ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

84ರ ನಟ ಧರಮ್‌ಗೆ ಕೃಷಿ ಎಂದರೆ ಖುಷಿ!

Last Updated 3 ಸೆಪ್ಟೆಂಬರ್ 2020, 7:02 IST
ಅಕ್ಷರ ಗಾತ್ರ

ಬಾಲಿವುಡ್‌ನ ಮೊದಲ ಮತ್ತು ಏಕೈಕ ‘ಹೀ ಮ್ಯಾನ್’ ನಟ ಧರ್ಮೇಂದ್ರ ಅವರಿಗೆ ಈಗ ವಯಸ್ಸು 84. ಆದರೆ, ಅವರು ವೃದ್ಧಾಪ್ಯವನ್ನು ತಮ್ಮನ್ನು ಆವರಿಸಿಕೊಳ್ಳಲು ಕಿಂಚಿತ್ತೂ ಅವಕಾಶ ಮಾಡಿಕೊಟ್ಟಿಲ್ಲ. ‘ನಾನು ಇನ್ನೂ ಯುವಕ. ಎಲ್ಲರಂತೆ ದುಡಿಯುತ್ತೇನೆ. ಸಂತಸದಿಂದ ಇದ್ದೇನೆ’ ಎಂದು ಅವರು ಹೇಳುತ್ತಾರೆ. ಅವರ ಈ ಖುಷಿಗೆ ಕಾರಣ ಸಾವಯವ ಕೃಷಿ.

ಸದ್ಯಕ್ಕೆ ಅವರು ಚಲನಚಿತ್ರಗಳಲ್ಲಿ ನಟಿಸುತ್ತಿಲ್ಲ ಮತ್ತು ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿಲ್ಲ. ಆದರೆ, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ತಮ್ಮ ಉತ್ಸಾಹದ ಗುಟ್ಟು ಹಂಚಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಲೋನಾವಾಲಾ ಬಳಿ 100 ಎಕರೆ ಫಾರ್ಮ್ ಹೊಂದಿರುವ ಅವರು ಇಡೀ ದಿನ ಅಲ್ಲೇ ಕಳೆಯುತ್ತಾರೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಟೊಮೆಟೊ, ಹೂಕೋಸು, ಬದನೆಕಾಯಿ, ಕ್ಯಾಬೇಜ್, ಮಾವು ಸೇರಿದಂತೆ ಹಲವು ಬಗೆಯ ಹಣ್ಣು, ತರಕಾರಿಗಳನ್ನು ಬೆಳೆದಿರುವ ಅವರು ಫಾರ್ಮ್‌ನಲ್ಲಿ ದುಡಿಯುವ ಕೃಷಿ ಕಾರ್ಮಿಕರೊಂದಿಗೆ ಸ್ನೇಹದಿಂದ ಇರುತ್ತಾರೆ. ಬಾತುಕೋಳಿ, ನವಿಲುಗಳನ್ನು ಸಾಕಿರುವ ಅವರು, ‘ನನ್ನ ಪಾಲಿಗೆ ಕಾಯಕವೈ ಕೈಲಾಸ. ಇದರಲ್ಲೇ ನನಗೆ ಖುಷಿ’ ಎನ್ನುತ್ತಾರೆ.

ಕೊರೊನಾ ಲಾಕ್‌ಡೌನ್‌ನಿಂದ ಬಹುತೇಕ ಕಾರ್ಯಗಳು ಸ್ಥಗಿತಗೊಂಡರೂ ಧರ್ಮೇಂದ್ರ ಅವರು ಸುಮ್ಮನೆ ಕೂರಲು ಇಚ್ಛಿಸಲಿಲ್ಲ. ಕೃಷಿ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಂಡ ಅವರು ಅಭಿಮಾನಿಗಳು ಮತ್ತು ಆಪ್ತರ ಜೊತೆ ಸಂವಾದ ನಡೆಸಿದರು.

ಬಾಲಿವುಡ್‌ನ ಬಹುತೇಕ ಆ್ಯಕ್ಷನ್ ಪ್ಯಾಕ್ಡ್ ಚಿತ್ರಗಳಲ್ಲಿ ನಾಯಕನಟರಾಗಿ ಮಿಂಚಿದ ಅವರು ಕಹಿ ಘಟನೆಗಳನ್ನು ಮನದಲ್ಲಿ ಉಳಿಸಿಕೊಳ್ಳದೇ ತಮ್ಮ ಗುರಿಯತ್ತ ಮುನ್ನಡೆದರು. ಹಲವು ಸಮಸ್ಯೆ–ಸವಾಲುಗಳು ಎದುರಾದರೂ ಅದರ ಲೆಕ್ಕವನ್ನು ಅವರು ಇಡಲಿಲ್ಲ. ಎಲ್ಲರೊಂದಿಗೆ ಖುಷಿಯಿಂದ ಇರೋದೆ ನಿಜ ಜೀವನ ಎಂದು ತೋರಿಸಿಕೊಟ್ಟರು.

1935ರ ಡಿಸೆಂಬರ್‌ 8ರಲ್ಲಿ ಪಂಜಾಬ್‌ನ ನಸ್ರಾಲಿಯಲ್ಲಿ ಜನಿಸಿದ ಧರ್ಮೇಂದ್ರ ಅವರ ನಿಜವಾದ ಧರ್ಮಸಿಂಗ್ ಡಿಯೋಲ್. ಬಾಲಿವುಡ್‌ನಲ್ಲಿ ಆರಂಭಿಕ ಹಂತದಲ್ಲಿ ಹಲವು ಸೋಲುಂಡರೂ ಅವರು ದೃತಿಗೆಡಲಿಲ್ಲ. 1970ರ ದಶಕದಲ್ಲಿ ವಿಶ್ವದ 10 ಸುಂದರ ಪುರುಷರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು. 1997ರಲ್ಲಿ ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ ಗಳಿಸಿದ ಅವರು ರಾಜಸ್ತಾನದ ಬಿಕಾನೆರ್ ಲೋಕಸಭಾ ಕ್ಷೇತ್ರದ (2004–2009) ಬಿಜೆಪಿ ಸಂಸದರಾಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT