ಆಗ ಆರತಿ ಈಗ ಅಧಿತಿ

ಶನಿವಾರ, ಮೇ 25, 2019
22 °C

ಆಗ ಆರತಿ ಈಗ ಅಧಿತಿ

Published:
Updated:
Prajavani

ಪುಟ್ಟಣ್ಣ ಕಣಗಾಲ್ ಅವರ 'ರಂಗನಾಯಕಿ’ ಸಿನಿಮಾ ನೆನಪಿಸುವಂತೆ ದಯಾಳ್‌ ಪದ್ಮನಾಭನ್‌ ಅವರ ನಿರ್ದೇಶನದಲ್ಲಿ ಮತ್ತೊಬ್ಬ ‘ರಂಗನಾಯಕಿ’ ರೂಪುಗೊಳ್ಳುತ್ತಿದ್ದಾಳೆ. ಹಗ್ಗದ ಕೊನೆ', 'ಆಕ್ಟರ್', 'ಆ ಕರಾಳ ರಾತ್ರಿ', 'ಪುಟ 109' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ದೇಶನ ಮಾಡುತ್ತಿರುವ ದಯಾಳ್ ಪ್ರೇಕ್ಷಕರಿಗೆ ‘ರಂಗನಾಯಕಿ’ಯ ಕಥೆ ಹೇಳಲಿದ್ದಾರೆ.

'ವಾಲ್ಯೂಮ್ 1-ವರ್ಜಿನಿಟಿ' ಸಬ್ ಟೈಟಲ್ ಇಟ್ಟುಕೊಂಡಿರುವ 'ರಂಗನಾಯಕಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಗಿತ್ತು. ಈಗ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ದೆಹಲಿಯ ನಿರ್ಭಯ ಘಟನೆಯನ್ನು ಈ ಸಿನಿಮಾ ಆಧರಿಸಿದೆ. ನಿರ್ಭಯ ಘಟನೆ ಆಧರಿಸಿ ‘ಜಾಸ್ಮಿನ್’ ಎನ್ನುವ ಚಿತ್ರವೊಂದು ಕೆಲವು ವರ್ಷಗಳ ಹಿಂದೆ ತೆರೆಕಂಡಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. 

ದಯಾಳ್‌ ಪದ್ಮನಾಭ್‌ ಮತ್ತು ಕಿರಣ್‌ ಆರ್‌.ಹೆಮ್ಮಿಗೆ ಅವರು ಕಿರುಕಾದಂಬರಿ ರೂಪ ನೀಡಿರುವ ‘ರಂಗನಾಯಕಿ’ ಪುಸ್ತಕವನ್ನು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಬಿಡುಗಡೆ ಮಾಡಿದರು.

‘38 ವರ್ಷಗಳ ಹಿಂದೆ ತೆರೆಕಂಡ ಇದೇ ಹೆಸರಿನ ಚಿತ್ರವು ಮಾಸ್ಟರ್ ಪೀಸ್ ಆಗಿದೆ. ಪವರ್‌ಫುಲ್‌ ಟೈಟಲ್‍ಗೆ ನ್ಯಾಯ ಒದಗಿಸುತ್ತೇನೆಂಬ ನಂಬಿಕೆ ಇದೆ. ನಿರ್ಭಯ ಘಟನೆ ಬಳಿಕ ಮನಸ್ಸಿನಲ್ಲಿ ಇದರ ಬಗ್ಗೆ ಕಾಡುತ್ತಲೆ ಇತ್ತು. ಅದಕ್ಕೆ ಅಕ್ಷರರೂಪ ಕೊಡಲು ಸಹಾಯಕ ಕಿರಣ್ ಆರ್.ಹೆಮ್ಮಿಗೆ ಬರಹರೂಪ ನೀಡಿದ್ದಾರೆ. ಅದುವೇ ಈ ಕಾದಂಬರಿ. ಸೋಮವಾರದಿಂದ ಚಿತ್ರೀಕರಣ ಶುರುವಾಗಿದ್ದು, ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ’ ಎಂದು ನಿರ್ದೇಶಕ ದಯಾಳ್‍ ಪದ್ಮನಾಭನ್ ಮಾಹಿತಿ ನೀಡಿದರು.

ನಾಯಕಿ ಪ್ರಧಾನ ‘ರಂಗನಾಯಕಿ’ಯಾಗಲಿರುವ ಅದಿತಿ ಪ್ರಭುದೇವ ಅವರು ‘ನಾಯಕಿ ಆಗುವ ಆಸೆ ಕೈಗೂಡಿದೆ. ನಟಿಯಾಗುವ ಕನಸು ಇದರ ಮೂಲಕ ಈಡೇರುತ್ತಿದೆ’ ಎಂದರು. ಅತ್ಯಾಚಾರಕ್ಕೆ ಒಳಗಾದ ಹುಡುಗಿ, ಸಮಾಜವನ್ನು ಹೇಗೆ ಎದುರಿಸುತ್ತಾಳೆ; ಕನ್ನಡಿ ಮುಂದೆ ನಿಂತು ಹೇಗೆ ಧೈರ್ಯ ತಂದುಕೊಳ್ಳುತ್ತಾಳೆಂಬುದನ್ನು ಸಂಗೀತ ಶಿಕ್ಷಕಿ ಪಾತ್ರ ಹೇಳಲಿದೆ ಎಂದರು ಅದಿತಿ.

ಎಸ್.ವಿ.ನಾರಾಯಣ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಿ.ರಾಕೇಶ್ ಛಾಯಾಗ್ರಾಹಣ, ಮಣಿಕಾಂತ್ ಕದ್ರಿ ಸಂಗೀತ, ನವೀನ್‍ಕೃಷ್ಣ ಸಂಭಾಷಣೆ ಇದೆ. ಶ್ರೀನಿ ಹಾಗೂ ತ್ರಿವಿಕ್ರಮ್ ನಾಯಕರಾಗಿ ನಟಿಸಿದ್ದಾರೆ. ಲಾಸ್ಯ, ಶಿವಮಣಿ, ವಿಕ್ಟರಿವಾಸು ಅವರು ತಾರಾಗಣದಲ್ಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !