ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ–ಬಾಸ್‌ಗೆ ದಾವಣಗೆರೆಯ ಬಾರೊಕ್ ಪಿಂಟೊ

Last Updated 1 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ವಾರ್ಮ್‌ಬ್ಲಡ್ ಹಾರ್ಸ್ ಹಾಗೂ ಫ್ರಸೀಯನ್ ಹಾರ್ಸ್‌ ಎಂಬೆರಡು ಬಗೆಗಳ ಮಿಶ್ರತಳಿಯಿಂದ ಜನಿಸಿದ ಬಾರೊಕ್ ಪಿಂಟೊ ಕುದುರೆಯನ್ನು ನಟ ದರ್ಶನ್ ದಾವಣಗೆರೆಯಿಂದ ಉಡುಗೊರೆಯಾಗಿ ಕೊಂಡೊಯ್ದರು. ‘ಗಂಗಾ’ ಎಂಬ ಹೆಸರಿನ ತಾಯಿ ಕುದುರೆಯ ಜತೆಗೆ ಒಂದು ತಿಂಗಳ ಮರಿಯೂ ಬೋನಸ್ಸಾಗಿ ಸಿಕ್ಕಿದ್ದು ವಿಶೇಷ.

ಈ ವಾರಾಂತ್ಯವನ್ನು ದರ್ಶನ್ ದಾವಣಗೆರೆ ಜಿಲ್ಲೆಯ ಭೇಟಿಗೆ ಮೀಸಲಿಟ್ಟಿದ್ದರು. ಅವರೊಟ್ಟಿಗೆ ನಟ ಚಿಕ್ಕಣ್ಣ ಕೂಡ ಇದ್ದರು. ಹಳದಿ ಲ್ಯಾಂಬೊರ್ಗಿನಿ ಕಾರಿನಲ್ಲಿ ಬಂದ ಅವರ ಝಲಕ್ ಪಡೆಯಲು ಸಹಜವಾಗಿಯೇ ಅಭಿಮಾನಿಗಳ ಪಡೆ ಬಾಪೂಜಿ ಅತಿಥಿ ಗೃಹದ ಬಳಿ ಜಮೆಯಾಗಿತ್ತು. ದರ್ಶನ್ ದರ್ಶನ ಭಾಗ್ಯ ಸಿಗದ ಅನೇಕರು ಅವರ ಕಾರನ್ನೇ ಸೆಲ್ಫಿಗೆ ಹಿನ್ನೆಲೆಯಾಗಿ ಬಳಸಿ ಖುಷಿಪಟ್ಟರು.

ಮಾಜಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಅವರಿಗೂ ಪ್ರಾಣಿಪ್ರೀತಿ. ಕುದುರೆಗಳ ಸಾಕಣೆಯಲ್ಲೂ ಆಸಕ್ತಿ. ಅವರ ಬಳಿ 22 ಕುದುರೆಗಳಿವೆ. ದಾವಣಗೆರೆಯ ಕಲ್ಲೇಶ್ವರ ಮಿಲ್‌ ಬಳಿ ಸಾಕಿರುವ ಅವನ್ನು ದರ್ಶನ್ ಆಸ್ಥೆಯಿಂದ ನೋಡಿದರು. ಅಲ್ಲಿದ್ದ ಕುದುರೆಗಳಲ್ಲಿ ಅವರಿಗೆ ಹೆಚ್ಚು ಮೆಚ್ಚುಗೆಯಾಗಿದ್ದು ಬಾರೊಕ್‌ ಪಿಂಟೊ. ಜರ್ಮನಿಯಿಂದ ತಂದಿದ್ದ ಈ ಕುದುರೆಯ ಬಾಲ ನೆಲದಿಂದ ಕೆಲವೇ ಇಂಚು ಮೇಲಿರುತ್ತದೆ. ಉದ್ದ ಬಾಲದ ಕುಚ್ಚಿನಂಥ ಕೂದಲುಗಳು ಆಕರ್ಷಕ. ಕಪ್ಪು–ಬಿಳಿಬಣ್ಣದ ಮಿರಮಿರ ಮಿಂಚುವ ದೇಹ. ನಿಲುವಿನಲ್ಲಿ ಗಾಂಭೀರ್ಯ. ಓಟದಲ್ಲೂ ಜೋರು. ಪಳಗಿಸುವವರ ಹಿಡಿತಕ್ಕೆ ಬಲುಬೇಗ ಒಳಪಡುತ್ತದೆ ಎನ್ನುವುದು ಈ ತಳಿ ಕುದುರೆಯ ವಿಶೇಷ.

‘ನಾನೇನೂ ಕುದುರೆ ಕೊಂಡುಕೊಳ್ಳಲು ಬರಲಿಲ್ಲ. ನೋಡಲು ಬಂದಿದ್ದೆ. ಮಲ್ಲಣ್ಣ ಪ್ರೀತಿಯಿಂದ ಅವನ್ನು ಕೊಟ್ಟರು’ ಎಂದು ದರ್ಶನ್ ಆನಂದತುಂದಿಲರಾಗಿ ಹೇಳಿದರು.

ರಾಜಸ್ಥಾನದ ಮಾರ್ವಾರಿ ತಳಿಯ ನಾಲ್ಕೈದು ಕುದುರೆಗಳು ಈಗಾಗಲೇ ಮೈಸೂರಿನಲ್ಲಿರುವ ದರ್ಶನ್ ಫಾರ್ಮ್ ಹೌಸ್‌ನಲ್ಲಿವೆ. ಈಗ ‘ಗಂಗಾ’ ಹೊಸ ಸೇರ್ಪಡೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಕೂಡ ಧಾರವಾಡದಲ್ಲಿ ನಾನಾ ತಳಿಯ ಕುದುರೆಗಳನ್ನು ಸಾಕಿದ್ದಾರೆ. ವರ್ಷಗಳ ಹಿಂದೆ ಪುಟ್ಟ ಕುದುರೆಯನ್ನು ಅವರೂ ದರ್ಶನ್‌ಗೆ ಉಡುಗೊರೆಯಾಗಿ ನೀಡಿದ್ದರು.

ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿರುವ ಶಾಮನೂರು ಶಿವಶಂಕರಪ್ಪ ಅವರ ಫಾರ್ಮ್‌ಹೌಸ್‌ಗೂ ಭೇಟಿ ನೀಡಿದ ದರ್ಶನ್ ಹಸು, ಕುರಿ, ಎತ್ತು, ಇತರ ಪ್ರಾಣಿಗಳ ಲಾಲನೆ ಪಾಲನೆಯ ಕುರಿತು ಮಾಹಿತಿ ಕಲೆ ಹಾಕಿದರು. ಮನೆಗೆ ಬಂದ ಜನಪ್ರಿಯ ಅತಿಥಿಗೆ ಮಲ್ಲಿಕಾರ್ಜುನ ಅವರು ಭರ್ಜರಿ ಉಡುಗೊರೆಯನ್ನೇ ನೀಡಿ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT