ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯ ಸುತ್ತ ಸುತ್ತವ 'ಆನೆ ಬಲ'

Last Updated 31 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯು ಜನಪದ ಕ್ರೀಡೆಯಾಗಿದೆ. ಮಂಡ್ಯದ ಗ್ರಾಮೀಣರ ಬದುಕಿನಲ್ಲಿ ಈ ಸ್ಪರ್ಧೆ ಹಾಸುಹೊಕ್ಕಾಗಿದೆ. ಇದರ ಸುತ್ತವೇ ಗಾಂಧಿನಗರದಲ್ಲಿ ಸಿನಿಮಾವೊಂದು ನಿರ್ಮಾಣವಾಗಿದೆ. ಈ ಚಿತ್ರಕ್ಕೆ ‘ಆನೆ ಬಲ’ ಎಂದು ಹೆಸರಿಡಲಾಗಿದೆ.

ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದರ ಪೂರ್ವಭಾವಿಯಾಗಿ ಚಿತ್ರತಂಡ ಆಡಿಯೊ ಬಿಡುಗಡೆಗೊಳಿಸಿತು. ಒಂದೂವರೆ ದಶಕಗಳ ಕಾಲ ಚಿತ್ರತಂಡದಲ್ಲಿ ದುಡಿದ ಅನುಭವ ಇರುವ ಸೂನಗಹಳ್ಳಿ ರಾಜು ಈ ಚಿತ್ರ ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಚಿತ್ರವೂ ಹೌದು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.

ಯುವಕರ ಗುಂಪೊಂದು ಊರಿನ ಆಗುಹೋಗುಗಳಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುತ್ತದೆ. ಒಮ್ಮೆ ಗ್ರಾಮದಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ನಡೆಯುತ್ತದೆ. ಆಗ ಊರಿನ ಮರ್ಯಾದೆ ಹೋಗುವ ಸಂದರ್ಭ ಎದುರಾಗುತ್ತದೆ. ಅದನ್ನು ಆ ಯುವಪಡೆ ಹೇಗೆ ಕಾಪಾಡುತ್ತದೆ ಎನ್ನುವುದೇ ಈ ಚಿತ್ರದ ಕಥಾಹಂದರ. ಇನ್ನೂರಕ್ಕೂ ಹೆಚ್ಚು ಲೊಕೇಶನ್‌ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. 120ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸಿರುವುದು ವಿಶೇಷ.

‘ಕನ್ನಡ ಸಿನಿಮಾಗಳಲ್ಲಿ ರಾಗಿ ಮುದ್ದೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾಗಳು ನಿರ್ಮಾಣಗೊಂಡಿರುವುದು ವಿರಳ. ಮಂಡ್ಯ ಜನರ ಬದುಕಿನ ಚಿತ್ರಣ, ಪ್ರಾಕೃತಿಕ ಸೌಂದರ್ಯ, ಜನಪದ ಸಂಸ್ಕೃತಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ’ ಎಂದರು ಸೂನಗಹಳ್ಳಿ ರಾಜು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ‘ಇಡೀ ಚಿತ್ರದಲ್ಲಿ ಭಾಷೆಯ ವಿಚಾರ ಮತ್ತು ಅದರ ಸತ್ವ ತುಂಬಿಕೊಂಡಿದೆ. ಪ್ರತಿ ಸನ್ನಿವೇಶದಲ್ಲಿ ಮುಗ್ಧತೆ ಮತ್ತು ಪ್ರಾಮಾಣಿಕತೆ ಕಾಣುತ್ತದೆ’ ಎಂದು ಅನುಭವ ಹಂಚಿಕೊಂಡರು.

ಸಾಗರ್ ಈ ಚಿತ್ರದ ನಾಯಕ. ಜನ‍‍ಪದ ಸಂಸ್ಕೃತಿಯನ್ನು ಉಳಿಸುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರಂತೆ. ಜಾನಪದ ವಿದ್ವಾಂಸ ಎಚ್‌.ಎಲ್‌. ನಾಗೇಗೌಡ ಅವರ ಪ್ರಭಾವ ಈ‍ಪಾತ್ರದ ಮೇಲೆ ದಟ್ಟವಾಗಿ ಮೇಳೈಸಿದೆಯಂತೆ.

ಹಳ್ಳಿಯ ಜಂಬದ ಹುಡುಗಿಯ ಪಾತ್ರಕ್ಕೆ ರಕ್ಷಿತಾ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ಜೆ.ಟಿ. ಬೆಟ್ಟೇಗೌಡ ಕೀಲಾರ ಅವರದು.ಗೌತಂ, ಚಿರಂಜೀವಿ, ಹರೀಶ್‍ ಶೆಟ್ಟಿ, ಕೀಲಾರ ಉದಯ್, ಸುಮಾ, ರೂಪಾ, ಮುತ್ತುರಾಜು ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT