ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲಾಮರ್‌ ಬೇಡ ಯಜ್ಞಾ @ 10

Last Updated 4 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

‘ಒಂದು ಪ್ರೀತಿಯ ಕಥೆ’ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದವರು ನಟಿ ಯಜ್ಞಾ ಶೆಟ್ಟಿ.

‘ಎದ್ದೇಳು ಮಂಜುನಾಥಾ..!’ ಚಿತ್ರದಲ್ಲಿ ಕುಡಿತಕ್ಕೆ ದಾಸನಾದ ಗಂಡನನ್ನು ತಿದ್ದಲು ಆಗದ ಅಸಹಾಯಕ ಗೃಹಿಣಿ. ‘ಕಿಲ್ಲಿಂಗ್‌ ವೀರಪ್ಪನ್‌’ ಸಿನಿಮಾದಲ್ಲಿ ನರಹಂತಕನ ಪತ್ನಿ ಮುತ್ತುಲಕ್ಷ್ಮಿ ಪಾತ್ರ. ‘ವಾರಸ್ದಾರ’ ಧಾರಾವಾಹಿಯಲ್ಲಿ ತ್ಯಾಗಮಯಿ ಅಮ್ಮ. ತೆಲುಗು ಭಾಷೆಯ ‘ಲಕ್ಷ್ಮಿಸ್‌ ಎನ್‌ಟಿಆರ್‌’ ಚಿತ್ರದಲ್ಲಿ ಎನ್‌.ಟಿ. ರಾಮರಾವ್‌ ಅವರ ಎರಡನೇ ಪತ್ನಿ ಲಕ್ಷ್ಮಿಪಾರ್ವತಿಯ ಪಾತ್ರ.

ಹೀಗೆ ವೃತ್ತಿಬದುಕಿನ ಒಂದು ದಶಕದ ಅವಧಿಯಲ್ಲಿ ಡಿಗ್ಲಾಮರಸ್‌ ಆಗಿಯೇ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ಖುಷಿ ಅವರದು.

ಯಜ್ಞಾ ಪಾತ್ರಗಳ ಆಯ್ಕೆಯಲ್ಲಿ ಸಾಕಷ್ಟು ಚ್ಯೂಸಿ. ಹಾಗಾಗಿಯೇ, ಅವರು ಇಲ್ಲಿಯವರೆಗೆ ನಟಿಸಿರುವ ಚಿತ್ರಗಳ ಸಂಖ್ಯೆ ಇಪ್ಪತ್ತು ದಾಟಿಲ್ಲ. ಸಿನಿಮಾ ಸಂಖ್ಯಾರೇಖೆ ಹೆಚ್ಚಳದ ಮೇಲೆ ಅವರಿಗೆ ಎಳ್ಳಷ್ಟು ನಂಬಿಕೆಯಿಲ್ಲ. ಚಿಕ್ಕಪಾತ್ರವಾದರೂ ಜನರ ಹೃದಯದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಎನ್ನುವುದು ಅವರ ಅಚಲ ನಂಬಿಕೆ.

‘ಸಿನಿಮಾಗಳನ್ನು ಎಷ್ಟು ಬೇಕಾದರೂ ಮಾಡಬಹುದು. ನಾವು ಒಪ್ಪಿಕೊಂಡರೆ ಸಂಖ್ಯೆಯೂ ಬೆಳೆಯುತ್ತಾ ಹೋಗುತ್ತದೆ. ಆದರೆ, ಈ ಸಂಖ್ಯೆಯ ಮೇಲೆ ನನಗೆ ಇಂಟರೆಸ್ಟ್‌ ಇಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಅಷ್ಟೇ. ಅದೇ ನನ್ನ ಜೀವನದ ಆಸೆ. ಗ್ಲಾಮರಸ್‌ ಪಾತ್ರಗಳು ಇಷ್ಟವಿಲ್ಲ. ಇಲ್ಲಿಯವರೆಗೆ ನಾನು ಡಿಗ್ಲಾಮರಸ್‌ ಪಾತ್ರಗಳನ್ನು ಮಾಡಿರುವುದೇ ಹೆಚ್ಚು. ನನ್ನ ಪ್ರತಿಭೆಯ ಅನಾವರಣಕ್ಕೆ ಅವು ಕನ್ನಡಿ ಹಿಡಿದಿವೆ. ಎಲ್ಲಾ ಚಿತ್ರಗಳಲ್ಲೂ ಇಷ್ಟಪಟ್ಟು ನಟಿಸಿದ್ದೇನೆ. ನಟಿಸಿರುವ ಪಾತ್ರಗಳು ಖುಷಿ ಕೊಟ್ಟಿವೆ. ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾಕ್ಕಷ್ಟೇ ನಾನು ಸೀಮಿತ. ನಾನು ನಿರ್ವಹಿಸುವ ಪಾತ್ರಗಳನ್ನು ಜನರು ಗುರುತು ಹಿಡಿಯಬೇಕು. ಡಿಗ್ಲಾಮರಸ್‌ ಪಾತ್ರಗಳಿಗೆಯೇ ನನ್ನ ಮೊದಲ ಆದ್ಯತೆ. ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಅವರು.

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದಲ್ಲಿ ಯಜ್ಞಾ ಕಾಡುಗಳ್ಳ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿಯ ಪಾತ್ರಕ್ಕೆ ಬಣ್ಣಹಚ್ಚಿದ್ದರು. ಈ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ನಾಲ್ಕು ವರ್ಷದ ಬಳಿಕ ಮತ್ತೆ ‘ಲಕ್ಷ್ಮೀಸ್‌ ಎನ್‌ಟಿಆರ್‌’ ಚಿತ್ರದ ಮೂಲಕ ಆರ್‌ಜಿವಿ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಅವರಿಗೆ ಖುಷಿ ನೀಡಿದೆಯಂತೆ.

ಈ ಸಿನಿಮಾದಲ್ಲಿ ಅವರು ಲಕ್ಷ್ಮಿಪಾರ್ವತಿಯ ಪಾತ್ರ ಪೋಷಿಸಿದ್ದಾರೆ. ಈ ಪಾತ್ರಕ್ಕಾಗಿ ಅವರು ಲಕ್ಷ್ಮಿಪಾರ್ವತಿಯ ಜೀವನ ಚರಿತ್ರೆಯನ್ನು ಓದಲಿಲ್ಲವಂತೆ. ಅವರ ಹಾವಭಾವದ ಅನುಕರಣೆಯನ್ನೂ ಮಾಡಿಲ್ಲವಂತೆ. ಸ್ಕ್ರಿಪ್ಟ್ ಓದಿ ಚಿತ್ರತಂಡ ನೀಡಿದ ಮಾರ್ಗದರ್ಶನದಂತೆ ನಟಿಸಿದ್ದಾರಂತೆ.

‘ನನಗೆ ತೆಲುಗು ಬರುವುದಿಲ್ಲ. ಚಿತ್ರದಲ್ಲಿ ಪುಟಗಟ್ಟಲೇ ಡೈಲಾಗ್‌ಗಳಿವೆ. ಒಂದೇ ಟೇಕ್‌ನಲ್ಲಿ ಎಲ್ಲವನ್ನೂ ಹೇಳಬೇಕಿತ್ತು. ಲಕ್ಷ್ಮಿಪಾರ್ವತಿ ತೆಲುಗು ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಗೋಲ್ಡ್‌ ಮೆಡಲ್‌ ಪಡೆದವರು. ಹಾಗಾಗಿ, ನನ್ನ ಭಾಷೆಯೂ ಅವರಷ್ಟೇ ಸ್ಪಷ್ಟವಾಗಿರಬೇಕಿತ್ತು. ಅದಕ್ಕಾಗಿಯೇ ಚಿತ್ರತಂಡ ನನಗೆ ಶೂಟಿಂಗ್‌ಗೂ ಮೊದಲು ಕಾರ್ಯಾಗಾರ ನಡೆಸಿತು. ಹಾಗಾಗಿ, ನಟನೆ ಸುಲಭವಾಯಿತು’ ಎಂದು ಮೆಲುಕು ಹಾಕುತ್ತಾರೆ.

‘ಆರ್‌ಜಿವಿ ಸರ್‌ ನನ್ನ ಮೇಲೆ ವಿಶ್ವಾಸವಿಟ್ಟು ಫರ್ಪಾಮೆನ್ಸ್‌ ನೀಡುವ ಪಾತ್ರ ನೀಡಿದರು. ಅದಕ್ಕೆ ನ್ಯಾಯ ಒದಗಿಸಿರುವ ತೃಪ್ತಿಯಿದೆ. ತೆಲುಗು ಸಿನಿಮಾ ಇಂಡಸ್ಟ್ರಿ ನನಗೆ ಹೊಸತು. ಆದರೆ, ಶೂಟಿಂಗ್‌ ವೇಳೆ ಆ ಅನುಭವ ಕಾಡಲಿಲ್ಲ. ಚಿತ್ರತಂಡದ ಟೀಂ ವರ್ಕ್‌ ಇದಕ್ಕೆ ಕಾರಣ’ ಎಂದು ನೆನಪಿಸಿಕೊಳ್ಳುತ್ತಾರೆ.

‘ಆಪರೇಷನ್‌ ನಕ್ಷತ್ರ’ದಲ್ಲೂ ಅವರದು ಪ್ರಧಾನ ಪಾತ್ರ. ಥ್ರಿಲ್ಲರ್‌ ಜಾನರ್ ಕಥೆ ಇದು. ಕನ್ನಡ ಮತ್ತು ತೆಲುಗಿನ ಹೊಸ ಚಿತ್ರಗಳಲ್ಲಿ ನಟಿಸಲು ಅವರಿಗೆ ಅವಕಾಶ ಬಂದಿದೆಯಂತೆ. ಇದು ಮಾತುಕತೆಯ ಹಂತದಲ್ಲಿದೆ. ‘ನಾನು ಯಾವುದೇ ಭಾಷೆಯಲ್ಲಿ ನಟಿಸಲು ಸಿದ್ಧ. ಬ್ಯಾರಿಕೇಡ್‌ ಹಾಕಿಕೊಂಡಿಲ್ಲ. ನನ್ನ ಪಾತ್ರ ಎರಡು ಅಥವಾ ಮೂರು ಗಂಟೆ ಬರಬೇಕು ಅನ್ನುವ ಆಸೆಯಿಲ್ಲ. ಅರ್ಧ ಗಂಟೆಯದಾಗಿದ್ದರೂ ಪ್ರೇಕ್ಷಕರಿಗೆ ಇಷ್ಟವಾಗಬೇಕು. ಆ ಪಾತ್ರ ಅವರಿಗೆ ಕಾಡಬೇಕು.ನನ್ನನ್ನು ಅವರು ಗುರುತು ಹಿಡಿಯಬೇಕು. ಅಂತಹ ಪಾತ್ರಗಳಿಗಷ್ಟೇ ನನ್ನ ಮೊದಲ ಆದ್ಯತೆ’ ಎನ್ನುವುದು ಯಜ್ಞಾ ಅವರ ದೃಢ ನಿರ್ಧಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT