ಮಂಗಳವಾರ, ಫೆಬ್ರವರಿ 25, 2020
19 °C

ಅಘೋರಿಗಳ ನಡುವೆ ಮದಗಜ ಗರ್ಜನೆ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

‘ಭರಾಟೆ’ ಸಿನಿಮಾದ ಬಳಿಕ ಶ್ರೀಮುರಳಿ ನಟಿಸುತ್ತಿರುವ ಹೊಸ ಚಿತ್ರ ‘ಮದಗಜ’. ‘ಅಯೋಗ್ಯ’ ಚಿತ್ರ ನಿರ್ದೇಶಿಸಿದ್ದ ಎಸ್. ಮಹೇಶ್‌ಕುಮಾರ್‌ ಅವರೇ ಇದನ್ನು ನಿರ್ದೇಶಿಸುತ್ತಿದ್ದಾರೆ. ಟೈಟಲ್‌ನಿಂದಲೇ ದೊಡ್ಡಮಟ್ಟದ ಸುದ್ದಿಯಾದ ಸಿನಿಮಾ ಇದು. ಅಂದಹಾಗೆ ಫೆ. 20ರಂದು ಮುಹೂರ್ತ ನೆರವೇರಿಸಲು ಚಿತ್ರತಂಡ ನಿರ್ಧರಿಸಿದೆ. ಮಾರನೇ ದಿನವೇ ಅಂದರೆ ಶಿವರಾತ್ರಿಯಂದು ವಾರಾಣಸಿಯಲ್ಲಿ ಶೂಟಿಂಗ್‌ ಶುರುವಾಗಲಿದೆ. ಹಬ್ಬದ ಅಂಗವಾಗಿ ಅಲ್ಲಿ ಎರಡು ದಿನಗಳ ಕಾಲ ಐದು ಸಾವಿರ ಅಘೋರಿಗಳ ನಡುವೆ ‘ಮದಗಜ’ ಘೀಳಿಡಲಿದೆಯಂತೆ.

‘ಅಯೋಗ್ಯ’ದಲ್ಲಿ ಕಾಮಿಡಿ ಕಥೆ ಹೇಳಿದ್ದ ನಿರ್ದೇಶಕರು ಇದರಲ್ಲಿ ತಾಯಿಯ ಸೆಂಟಿಮೆಂಟ್‌ ಮತ್ತು ಆ್ಯಕ್ಷನ್‌ ಕಥೆ ಹೇಳಲು ಸಜ್ಜಾಗಿದ್ದಾರೆ. ಹಾಗೆಂದು ಅವರು ಇದರಲ್ಲಿ ಸಂಪೂರ್ಣವಾಗಿ ಕಾಮಿಡಿಯನ್ನೂ ಬದಿಗೆ ಸರಿಸಿಲ್ಲವಂತೆ. ಚಿತ್ರದ ಬಗ್ಗೆ ಮಹೇಶ್‌ಕುಮಾರ್‌ ವಿವರಿಸುವುದು ಹೀಗೆ: ‘ವಾರಾಣಸಿಯಲ್ಲಿ ಶಿವರಾತ್ರಿಯಂದು ಸಾವಿರಾರು ಸಂಖ್ಯೆಯಲ್ಲಿ ಅಘೋರಿಗಳು ಸೇರುತ್ತಾರೆ. ಶಿವನ ವಿಗ್ರಹದ ಶೂಟಿಂಗ್‌ಗೆ ಅವಕಾಶವಿಲ್ಲ. ಆದರೆ, ದೇಗುಲದ ಮುಂದೆ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದೇವೆ. ಅಘೋರಿಗಳೊಟ್ಟಿಗೆಯೇ ಚಿತ್ರದ ಕಥೆಯೂ ತೆರೆದುಕೊಳ್ಳಲಿದೆ’ ಎಂದು ಮಾಹಿತಿ ನೀಡುತ್ತಾರೆ.

ಆಶಿಕಾ ರಂಗನಾಥ್

ಬಳಿಕ ಮೈಸೂರು, ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ. ಕರ್ನಾಟಕ ಮತ್ತು ತಮಿಳುನಾಡಿನ ಗಡಿಭಾಗದಲ್ಲಿರುವ ಹೊಗೇನಕಲ್‌ ಜಲಪಾತ ಪ್ರದೇಶದಲ್ಲೂ ಚಿತ್ರೀಕರಣಕ್ಕೆ ನಿರ್ಧರಿಸಲಾಗಿದೆ. ಆ ಪ್ರದೇಶ ಕಾವೇರಿ ವನ್ಯಜೀವಿಧಾಮಕ್ಕೆ ಸೇರುತ್ತದೆ. ಆದರೆ, ಅಲ್ಲಿನ ತಮಿಳುನಾಡು ಭಾಗದಲ್ಲಿ ಶೂಟಿಂಗ್‌ ನಡೆಸಲು ಅನುಮತಿ ಸಿಕ್ಕಿದೆಯಂತೆ.

‘ಭರಾಟೆ’ ಚಿತ್ರದಲ್ಲಿ ಕೌಟುಂಬಿಕ ದ್ವೇಷ, ಪ್ರೀತಿಯ ತಳಮಳ, ರಾಜಕೀಯದ ದೊಂಬರಾಟ, ಅನ್ನದಾತರ ಸಂಕಷ್ಟ, ಆ್ಯಕ್ಷನ್‌... ಎಲ್ಲವನ್ನೂ ಒಂದೇ ಕ್ಯಾನ್ವಾಸ್‌ನಲ್ಲಿ ಹೇಳಲಾಗಿತ್ತು. ‘ಮದಗಜ’ದಲ್ಲಿ ಶ್ರೀಮುರಳಿ ಅವರ ವರಸೆ ಸಂಪೂರ್ಣ ಬದಲಾಗಲಿದೆಯಂತೆ. ಅವರನ್ನು ಭಿನ್ನವಾಗಿ ತೋರಿಸುವ ಹಂಬಲ ನಿರ್ದೇಶಕರದ್ದು.

ಮತ್ತೊಂದೆಡೆ ಈ ಚಿತ್ರಕ್ಕೆ ಹೀರೊಯಿನ್‌ ಯಾರಾಗುತ್ತಾರೆ ಎಂಬ ಕುತೂಹಲ ಇತ್ತು. ಚಿತ್ರತಂಡ ರಚಿತಾರಾಮ್‌, ಅನುಪಮಾ ಪರಮೇಶ್ವರನ್‌, ಶ್ರೀನಿಧಿ ಶೆಟ್ಟಿ, ಆಶಿಕಾ ರಂಗನಾಥ್‌ ಅವರಲ್ಲಿ ಒಬ್ಬರನ್ನು ನಾಯಕಿಯಾಗಿ ಆಯ್ಕೆ ಮಾಡುವ ಕುರಿತು ಚರ್ಚಿಸಿತ್ತು. ಈ ನಡುವೆ ಶ್ರೀಮುರಳಿ, ‘ಆಶಿಕಾ ಅವರು ಮದಗಜ ಚಿತ್ರದಲ್ಲಿ ನಟಿಸಲಿದ್ದಾರೆ’ ಎಂದಿದ್ದರು. ಅವರ ಈ ಮಾತನ್ನು ನಿರ್ದೇಶಕರು ಅಲ್ಲಗಳೆದಿದ್ದಾರೆ. 

‘ಈ ನಾಲ್ವರೊಟ್ಟಿಗೆ ಮಾತುಕತೆ ನಡೆದಿದ್ದು ನಿಜ. ಆದರೆ, ಹೀರೊಯಿನ್‌ ಯಾರು ಎಂಬುದನ್ನು ಪೋಸ್ಟರ್‌ ಮೂಲಕ ಅಭಿಮಾನಿಗಳೇ ಗುರುತಿಸಲು ಅವಕಾಶ ಕಲ್ಪಿಸಲಿದ್ದೇವೆ’ ಎನ್ನುತ್ತಾರೆ ಅವರು.

ಟಾಲಿವುಡ್‌ನ ಖ್ಯಾತ ಖಳನಟ ಜಗಪತಿಬಾಬು ಇದರಲ್ಲಿ ನಟಿಸುತ್ತಿದ್ದಾರೆ. ಚಿಕ್ಕಣ್ಣ, ಸಿತಾರಾ ಕೂಡ ಮುಖ್ಯಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಉಮಾಪತಿ ಶ್ರೀನಿವಾಸ್‌ ಗೌಡ ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ಮಫ್ತಿ’ ಚಿತ್ರದಲ್ಲಿ ಕೈಚಳಕ ತೋರಿದ್ದ ನವೀನ್‌ಕುಮಾರ್‌ ಅವರೇ ಕ್ಯಾಮೆರಾದಲ್ಲಿ ಮದಗಜನ ಹೆಜ್ಜೆಗುರುತುಗಳನ್ನು ಸೆರೆ ಹಿಡಿಯಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು