದು ರೀತಿ ಅಚ್ಚರಿಯ ಗುಚ್ಛ. ಕಥೆ, ಚಿತ್ರಕಥೆ, ಕಥೆ ಹೇಳಿಕೊಂಡು ಹೋಗಿರುವ ರೀತಿ ಎಲ್ಲವೂ ಭಿನ್ನ. ಆ್ಯಕ್ಷನ್‌ಗಳು ಕೂಡ ಮಾಮೂಲಿಯಾಗಿಲ್ಲ. ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದಷ್ಟು ಸಂದೇಶ ನೀಡುತ್ತ ಹೋಗುತ್ತದೆ. ಸಾಕಷ್ಟು ಹೊಸ ಪ್ರತಿಭೆಗಳು ಸಿನಿಮಾದಲ್ಲಿದ್ದಾರೆ. ಈ ಸಿನಿಮಾದಿಂದ ಅನೇಕ ಹೊಸಬರು ಮುನ್ನೆಲೆಗೆ ಬರುತ್ತಾರೆ.

ಪ್ರ

ಸೂರಿ ಅವರ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ನನಗೆ ಎರಡನೇ ಸಿನಿಮಾದಲ್ಲಿಯೇ ಸೂರಿ ಅವರಂತಹ ನಿರ್ದೇಶಕರು ಸಿಕ್ಕಿರುವುದು ಒಂದು ರೀತಿ ಅದೃಷ್ಟ ಮತ್ತು ಅವರು ನನ್ನ ಕೆಲಸದ ಮೇಲಿಟ್ಟಿರುವ ನಂಬಿಕೆಗೆ ಇದು ಸಾಕ್ಷಿ. ಅವರು ಕಲ್ಟ್‌–ಕ್ಲಾಸ್‌ ಸಿನಿಮಾಗಳಿಗೆ ಹೆಸರಾದವರು. ಅಂಬರೀಷ್‌ ಅವರಿಂದ ಹಿಡಿದು ಅಪ್ಪು ಅವರವರೆಗೆ ದೊಡ್ಡ ನಟರಿಗೆ ಸಿನಿಮಾ ಮಾಡಿದ್ದಾರೆ. ಅವರ ಸಿನಿಮಾಗಳೆಂದರೆ ನಿರೀಕ್ಷೆ ಸಹಜ. ಅವರದ್ದೇ ಆದ ಒಂದು ಪ್ರೇಕ್ಷಕ ವರ್ಗವಿದೆ. ಈ ಸಿನಿಮಾ ನನ್ನ ಪಾಲಿಗೆ ಒಂದು ಅನುಭವ, ಕಲಿಕೆ ಎರಡೂ ಹೌದು. 

ಪ್ರ

ಈ ಸಿನಿಮಾ ಮುಗಿಸಲು ಬಹಳ ಸಮಯ ತೆಗೆದುಕೊಂಡಿದ್ದು ಏಕೆ?

ಲಾಕ್‌ಡೌನ್‌ಗೆ ಮುಂಚೆ ಪ್ರಾರಂಭವಾದ ಸಿನಿಮಾ ಇದು. ಕೋವಿಡ್‌ನಿಂದಾಗಿ ಚಿತ್ರೀಕರಣ ತಡವಾಯ್ತು. ಸಾಕಷ್ಟು ನೈಜ ಸ್ಥಳಗಳನ್ನು ಕಥೆ ಬೇಡುತ್ತದೆ. ಬೆಂಗಳೂರು, ಮೈಸೂರು, ಚಾಮರಾಜನಗರ, ಕನಕಪುರಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಂದೇ ಸಲಕ್ಕೆ 250–300 ಕಲಾವಿದರು ಬೇಕಾಗಿತ್ತು. ಹೀಗಾಗಿ ಕೋವಿಡ್‌ ಸಮಸ್ಯೆಗೆ ಪರಿಹಾರ ಸಿಕ್ಕ ನಂತರ ಈ ಭಾಗಗಳನ್ನು ಚಿತ್ರೀಕರಣ ಮಾಡಿದೆವು. ಇದರಿಂದಾಗಿ ಎಲ್ಲ ಪ್ರಕ್ರಿಯೆಗಳು ತಡವಾದವು.

ಪ್ರ

ಇಲ್ಲಿಯತನಕ ಸಿನಿಮಾ ಪಯಣ ಹೇಗಿತ್ತು? ನಿಮ್ಮ ಮುಂದಿನ ಸಿನಿಮಾಗಳು ಯಾವುವು?

ನಾನು ಈಗಿನ್ನೂ ಅಂಬೆಗಾಲಿಡುತ್ತಿರುವವನು. ‘ಅಮರ್‌’ ಮಾತ್ರ ತೆರೆಗೆ ಬಂದಿದೆ. ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ. ‘ಹೆಬ್ಬುಲಿ’ ಕೃಷ್ಣ ನಿರ್ದೇಶನದಲ್ಲಿ ‘ಕಾಳಿ’ ಸಿನಿಮಾ ಘೋಷಣೆಯಾಗಿದೆ. ‘ಅಯೋಗ್ಯ’ ಚಿತ್ರದ ಮಹೇಶ್‌ ಕುಮಾರ್‌ ನಿರ್ದೇಶನ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಸಿನಿಮಾವೊಂದು ಸಿದ್ಧಗೊಳ್ಳುತ್ತಿದೆ. ಇದರ ಹೊರತಾಗಿ ಇನ್ನೊಂದೆರಡು ಸಿನಿಮಾಗಳು ಕಥಾರಚನೆಯ ಹಂತದಲ್ಲಿವೆ.

ಪ್ರ

ಮುಂದಿನ ದಿನಗಳಲ್ಲಿ ಆ್ಯಕ್ಷನ್‌ ಸಿನಿಮಾಗಳನ್ನು ಮಾತ್ರ ಎದುರು ನೋಡುತ್ತಿದ್ದೀರಾ?

ಹಾಗೇನಿಲ್ಲ. ಒಳ್ಳೆಯ ಕಥೆ ಮುಖ್ಯ. ಮೊದಲನೆ ಸಿನಿಮಾ ‘ಅಮರ್‌’ಗೆ ಹೋಲಿಸಿದರೆ ‘ಬ್ಯಾಡ್‌ ಮ್ಯಾನರ್ಸ್‌’ ಬೇರೆಯದೇ ಜಾನರ್‌ ಸಿನಿಮಾ. ಒಂದೇ ಜಾನರ್‌ನಲ್ಲಿ ಇರುವುದಕ್ಕೆ ಇಷ್ಟವಿಲ್ಲ. ಜನರು ಚಿತ್ರಮಂದಿರಕ್ಕೆ ಬರುವುದೇ ಮನರಂಜನೆಗಾಗಿ. ಎರಡೂಕಾಲು ಗಂಟೆ ಜನ ಎಲ್ಲವನ್ನೂ ಮರೆತು ಎಂಜಾಯ್‌ ಮಾಡುವಂತಹ ಸಿನಿಮಾ ಮಾಡಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT