ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಣ’ನಿಗೆ ‘ಪ್ರಿಯ’ಳಾದ ರೀಷ್ಮಾ: ನಟಿ ರೀಷ್ಮಾ ನಾಣಯ್ಯ ಸಂದರ್ಶನ

Last Updated 10 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಕಿರಿ ವಯಸ್ಸಿನಲ್ಲೇ ತಮ್ಮೆರಡು ಸಿನಿಮಾಗಳು ತೆರೆಗೆ ಬಂದಿರೋ ಖುಷಿಯಲಿದ್ದಾರೆ ನಟಿ ರೀಷ್ಮಾ ನಾಣಯ್ಯ. ‘ರಾಣ’ ಸಿನಿಮಾ ಅವರ ಎರಡನೇ ಪ್ರಾಜೆಕ್ಟ್‌. ಕೀನ್ಯಾದ ‘ಬಾನದಾರಿಯಲ್ಲಿ’ ಸುತ್ತಿ ವ್ಲಾಗರ್‌ ಆಗಿ ಮರಳಿರುವ ರೀಷ್ಮಾ ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕರು...

ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ವರ್ಷದಲ್ಲೇ ಎರಡು ಸಿನಿಮಾ...

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಈ ರಂಗಕ್ಕೆ ಕಾಲಿಟ್ಟವಳು ನಾನು. ಏಳೆಂಟು ತಿಂಗಳ ಅಂತರದಲ್ಲೇ ನನ್ನ ಎರಡನೇ ಸಿನಿಮಾ ತೆರೆ ಕಾಣುತ್ತಿರುವುದಕ್ಕೆ ನಾನಂತೂ ಖುಷಿಯಾಗಿದ್ದೇನೆ. ಪ್ರೇಮ್‌ ಅವರು ನಿರ್ದೇಶಿಸಿದ ‘ಏಕ್‌ ಲವ್‌ ಯಾ’ ಸಿನಿಮಾಗೆ ನಾನು ಪ್ರವೇಶಿಸಿದಾಗ ನನಗೆ 17 ವರ್ಷ! ಸಿನಿಮಾದಲ್ಲಿ ನಟನೆಯ ಅವಕಾಶ ಎಲ್ಲರಿಗೂ ಸಿಗುವ ಭಾಗ್ಯವಲ್ಲ. ಅದೂ ಮೊದಲ ಸಿನಿಮಾವೇ ಖ್ಯಾತ ನಿರ್ದೇಶಕರ ಜೊತೆಗೆ. ಕಳೆದ ಫೆಬ್ರುವರಿಯಲ್ಲಿ ಈ ಸಿನಿಮಾ ಬಿಡುಗಡೆಯಾದಾಗ ನನಗೆ 18 ವರ್ಷ!

‘ಏಕ್‌ ಲವ್‌ ಯಾ’ ಪ್ರಚಾರದ ಸಂದರ್ಭದಲ್ಲಿ ‘ರಾಣ’ ಚಿತ್ರದ ಆಫರ್‌ ಬಂದಿತ್ತು. ನಿರ್ಮಾಪಕರಾದ ಮಂಜು ಹಾಗೂ ಗುಜ್ಜಲ್ ಪುರುಷೋತ್ತಮ್ ಅವರು ಭೇಟಿಯಾಗಿ ‘ರಾಣ’ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದರು. ತಮ್ಮ ಚಿತ್ರಕ್ಕಾಗಿ ಹೊಸ ಮುಖದ ಹುಡುಕಾಟದಲ್ಲಿ ಅವರಿದ್ದರು. ನಟ ರಾಣಾ(ಅಭಿಷೇಕ್‌) ಅವರೇ ನನ್ನ ಬಗ್ಗೆ ಚಿತ್ರತಂಡಕ್ಕೆ ತಿಳಿಸಿದ್ದರು. ಈ ವಯಸ್ಸಿನಲ್ಲೇ ಅವಕಾಶಗಳು ಅರಸಿ ಬರುತ್ತಿರುವುದು ಖುಷಿ ತಂದಿದೆ. ಸದ್ಯ ಜ್ಯೋತಿ ನಿವಾಸ್‌ ಕಾಲೇಜಿನಲ್ಲಿ ಬಿ.ಎ ಪತ್ರಿಕೋದ್ಯಮ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ನಡೆಯುತ್ತಿದೆ. ಓದಿನ ಜೊತೆಗೆ ಚಿತ್ರರಂಗದ ಹೆಜ್ಜೆ ಸಾಗಿದೆ.

‘ಏಕ್‌ ಲವ್‌ ಯಾ’ ಹಾಗೂ ‘ರಾಣ’ದಲ್ಲಿನ ರೀಷ್ಮಾಗೂ ಇರುವ ವ್ಯತ್ಯಾಸ...

ಈ ಎರಡೂ ಪಾತ್ರಗಳಿಗೂ ಬಹಳ ವ್ಯತ್ಯಾವಿದೆ. ‘ಏಕ್‌ ಲವ್‌ ಯಾ’ ಸಿನಿಮಾದಲ್ಲಿ ನನ್ನದು ಮುಗ್ಧ ಹುಡುಗಿಯ ಪಾತ್ರ. ಒಂದು ರೀತಿ ‘ಟಿಪಿಕಲ್‌ ಸಾಫ್ಟ್‌ ಹುಡ್ಗಿ’. ವಿದ್ಯಾರ್ಥಿನಿಯಾಗಿ, ಉದ್ಯೋಗಸ್ಥೆಯಾಗಿ ನಾನು ಅಲ್ಲಿ ಕಾಣಿಸಿಕೊಂಡಿದ್ದೆ. ನಾನು ಮೊದಲು ಕ್ಯಾಮೆರಾ ಮುಂದೆ ಕಾಣಿಸಿಕೊಂಡು ಸುಮಾರು ಮೂರು ವರ್ಷವಾಗುತ್ತಾ ಬಂದಿದೆ. ಹೀಗಾಗಿ ‘ರಾಣ’ ಸಿನಿಮಾದಲ್ಲಿ ಬಾಹ್ಯವಾಗಿ ಹಾಗೂ ನಟನೆಯಲ್ಲಿ ನನ್ನಲ್ಲಾದ ಬದಲಾವಣೆ ಗಮನಿಸಬಹುದು. ಈ ಸಿನಿಮಾದಲ್ಲಿ ‘ಪ್ರಿಯ’ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಆಕೆ ವರ್ತಮಾನದಲ್ಲಿ ಬದುಕುವ ಹುಡುಗಿ. ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತೆ ಇಲ್ಲದಾಕೆ. ಅವಳದ್ದು ನೇರ ನುಡಿ.

‘ಏಕ್‌ ಲವ್‌ ಯಾ’ ಅನುಭವ ನನ್ನ ಸಿನಿಪಯಣಕ್ಕೆ ದೊಡ್ಡ ತಿರುವು ನೀಡಿತ್ತು. ಏಕಾಏಕಿ ಬಂದೊದಗಿದ್ದ ಅವಕಾಶವದು. ಕ್ಯಾಮೆರಾ ಮುಂದೆ ನಿಲ್ಲುವುದು, ಸಂಭಾಷಣೆ ಹೀಗೆ ಎಲ್ಲವುದಕ್ಕೂ ಅದೇ ಸಿನಿಮಾ ವೇದಿಕೆ. ಪ್ರೇಮ್‌ ಅವರೇ ನನಗೂ ರಾಣಾ ಅವರಿಗೂ ಹೆಜ್ಜೆ ಹೆಜ್ಜೆಗೂ ತರಬೇತಿ ನೀಡಿದ್ದರು.

‘ರಾಣ’ ಚಿತ್ರೀಕರಣದ ಅನುಭವ...

ಚಿತ್ರದ ಟ್ರೈಲರ್‌ ನೋಡಿದರೆ ಇದೊಂದು ಆ್ಯಕ್ಷನ್‌ ಸಿನಿಮಾ ಎಂದು ಪ್ರೇಕ್ಷಕರಿಗೆ ಅನಿಸಬಹುದು. ಆದರೆ ಇದೊಂದು ಕಂಟೆಂಟ್‌ ಸಿನಿಮಾ. ಕಮರ್ಷಿಯಲ್‌ ಸ್ಪರ್ಶ ಈ ಸಿನಿಮಾಗಿದೆ. ಭಾವನಾತ್ಮಕ ದೃಶ್ಯಗಳು, ಹಾಸ್ಯ ಎಲ್ಲದರ ಮಿಶ್ರಣವೂ ಇಲ್ಲಿದೆ. ನಂದಕಿಶೋರ್‌ ಅವರ ಜೊತೆ ಕೆಲಸ ಮಾಡುವುದು ಒಳ್ಳೆಯ ಅನುಭವ. ಚಿತ್ರೀಕರಣದ ಸಮಯದಲ್ಲಿ ಸೆಟ್‌ ಅಲ್ಲಿ ಅವರು ಬಹಳ ಶಾಂತವಾಗಿರುತ್ತಾರೆ.(ನಗುತ್ತಾ) ಅದೇ ಪ್ರೇಮ್‌ ಅವರು ಜೋರಾಗಿದ್ದರು. ತಮಾಷೆ ಮಾಡಿಕೊಂಡು, ಬೈಯುತ್ತಾ ತಮ್ಮನ್ನು ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಶ್ರೇಯಸ್‌ ಒಬ್ಬ ಕಠಿಣ ಪರಿಶ್ರಮಿ. ಪ್ರತಿಯೊಂದು ದೃಶ್ಯವೂ ಚೆನ್ನಾಗಿರಬೇಕು ಎಂದು ಬಯಸುವವರು. ನಮ್ಮಿಬ್ಬರ ನಡುವಿನ ಕೆಮೆಸ್ಟ್ರಿಯೂ ಅದ್ಭುತವಾಗಿದೆ. ನಮ್ಮ ನಡುವೆ ಯಾವುದೇ ಅಹಂ ಇರಲಿಲ್ಲ. ದೃಶ್ಯಕ್ಕೆ ಜೀವತುಂಬಲು ಪರಸ್ಪರ ಮಾತನಾಡಿಕೊಂಡೇ ನಟಿಸುತ್ತಿದ್ದೆವು. ಇದರಿಂದ ಒಂದು ರೀತಿ ಸ್ಫೂರ್ತಿಯೂ ದೊರಕುತ್ತಿತ್ತು. ‘ಗಲ್ಲಿ ಬಾಯ್‌’ ಹಾಡಿನ ಚಿತ್ರೀಕರಣಕ್ಕೆ ಅದ್ಧೂರಿಯಾದ ಸೆಟ್‌ ಹಾಕಲಾಗಿತ್ತು. ಒಂದು ವಾರ ಈ ಹಾಡಿಗಾಗಿ ರಿಹರ್ಸಲ್‌ ಮಾಡಿ ಶೂಟಿಂಗ್‌ ನಡೆಸಿದ್ದೆವು. ಸ್ಪರ್ಧೆಗೆ ಇಳಿದವರಂತೆ ನಾವಿಲ್ಲಿ ಡ್ಯಾನ್ಸ್‌ ಮಾಡಿದ್ದೇವೆ.

ಕೀನ್ಯಾದ ‘ಬಾನದಾರಿ’ ಪಯಣ ಹೇಗಿತ್ತು?

ಅದೊಂದು ಲೈಫ್‌ಟೈಂ ಅನುಭವ. ನನ್ನ, ನಟರಾದ ಗಣೇಶ್‌ ಹಾಗೂ ರಂಗಾಯಣ ರಘು ಅವರ ಪಾತ್ರಗಳ ಚಿತ್ರೀಕರಣವಷ್ಟೇ ಕೀನ್ಯಾ ಸೇರಿದಂತೆ ಆಫ್ರಿಕಾದ ಕೆಲ ಭಾಗದಲ್ಲಿ ನಡೆದಿತ್ತು. ಕೇವಲ 22 ಜನ ಅಲ್ಲಿಗೆ ತೆರಳಿದ್ದೆವು. ‘ಇಬ್ಬರು ಮೇರು ಕಲಾವಿದರ ಜೊತೆಗೆ ನೀವಿದ್ದೀರಿ. ಹೇಗೆ ಗೆದ್ದು ತೋರಿಸುತ್ತೀರಿ ಎನ್ನುವುದು ನಿಮ್ಮ ಮೇಲಿದೆ’ ಎಂದು ನಿರ್ದೇಶಕರಾದ ಪ್ರೀತಂ ಗುಬ್ಬಿ ಹೇಳುತ್ತಿದ್ದರು. ನನಗೆ ಯಾವುದೇ ಒತ್ತಡ ಇರಲಿಲ್ಲ. ಇಬ್ಬರೂ ನನಗೆ ಮಾರ್ಗದರ್ಶಿಯಾಗಿದ್ದರು. ಅಲ್ಲಿನ ಚಿತ್ರೀಕರಣ ಅಡ್ವೆಂಚರಸ್‌ ಅನುಭವ. ತೆರೆದ ಜೀಪ್‌ನಲ್ಲಿ ಸಫಾರಿಗೆ ಹೋಗಿದ್ದೆವು. ಹದಿಮೂರು ದಿನ ನಾವಲ್ಲಿ ಕಳೆದಿದ್ದೆವು.

‘ಬಾನದಾರಿಯಲ್ಲಿ’ ಸಿನಿಮಾದಲ್ಲಿ ನಾನು ‘ಕಾದಂಬರಿ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಮೊದಲು ನನ್ನ ಪಾತ್ರ ವೈಲ್ಡ್‌ಲೈಫ್‌ ಫೋಟೊಗ್ರಾಫರ್‌ ಆಗಿತ್ತು. ಇದೀಗ ವ್ಲಾಗರ್‌ ಆಗಿ ಈ ಪಾತ್ರವನ್ನು ಬದಲಾಯಿಸಲಾಗಿದೆ. ಪ್ರತಿ ಹೆಜ್ಜೆಯನ್ನೂ ದಾಖಲಿಸುವ, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಪಾತ್ರವದು.

ಹೊಸ ಪ್ರಾಜೆಕ್ಟ್‌ಗಳು...

ಸದ್ಯ ಧನ್ವೀರ್‌ ಅವರ ಜೊತೆಗೆ ‘ವಾಮನ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ‘ಬಾನದಾರಿಯಲ್ಲಿ’ ಸಿನಿಮಾದ ಚಿತ್ರೀಕರಣ ಇನ್ನೊಂದೆರಡು ದಿನ ಬಾಕಿ ಇದೆ. ಹೊಸ ಆಫರ್‌ಗಳು ಬರುತ್ತಿದ್ದು, ಮಾತುಕತೆ ಅಂತಿಮವಾದ ಬಳಿಕ ಮಾಹಿತಿ ನೀಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT